ರಂಭಾಪುರಿ ಪೀಠ-(ಬಾಳೆಹೊನ್ನೂರು): ‘ಶ್ರಾವಣ ಮಾಸ ಶಿವ ಭಕ್ತರಿಗೆ ಪವಿತ್ರವಾದ ಮಾಸ. ಪೀಠ, ಮಠ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ಶಿವನ ಆರಾಧನೆ ನಡೆದುಕೊಂಡು ಬರುತ್ತಿವೆ. ಶಿವನೆಂದರೆ ಮಂಗಳದಾಯಕ. ಸುಖ, ಶಾಂತಿ ಬದುಕಿಗೆ ಶಿವನ ಪೂಜೆ ಆರಾಧನೆ ಬಹು ಮುಖ್ಯ’ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.
ಪೀಠದಲ್ಲಿ 31ನೇ ವರ್ಷದ ಶ್ರಾವಣ ಮಾಸ ತಪೋನುಷ್ಠಾನದ ಅಂಗವಾಗಿ ನಡೆದ ‘ಜಗದ್ಗುರು ರೇಣುಕ ವಿಜಯ‘ ಪುರಾಣ ಪ್ರವಚನ ಸಮಾರಂಭದಲ್ಲಿಅವರು ಮಾತನಾಡಿದರು.
‘ಒಳಿತಿನತ್ತ ಹೆಜ್ಜೆ ಹಾಕುವ ಗುರಿ ಎಲ್ಲರದಾಗಬೇಕು. ಬದುಕು ಎಷ್ಟೇ ಸಂಕಷ್ಟದಿಂದ ಕೂಡಿದ್ದರೂ ಬದುಕಿನ ಬೆಲೆ ಬಲು ದೊಡ್ಡದು. ಆಧ್ಯಾತ್ಮ ಚಿಂತನೆಗಳಿಂದ ಬದುಕು ಸಮೃದ್ಧಗೊಳ್ಳಲಿದೆ. ವೀರಶೈವ ಧರ್ಮ ಮೌಲ್ಯಯುತ ತತ್ವಗಳ ಅನುಸಂಧಾನದಿಂದಾಗಿ ಪ್ರಸಿದ್ಧಿ ಪಡೆದಿದೆ. ಜೀವನ ವಿಕಾಸಕ್ಕೆ ಸಂಸ್ಕಾರ ಬಲು ಮುಖ್ಯ. ನಿನ್ನೆ ಸುಖವಿತ್ತೆಂದು ಇತಿಹಾಸ ಹೇಳುತ್ತದೆ. ನಾಳೆ ಸುಖ ಇರುವುದೆಂದು ವಿಜ್ಞಾನ ಹೇಳುತ್ತದೆ. ಸತ್ಯ ಮತ್ತು ಪ್ರಾಮಾಣಿಕ ಬದುಕಿನ ಆಚರಣೆಯಿಂದ ನಿತ್ಯ ಸುಖವಿದೆ ಎಂದು ಆಧ್ಯಾತ್ಮ ಹೇಳುತ್ತದೆ. ಸಮಾಜದಲ್ಲಿ ಎಷ್ಟಾದರೂ ಸಂಘಟನೆಗಳು ಇರಲಿ. ಆದರೆ ಪರಸ್ಪರ ಸಂಘರ್ಷಗಳು ಉಂಟಾಗಬಾರದು’ ಎಂದರು.
ರೇಣುಕಾಚಾರ್ಯ ಗುರುಕುಲದ ಕುಲಪತಿ ಗಂವ್ಹಾರ, ಹಿರೇಮಠದ ವಿರೂಪಾಕ್ಷ ದೇವರು, ಅಕ್ಕಲಕೋಟಿ ತಾಲ್ಲೂಕಿನ ಬಬಲಾದ ಹಿರೇಮಠದ ದಾನಯ್ಯ ದೇವರು, ರವುಡಕುಂದ ಸ್ವಾಮೀಜಿ, ಗಂಗಾಧರಸ್ವಾಮಿ ಹಿರೇಮಠ, ಶಿಕ್ಷಕ ವೀರೇಶ ಕುಲಕರ್ಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.