ADVERTISEMENT

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಸ್ಥಳೀಯರ ಕೂಗಿಗೆ ದೊರಕದ ಮನ್ನಣೆ

ಶೋಭಾ ಗೋ ಬ್ಯಾಕ್ ಕೂಗಿಗೆ ಹೈಕಮಾಂಡ್ ಸ್ಪಂದನೆ

ವಿಜಯಕುಮಾರ್‌ ಎಸ್‌.ಕೆ
Published 14 ಮಾರ್ಚ್ 2024, 6:40 IST
Last Updated 14 ಮಾರ್ಚ್ 2024, 6:40 IST
<div class="paragraphs"><p>ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಮತ್ತು ಪ್ರಮೋದ್ ಮಧ್ವರಾಜ್</p></div>

ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಮತ್ತು ಪ್ರಮೋದ್ ಮಧ್ವರಾಜ್

   

ಚಿಕ್ಕಮಗಳೂರು: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾಗಿದ್ದ ಶೋಭಾ ಕರಂದ್ಲಾಜೆ, ಸಿ.ಟಿ.ರವಿ ಮತ್ತು ಪ್ರಮೋದ್ ಮಧ್ವರಾಜ್ ಅವರನ್ನು ಬಿಟ್ಟು ಆಕಾಂಕ್ಷಿಗಳ ಪಟ್ಟಿಯಲ್ಲೇ ಇಲ್ಲದ ವಿಧಾನ ಪರಿಷತ್ತಿನ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದೆ.

ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರು ಹತ್ತು ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಮತ್ತೊಮ್ಮೆ ಹುರಿಯಾಳಾಗುವ ತವಕದಲ್ಲಿದ್ದರು. ಆದರೆ, ಅವರಿಗೆ ಪಕ್ಷದೊಳಗೇ ವಿರೋಧ ಜೋರಾಗಿತ್ತು. ಮೊದಲಿಗೆ ಪತ್ರ ಚಳವಳಿ, ನಂತರ ಸಾಮಾಜಿಕ ಜಾಲತಾಣಗಳಲ್ಲಿ ‘ಗೋ ಬ್ಯಾಕ್’ ಚಳವಳಿ ನಡೆದಿತ್ತು. ಆದರೂ, ಶೋಭಾ ಅವರಿಗೆ ಟಿಕೆಟ್ ಖಾತ್ರಿಯಾಗುವುದು ಬಿ.ಎಸ್.ಯಡಿಯೂರಪ್ಪ ಖಚಿತಪಡಿಸಿದ್ದರು. ಇದಾದ ಬಳಿಕ ಬಿಜೆಪಿ ಕಾರ್ಯಕರ್ತರು ಪಕ್ಷದ ಕಚೇರಿಯಲ್ಲೇ ಭಾನುವಾರ ನಡೆದ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲೇ ಗದ್ಧಲ ಎಬ್ಬಿಸಿದ್ದರು. ಚಿಕ್ಕಮಗಳೂರು ಜಿಲ್ಲೆಯವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಆ ಮೂಲಕ ಸಿ.ಟಿ.ರವಿ ಅವರನ್ನೇ ಕಣಕ್ಕಿಳಿಸಬೇಕು ಎಂಬ ಒತ್ತಡ ಹೇರಿದ್ದರು.

ADVERTISEMENT

ಸಿ.ಟಿ.ರವಿ ಮತ್ತು ಶೋಭಾ ಕರಂದ್ಲಾಜೆ ನಡುವೆ ಇದ್ದ ವೈಮನಸ್ಸು ಟಿಕೆಟ್ ಪಡೆಯುವ ಪೈಪೋಟಿ ನಡುವೆ ಪರೋಕ್ಷವಾಗಿ ಆರೋಪ–ಪ್ರತ್ಯಾರೋಪಗಳಿಗೆ ಕಾರಣವಾಯಿತು. ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ಬಣದಲ್ಲಿರುವ ಶೋಭಾ ಕರಂದ್ಲಾಜೆ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಿ.ಟಿ.ರವಿ ಪರ ಪ್ರಚಾರಕ್ಕೆ ಬರಲಿಲ್ಲ. ಸೋಲಿಗೆ ಸ್ವಪಕ್ಷದವರೂ ಕೊಡುಗೆ ನೀಡಿದರು ಎಂಬ ಭಾವನೆ ಸಿ.ಟಿ.ರವಿ ಅವರಲ್ಲಿ ಇದೆ. ಇದೇ ಕಾರಣಕ್ಕೆ ಲೋಕಸಭೆ ಚುನಾವಣೆ ಕಳೆದ ಬಳಿಕ ಭಾವನೆಗಳನ್ನು ಹಂಚಿಕೊಳ್ಳುವ ಬಗ್ಗೆ ಸಿ.ಟಿ.ರವಿ ಹೇಳಿದ್ದರು.

ಈ ಎಲ್ಲಾ ಬೆಳವಣಿಗೆ ಗಮನಿಸಿದ ಹೈಕಮಾಂಡ್, ಇಬ್ಬರನ್ನೂ ಕೈಬಿಟ್ಟು ಕ್ಷೇತ್ರದಲ್ಲಿ ಈವರೆಗೆ ಒಮ್ಮೆಯೂ ಮುಂಚೂಣಿಗೆ ಬಾರದ ಹೆಸರನ್ನು ಮುಂದಕ್ಕೆ ತಂದು  ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ. ಶೋಭಾ ಮತ್ತು ಸಿ.ಟಿ.ರವಿ ಅವರ ನಡುವಿನ ಮುಸುಕಿನ ಗುದ್ದಾಟದ ನಡುವೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಚುರುಕಿನಿಂದ ಕ್ಷೇತ್ರದಲ್ಲಿ ಓಡಾಡುತ್ತಿದ್ದರು. ಈ ಇಬ್ಬರ ಪೈಪೋಟಿಯಲ್ಲಿ ಅವರಿಗೂ ಟಿಕೆಟ್ ಕೈ ತಪ್ಪಿದೆ.

ಶೋಭಾ ಅವರಿಗೆ ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಟಿಕೆಟ್ ತಪ್ಪಿದರೂ, ಬೆಂಗಳೂರು ಉತ್ತರದಲ್ಲಿ ಅವಕಾಶ ಕೊಡಿಸುವಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವ ಬಿ.ಎಸ್.ಯಡಿಯೂರಪ್ಪ ಸಫಲರಾಗಿದ್ದಾರೆ. ಅವರ ಆಪ್ತ ಬಳಗದವರು ಎನ್ನಲಾಗುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ ಟಿಕೆಟ್ ಸಿಕ್ಕಿದೆ. ಶ್ರೀಕಂಟಪ್ಪ ನಂತರ ಚಿಕ್ಕಮಗಳೂರು ಜಿಲ್ಲೆಯವರಿಗೆ ಅವಕಾಶ ದೊರೆತಿಲ್ಲ. ಈ ಬಾರಿ ಟಿಕೆಟ್ ನೀಡಬೇಕು ಎಂಬ ಸ್ಥಳೀಯ ಬಿಜೆಪಿ ಕಾರ್ಯಕರ್ತರ ಕೂಗಿಗೆ ಹಿನ್ನೆಡೆಯಾಗಿದೆ. ಶೋಭಾ ಕರಂದ್ಲಾಜೆ ಅವರು ಈ ಕ್ಷೇತ್ರದಿಂದ ‘ಗೋ ಬ್ಯಾಕ್’ ಆಗಿರುವುದು ಸಿ.ಟಿ.ರವಿ ಅವರ ಬೆಂಬಲಿಗ ಕಾರ್ಯಕರ್ತರಿಗೆ ಸಮಾಧಾನ ತಂದಿದೆ.

ಸರಳ ಮತ್ತು ಸಜ್ಜನಿಕೆಯ ವ್ಯಕ್ತಿಗೆ ಟಿಕೆಟ್ ನೀಡಿರುವುದನ್ನು ಸ್ವಾಗತಿಸುತ್ತೇವೆ. ಸ್ಥಳೀಯರಿಗೆ ಟಿಕೆಟ್ ದೊರಕಬೇಕು ಎಂಬ ಕಾರ್ಯಕರ್ತರ ಅಭಿಲಾಷೆ ಇತ್ತು. ಹೈಕಮಾಂಡ್ ಅಭ್ಯರ್ಥಿ ಘೋಷಣೆ ಮಾಡಿದೆ. ಅವರನ್ನು ಗೆಲ್ಲಿಸಲು ಎಲ್ಲರು ಒಟ್ಟಾಗಿ ಕೆಲಸ ಮಾಡುತ್ತೇವೆ.

– ದೇವರಾಜಶೆಟ್ಟಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.