ನರಸಿಂಹರಾಜಪುರ: ‘ವನವಾಸಿ, ಗ್ರಾಮ ವಾಸಿ, ನಗರ ವಾಸಿ ಹಾಗೂ ನಾವೆಲ್ಲರೂ ಭಾರತ ವಾಸಿಗಳು ಎಂಬ ಘೋಷದೊಂದಿಗೆ ವನವಾಸಿ ಕಲ್ಯಾಣಕ್ಕಾಗಿ ಶ್ರಮಸುತ್ತಿದ್ದೇವೆ’ ಎಂದು ವನವಾಸಿ ಕಲ್ಯಾಣದ ಜಿಲ್ಲಾಧ್ಯಕ್ಷ ಕೆ.ವಿ.ಚಂದ್ರಶೇಖರ್ ಹೇಳಿದರು.
ಇಲ್ಲಿನ ಅಗ್ರಹಾರದ ಗಾಯತ್ರಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ವನವಾಸಿ ಕಲ್ಯಾಣದ ನೇತೃತ್ವದಲ್ಲಿ ಮಹಿಳಾ ನಗರ ಸಮಿತಿಗಳನ್ನು ರಚಿಸುವ ಹಿನ್ನೆಲೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ದೇಶದ ಎಲ್ಲ ವನವಾಸಿಗಳನ್ನು ಸಂಘಟಿಸುವ ದೃಷ್ಟಿಯಿಂದ ಹರಿಯಾಣ ರಾಜ್ಯದಲ್ಲಿ ರಾಷ್ಟ್ರ ಮಟ್ಟದ ವನವಾಸಿ ಕಲ್ಯಾಣದ ಸಮ್ಮೇಳನ ನಡೆಸಲಾಗಿತ್ತು. ನರಸಿಂಹರಾಜಪುರದಲ್ಲಿ ಮಹಿಳಾ ನಗರ ಸಮಿತಿ ರಚನೆ ಮಾಡಲಾಗುವುದು ಎಂದರು.
ವನವಾಸಿ ಕಲ್ಯಾಣದ ಜಿಲ್ಲಾ ಕಾರ್ಯದರ್ಶಿ ಜಯರಾಂ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಗೌಡಲು, ಹಸಲರು, ಮೇದರು, ಮರಾಠಿ ನಾಯಕರು, ಮಲೆ ಕುಡಿಯ, ವಾಲ್ಮೀಕಿ, ಡೊಂಗ್ರಿ ಗರೆಸಿಯ ಎಂಬ ಏಳು ಪಂಗಡಗಳಿದ್ದು, ಎಲ್ಲರನ್ನೂ ಸಂಘಟಿಸುತ್ತಿದ್ದೇವೆ. 2017ರಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ವನವಾಸಿ ಕಲ್ಯಾಣ ಸಂಘಟನೆ ಹುಟ್ಟು ಹಾಕಲಾಯಿತು. ಹಿಂದೆ ಜಿಲ್ಲೆಯಲ್ಲಿ 15 ಮನೆ ಪಾಠ ಕೇಂದ್ರವಿತ್ತು. ಸಂಸ್ಕಾರ ಕೇಂದ್ರ ಇತ್ತು. ಕೋವಿಡ್–19ರ ನಂತರ ಇದು ನಿಂತು ಹೋಗಿದೆ. ಮುಂದೆ ಪುನರ್ ಆರಂಭಿಸಲಾಗುವುದು ಎಂದರು.
ಪ್ರಾಂತ ನಗರಿಯ ಮಹಿಳಾ ಪ್ರಮುಖ್ ವೇದಾವತಿ ಮಾತನಾಡಿ, ನಗರ ಸಮಿತಿಯಲ್ಲಿ ಎಲ್ಲ ಸಮುದಾಯ ಗಳನ್ನೊಳಗೊಂಡ ಸದಸ್ಯರಿರಬೇಕು. ಈ ಸಮಿತಿಯವರು ವನವಾಸಿಗಳಿಗೆ ಸಂಸ್ಕಾರ, ಸಂಸ್ಕೃತಿ, ಸಲಹೆ , ಸಹಕಾರ ನೀಡಬೇಕು ಎಂದರು.
15 ಮಹಿಳೆಯರ ನಗರ ಸಮಿತಿ ರಚಿಸಲಾಯಿತು. ಮುಂದಿನ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಮಾಡಲು ತೀರ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.