ADVERTISEMENT

ಮಲೆನಾಡಿನಲ್ಲಿ ಬತ್ತಿ ತೆವಳುತ್ತೀರುವ ತುಂಗಾನದಿ

​ಪ್ರಜಾವಾಣಿ ವಾರ್ತೆ
Published 30 ಮೇ 2023, 20:30 IST
Last Updated 30 ಮೇ 2023, 20:30 IST
ಶೃಂಗೇರಿಯಲ್ಲಿ ಬತ್ತಿಹೋದ ತುಂಗಾನದಿ ದಡದಲ್ಲಿ ವಾಸನೆ ತಾಳಲಾಗುವುದಿಲ್ಲ. ತುಂಗಾನದಿ ಹಳ್ಳದಂತೆ ಹರಿಯುತ್ತಿದ್ದು, ನದಿಪಾತ್ರದಲ್ಲಿ ಪ್ಲಾಸ್ಟಿಕ್ ಕಸ ಬಿದ್ದಿದೆ
ಶೃಂಗೇರಿಯಲ್ಲಿ ಬತ್ತಿಹೋದ ತುಂಗಾನದಿ ದಡದಲ್ಲಿ ವಾಸನೆ ತಾಳಲಾಗುವುದಿಲ್ಲ. ತುಂಗಾನದಿ ಹಳ್ಳದಂತೆ ಹರಿಯುತ್ತಿದ್ದು, ನದಿಪಾತ್ರದಲ್ಲಿ ಪ್ಲಾಸ್ಟಿಕ್ ಕಸ ಬಿದ್ದಿದೆ   

ರಾಘವೇಂದ್ರ ಕೆ.ಎನ್

ಶೃಂಗೇರಿ: ಕಳೆದ ವರ್ಷ ಶೃಂಗೇರಿಯಲ್ಲಿ 4,124.2 ಮಿ.ಮೀ ಮಳೆಯಾಗಿದೆ. ಆದರೂ ನದಿ ಈಗ ಬತ್ತಿ ಹೋಗಿ ನದಿಪಾತ್ರದಲ್ಲಿ  ಪ್ಲಾಸ್ಟಿಕ್ ಕಸ ರಾಶಿ ಬಿದ್ದಿದೆ.

ಮುಂಗಾರಿನಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುವುದರಿಂದ ತುಂಗಾ ನದಿ ಮಳೆಗಾಲದಲ್ಲಿ ತುಂಬಿ ಹರಿಯುತ್ತವೆ. ಆದರೆ ಈ ವರ್ಷ ಬೇಸಿಗೆ ಮಳೆ ಆಗದಿರುವ ಕಾರಣ ನದಿ ಬತ್ತಿ ಹೋಗಿದೆ. ನದಿ ನೀರಿನ ಬಳಕೆ ಈಗ ಗಣನೀಯವಾಗಿ ಹೆಚ್ಚಿದೆ. ವಿದ್ಯುತ್‌ ಪಂಪ್‍ಗಳು ಬಂದ ನಂತರ ನೀರಿನ ಬಳಕೆ ಅತಿಯಾಗಿದೆ. ಕಡು ಬೇಸಿಗೆಯಲ್ಲಿ ಕಾಲು ಭಾಗಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಹರಿಯುವ ತುಂಗಾನದಿಯು, ಶೃಂಗೇರಿಯಿಂದ ಹಿಡಿದು ಬಯಲು ಸೀಮೆಯ ದಾವಣಗೆರೆವರೆಗಿನ ಅನೇಕ ಪೇಟೆ, ಪಟ್ಟಣ, ಊರುಗಳಿಗೆ ಕುಡಿಯುವ ನೀರಿನ ಏಕೈಕ ಆಶ್ರಯವಾಗಿದೆ.

ADVERTISEMENT

ಬೇಸಿಗೆಯಲ್ಲಿ ಕೃಷಿಗೆ ಪಂಪ್‍ಗಳ ಮೂಲಕ ಯಥೇಚ್ಛವಾಗಿ ನೀರು ಬಳಕೆಯಾಗುತ್ತಿದೆ. ಹೊಳೆಯ ನೀರು ಎಷ್ಟು ಪ್ರಮಾಣದಲ್ಲಿ ಎತ್ತಲಾಗುತ್ತದೆ ಎಂದು ಅಂದಾಜು ಮಾಡಬೇಕಾದರೆ ಬೇಸಿಗೆಯಲ್ಲಿ ಮಳೆ ಬರಬೇಕು. ಮಳೆ ಬಂದ ಮಾರನೇ ದಿನ ತುಂಗಾನದಿ ನೀರಿನ ಪ್ರಮಾಣ ದುಪ್ಪಟ್ಟಾಗುತ್ತದೆ.

ಕಳೆದ ವರ್ಷಗಳ ಬರಗಾಲದ ಸಂದರ್ಭಗಳಲ್ಲಿ ಜಿಲ್ಲಾಡಳಿತ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ ಎಂದು ಅನೇಕ ಕೃಷಿ ಪಂಪ್ ಸೆಟ್‌ಗಳನ್ನು ನಿರ್ಬಂಧಿಸಿತ್ತು. ಪಂಪ್‍ಗಳಲ್ಲಿ ನೀರನ್ನು ಎತ್ತಿ, ಹರಿಯುವ ಹೊಳೆಯನ್ನೇ ಬತ್ತಿಸುವಷ್ಟು ನೀರಿನ ಬಳಕೆ ಕಾಣಿಸುತ್ತಿದೆ. 2015ರಿಂದ ತುಂಗಾನದಿ ತೀರ್ಥಹಳ್ಳಿ ತಾಲ್ಲೂಕಿನ ತೂದೂರಿನಿಂದ ಮುಂದೆ ನೀರು ಹರಿಯಲಿಲ್ಲ. ತುಂಗಾನದಿಯ ಈಗಿನ ಸ್ಥಿತಿಯನ್ನು ನೋಡಿದರೆ ತೀರ್ಥಹಳ್ಳಿಗಿಂತ ಮುಂಚೆಯೇ, ಸದ್ಯದಲ್ಲೇ ನೀರು ಹರಿಯುವುದು ನಿಲ್ಲಿಸಬಹುದೆಂಬ ಆತಂಕ ಕಾಡುತ್ತಿದೆ.

ಸಾಮಾನ್ಯವಾಗಿ ಮಳೆಗಾಲದ ನಂತರ ಡಿಸೆಂಬರ್ ತಿಂಗಳಲ್ಲಿ ಜನರು ನದಿಯನ್ನು ನಡೆದುಕೊಂಡು ದಾಟುತ್ತಿದ್ದರು. 3 ವರ್ಷಗಳಿಂದ ನೀರಿನ ಪ್ರಮಾಣವು ಅಕ್ಟೋಬರ್ ತಿಂಗಳಿನಲ್ಲಿಯೇ ದಾಟಬಹುದಾದಷ್ಟು ಕಡಿಮೆಯಾಗಿದೆ. ಸತತ ಅರಣ್ಯ ನಾಶ, ಬೇಕಾಬಿಟ್ಟಿ ಕೃಷಿ, ಯಥೇಚ್ಛ ನೀರಿನ ಬಳಕೆ... ಈ ಎಲ್ಲಾ ಕಾರಣಗಳಿಂದ ತುಂಗೆಯ ಮಡಿಲಿಗೆ ಅಪಾಯ ಒದಗಿದೆ.

‘ತುಂಗೆಯ ದಡಗಳಲ್ಲಿ ಮೂರು ಪೇಟೆಗಳಲ್ಲಿರುವ ನಗರವಾಸಿಗಳು ನದಿಯ ನೀರನ್ನು ಬೇಕಾಬಿಟ್ಟಿ ಬಳಸಿ, ಕಲುಷಿತ ಗೊಳಿಸಿ, ಕೊಳಚೆ ನೀರನ್ನು ನದಿಗೆ ಸೇರಿಸುತ್ತಾರೆ. ಬೇಸಿಗೆಯಲ್ಲಿ ಶುದ್ಧ ಕುಡಿಯುವ ನೀರಿನ ಅಭಾವಕ್ಕೂ ಇದು ಕಾರಣವಾಗಿದೆ’ ಎಂದು ಸ್ಥಳೀಯರಾದ ಕುರುಬಕೇರಿ ಆಶೋಕ್ ಹೇಳಿದರು.

ಜೀವಜಲದ ಬಗ್ಗೆ ಎಲ್ಲರಿಗೂ ಜವಾಬ್ದಾರಿ ಬೇಕು

ತುಂಗಾನದಿ ಸೇರುವ ಮಾಲತಿನದಿ ಈಗಾಗಲೇ ಬೇಗಾರ್‌ನಲ್ಲಿ ಬತ್ತಿಹೋಗಿದೆ. ತುಂಗಾ ನದಿ ನೀರು ಸೇವನೆಯಿಂದ ಅನಾರೋಗ್ಯ ದೂರವಾಗುತ್ತಿತ್ತು. ಆದರೆ ಈಗ ನೀರಿಗೆ ವಾಸನೆ ಬರುತ್ತಿದೆ. ಪೂಜಿಸುವುದರಿಂದ ನದಿ ಪವಿತ್ರವಾಗುವುದಿಲ್ಲ. ಜೀವಜಲದ ಬಗ್ಗೆ ಎಲ್ಲರಿಗೂ ಜವಾಬ್ದಾರಿ ಬೇಕು. ತುಂಗಾ ನದಿಯ ದಡದಲ್ಲಿ ಅನೇಕ ನಗರಗಳು ದೇವಸ್ಥಾನಗಳು ಮಠಗಳು ತಲೆ ಎತ್ತಿದ್ದು ಪ್ರವಾಸಿಗರ ಸಂಖ್ಯೆ ಹೆಚ್ಚಿದಂತೆ ನದಿಗಳ ಜೀವಂತಿಕೆ ದುರಂತಕ್ಕೀಡಾಗಿದೆ ಎಂದು ಪರಿಸರ ವಾದಿ ಕಲ್ಕುಳಿ ವಿಠಲ್ ಹೆಗ್ಡೆ ಹೇಳಿದರು.

ಕಲ್ಕುಳಿ ವಿಠಲ್ ಹೆಗ್ಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.