ಚಿಕ್ಕಮಗಳೂರು: ವರ್ಷಗಳೇ ಕಳೆದರೂ ನಗರದ ದಂಟರಮಕ್ಕಿ ಕೆರೆ ಬಳಿ ಕಡೂರು–ಚಿಕ್ಕಮಗಳೂರು ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಟ್ಯೂಬಲರ್ ಕಂಬಗಳಿಗೆ ಬೆಳಕಿನ ಭಾಗ್ಯ ಇಲ್ಲ. ರಸ್ತೆ ಮಾರ್ಗದ ಉದ್ದಕ್ಕೂ ರಾತ್ರಿ ಸಂಪೂರ್ಣ ಕತ್ತಲೆ ಆವರಿಸಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿ ಅಪಘಾತಕ್ಕೆ ಕಾರಣವಾಗುತ್ತಿದೆ.
ನಗರದ ಬೇಲೂರು–ಹಿರೇಮಗಳೂರು ರಸ್ತೆ, ಕೆ.ಎಂ. ರಸ್ತೆ, ಎಂ.ಜಿ ರಸ್ತೆ ಒಳಗೊಂಡಂತೆ ನಗರ ವ್ಯಾಪ್ತಿಯಲ್ಲಿ ವರ್ಷದ ಅವಧಿಯಲ್ಲಿ ಒಟ್ಟು 136 ಅಪಘಾತ ಪ್ರಕರಣಗಳು ನಗರ ಸಂಚಾರಿ ಠಾಣೆಯಲ್ಲಿ ದಾಖಲಾಗಿವೆ. ಈ ಪೈಕಿ ಕೆ.ಎಂ. ರಸ್ತೆಯಲ್ಲಿಯೇ 17 ಪ್ರಕರಣಗಳು ದಾಖಲಾಗಿದ್ದು, ಬಹುತೇಕ ಮೋಟಾರ್ ಬೈಕ್ ಪಾದಚಾರಿಗೆ ಡಿಕ್ಕಿ ಹಾಗೂ ಕಾರು ಅಪಘಾತಗಳೇ ಹೆಚ್ಚು.
ಸುಮಾರು ಒಂದೂವರೆ ವರ್ಷದ ಹಿಂದೆ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಚಿಕ್ಕಮಗಳೂರು–ಕಡೂರು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗಿದೆ. ಅಂದು ರಸ್ತೆ ವಿಸ್ತರಣೆ ನೆಪದಲ್ಲಿ ಬದಿಯಲ್ಲಿದ್ದ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲಾಗಿತ್ತು. ಈಗ ಹೊಸದಾಗಿ ಕಂಬಗಳನ್ನು ಅಳವಡಿಸಿದ್ದರೂ ನಗರ ವ್ಯಾಪ್ತಿಯ ಕತ್ರಿಮಾರಮ್ಮ ದೇವಾಲಯದ ಮಾರ್ಗದಿಂದ ಎಪಿಎಂಸಿ, ಹೌಸಿಂಗ್ ಬೋರ್ಡ್, ಕಣಿವೆ ರುದ್ರೇಶ್ವರ ದೇವಾಲಯದ ತನಕ ರಸ್ತೆ ಬದಿಯಲ್ಲಿ ಯಾವುದೇ ಬೀದಿ ದೀಪಗಳಿಲ್ಲ. ಈ ಮೂಲಕ ನಗರವನ್ನು ಕತ್ತಲೆಯಲ್ಲಿ ಇಡಲಾಗಿದೆ.
ನಗರ ವ್ಯಾಪ್ತಿಯ ಹೆದ್ದಾರಿಯಲ್ಲಿ ಟ್ಯೂಬಲರ್ ಕಂಬಕ್ಕೆ ವಿದ್ಯುತ್ ದೀಪ, ಹೈಮಾಸ್ಟ್ ಅಳವಡಿಸಲು ನಗರೋತ್ಥಾನ ಹಂತ 4ರ ಯೋಜನೆಯಡಿ ಈ ಹಿಂದೆ ಎರಡು ಬಾರಿ ಇ–ಟೆಂಡರ್ ಆಹ್ವಾನಿಸಲಾಗಿತ್ತು. ಆದರೆ, ಟೆಂಡರ್‌ದಾರರ ಅನರ್ಹತೆ, ತಾಂತ್ರಿಕತೆ ಆಕ್ಷೇಪಣೆ ಕಾರಣಗಳಿಂದ ಟೆಂಡರ್ ಪ್ರಕ್ರಿಯೆ ಸಾಧ್ಯವಾಗದೆ ಸರ್ಕಾರದ ಹಂತ ತಲುಪಿತ್ತು. ಬಳಿಕ ಸರ್ಕಾರ ಟೆಂಡರ್ ಹಿಂಪಡೆದಿತ್ತು. ಈಗ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಶಾಸಕರ ಸಭೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮರು ಟೆಂಡರ್ ಕರೆಯಲು ಪ್ರಸ್ತಾವ ಸಲ್ಲಿಸಲಾಗಿದೆ. ಅನುಮೋದನೆ ಸಿಕ್ಕ ಬಳಿಕ ವಿದ್ಯುತ್ ದೀಪಗಳ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಎಂಜಿನಿಯರ್ ಶೇಖರಪ್ಪ ಎಸ್.ಮತ್ತಿಕಟ್ಟೆ ‘ಪ್ರಜಾವಾಣಿ’ಗೆ ತಿಳಿಸಿದರು.
ಸದ್ಯ ಜಿಲ್ಲೆಯಲ್ಲಿ ದತ್ತ ಜಯಂತಿ ಆರಂಭವಾಗಿದ್ದು, ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಶೋಭಾಯಾತ್ರೆಗೆ ಬರುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಬೈಕ್, ಕಾರು, ಬಸ್‌ಗಳು ಸೇರಿ ಹಲವು ವಾಹನಗಳಲ್ಲಿ ಬರುವ ನಿರೀಕ್ಷೆ ಇದೆ. ರಾತ್ರಿ ಸಮಯ ಆ ಮಾರ್ಗದಲ್ಲಿ ವಾಹನಗಳು ವೇಗವಾಗಿ ಸಂಚರಿಸುವ ಕಾರಣ ಪಾದಚಾರಿಗಳು ಜೀವ ಬಿಗಿ ಹಿಡಿದು ಸಂಚರಿಸಬೇಕಾದ ಸ್ಥಿತಿ ಇದೆ. ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.
ನಗರಸಭೆಯಿಂದ ಎಲ್‌ಇಡಿ ಬೀದಿ ದೀಪಗಳ ಅಳವಡಿಸಲು ಟೆಂಡರ್ ಆಹ್ವಾನಿಸಲಾಗಿತ್ತು. ರದ್ದಾದ ಕಾರಣ ಜಿಲ್ಲಾ ನಗರಾಭಿವೃದ್ಧಿ ಕೋಶಕ್ಕೆ ವಹಿಸಲಾಗಿದೆ. ನಗರದಲ್ಲಿ ಸದ್ಯ ಹಳೆಯ ವಿದ್ಯುತ್ ಕಂಬಗಳಿಗೆ ಮಾತ್ರ ದೀಪಗಳನ್ನು ಅಳವಡಿಸಲಾಗಿದೆ. ಬೋಳರಾಮೇಶ್ವರ ದೇವಾಲಯದಿಂದ ಕತ್ರಿಮಾರಮ್ಮ ದೇಗುಲದವರೆಗೂ ನಗರಸಭೆಯಿಂದ ಎಲ್‌ಇಡಿ ದೀಪ ಅಳವಡಿಸಲು ₹50 ಲಕ್ಷ ಮೊತ್ತದ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ ಎಂದು ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಹೇಳಿದರು.
ವ್ಯಾಪಾರ ವಹಿವಾಟಿಗೆ ಅನುಕೂಲವಾಗುವಂತೆ ಸೂಕ್ತ ಜಾಗ ಗುರುತಿಸಿ ಲಾರಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈವರೆಗೂ ಯಾವುದೇ ಕ್ರಮವಾಗಿಲ್ಲಜಿ.ಕೆ.ಶಿವಾನಂದ್ ಚಿಕ್ಕಮಗಳೂರು ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ
ಸಂಚಾರ ನಿಯಮ ಪಾಲನೆ ಪ್ರತಿ ಸವಾರನ ಜವಾಬ್ದಾರಿ. ಉಲ್ಲಂಘನೆಯಾದಾಗ ಅಪಘಾತಗಳು ಹೆಚ್ಚಾಗಲಿವೆ. ಕೆ.ಎಂ. ರಸ್ತೆಯಲ್ಲಿ ವಿದ್ಯುತ್ ದೀಪಗಳಿಲ್ಲದಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆಅವಿನಾಶ್ಗೌಡ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನಗರ ಸಂಚಾರ ಠಾಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.