ಮೂಡಿಗೆರೆ: ಪಟ್ಟಣದ ಬಸ್ ನಿಲ್ದಾಣದ ಪಕ್ಕದಲ್ಲಿರುವ ತತ್ಕೊಳ ರಸ್ತೆಯಲ್ಲಿ ವಾಹನದ ದಟ್ಟಣೆ ಸಾಮಾನ್ಯವಾಗಿದ್ದು, ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಆಸ್ಪತ್ರೆ, ಶಾಲೆ, ಅಂಬೇಡ್ಕರ್ ಭವನ ಸೇರಿದಂತೆ ಹಲವು ಪ್ರಮುಖ ಕೇಂದ್ರಗಳಿಗೆ ತತ್ಕೊಳ ರಸ್ತೆಯ ಮೂಲಕವೇ ಸಾಗಬೇಕು. ಹುಲ್ಲೇಮನೆ, ಎಸ್ಟೇಟ್ ಕುಂದೂರು, ಭೈರಿಗದ್ದೆ, ಭಟ್ರುಗದ್ದೆ, ಕಣಗದ್ದೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಇದಾಗಿದ್ದು, ಸಂಚಾರ ದಟ್ಟಣೆಯಿಂದ ಜನರು ಹೈರಾಣಾಗಿದ್ದಾರೆ. ಶಾಲೆ ಪ್ರಾರಂಭವಾಗುವಾಗ ಸಮಯ ಹಾಗೂ ಶಾಲೆ ಬಿಡುವ ಸಮಯದಲ್ಲಂತೂ ವಾಹನಗಳು ಸಾಲುಗಟ್ಟಿ ರಸ್ತೆಯಲ್ಲಿ ನಿಲ್ಲಬೇಕಿದೆ. ವಾಹನ ದಟ್ಟಣೆಗೆ ಹೆದರಿ, ಈ ಮಾರ್ಗದಲ್ಲಿ ಬಾಡಿಗೆಗೆ ಬರಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ.
‘ರಸ್ತೆಯ ಒಂದು ಬದಿಯಲ್ಲಿ ವಾಹನಗಳ ನಿಲುಗಡೆ ಮಾಡಲಾಗುತ್ತದೆ. ಇದರಿಂದ ಎರಡು ವಾಹನಗಳು ಏಕಕಾಲದಲ್ಲಿ ಸಂಚರಿಸಲಾಗದೇ ವಾಗ್ವಾದ, ಅಪಘಾತ ಸಾಮಾನ್ಯವಾಗಿದೆ. ಬಸ್ ನಿಲ್ದಾಣದಿಂದ ಹೊಯ್ಸಳ ಕ್ರೀಡಾಂಗಣದ ತಿರುವಿನವರೆಗೂ ಏಕಮುಖ ರಸ್ತೆಯನ್ನಾಗಿಸಿ, ಗ್ರಾಮೀಣ ಭಾಗದಿಂದ ಬರುವ ವಾಹನಗಳು ಹೊಯ್ಸಳ ಕ್ರೀಡಾಂಗಣದ ಪಕ್ಕದ ರಸ್ತೆಯ ಮೂಲಕ ಕಾಲೇಜು ರಸ್ತೆಗೆ ತಲುಪಿ ಬಸ್ ನಿಲ್ದಾಣಕ್ಕೆ ಬಂದರೆ ವಾಹನ ದಟ್ಟಣೆ ಕಡಿಮೆಯಾಗುತ್ತದೆ’ ಎನ್ನುವುದು ಸ್ಥಳೀಯರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.