ADVERTISEMENT

ಅಜ್ಜಂಪುರದಲ್ಲಿ ಉರ್ದು ಪದವಿ ಪೂರ್ವ ಕಾಲೇಜು ಆರಂಭ

ಶಾಸಕ ಜಿ.ಎಚ್.ಶ್ರೀನಿವಾಸ್ ಭರವಸೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 12:42 IST
Last Updated 13 ನವೆಂಬರ್ 2024, 12:42 IST
ಅಜ್ಜಂಪುರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವನ್ನು ಶಾಸಕ ಜಿ.ಎಚ್. ಶ್ರೀನಿವಾಸ್ ಉದ್ಘಾಟಿಸಿದರು.
ಅಜ್ಜಂಪುರದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮವನ್ನು ಶಾಸಕ ಜಿ.ಎಚ್. ಶ್ರೀನಿವಾಸ್ ಉದ್ಘಾಟಿಸಿದರು.   

ಅಜ್ಜಂಪುರ: ‘ಪಟ್ಟಣದಲ್ಲಿ ಸರ್ಕಾರಿ ಉರ್ದು ಪದವಿ ಪೂರ್ವ ಕಾಲೇಜು ತೆರೆಯಲಾಗುವುದು’ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.

ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಗೆ 20 ವರ್ಷ ತುಂಬಿದ ಸ್ಮರಣೆ ಹಿನ್ನೆಲೆ, ಶಾಲೆಯಲ್ಲಿ ಸೇವೆ ಸಲ್ಲಿಸಿದ ಶಿಕ್ಷಕರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ಥಳೀಯ ಮುಸ್ಲಿಂ ಸಮಾಜದ ಬೇಡಿಕೆ ಸ್ವೀಕರಿಸಲಾಗಿದೆ. ಶೀಘ್ರದಲ್ಲಿಯೇ ಸರ್ಕಾರಿ ಉರ್ದು ಪದವಿ ಪೂರ್ವ ಕಾಲೇಜು ಪ್ರಾರಂಭಿಸಲಾಗುವುದು. ಕಟ್ಟಡಕ್ಕೆ ಅನುದಾನ ನೀಡಲಾಗುವುದು. ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಆಧುನಿಕತೆಯ ಪ್ರಸ್ತುತ ದಿನಗಳಲ್ಲಿ ಇಂಗ್ಲಿಷ್ ಭಾಷೆ ಅಗತ್ಯ. ಆದರೆ, ಮಾತೃಭಾಷೆಯನ್ನು ನಾವು ಕಡೆಗಣಿಸಬಾರದು. ಮನೆಯಲ್ಲಿ ಮಾತೃಭಾಷೆಯಲ್ಲಿಯೇ ಕಲಿಯಬೇಕು. ಕನಿಷ್ಠ 8ನೇ ತರಗತಿವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು ಎಂದು ಸಲಹೆ ನೀಡಿದರು.

ತರೀಕೆರೆ ವಿಧಾನ ಕ್ಷೇತ್ರದ ಮಸೀದಿಗಳಿಗೆ ₹4 ಕೋಟಿ ಅನುದಾನ ನೀಡಲಾಗಿದೆ. ಈ ಪೈಕಿ ಅಜ್ಜಂಪುರ ತಾಲ್ಲೂಕು ಮಸೀದಿಗಳಿಗೆ ₹3 ಕೋಟಿ ವಿತರಿಸಲಾಗಿದೆ. ಅಜ್ಜಂಪುರ ಶಾದಿ ಮಹಲ್ ಅಭಿವೃದ್ಧಿಗೆ ₹35 ಲಕ್ಷ ಬಿಡುಗಡೆಗೊಳಿಸಿದ್ದು, ಅಗತ್ಯವಿದ್ದರೆ, ಮತ್ತಷ್ಟು ಅನುದಾನ ನೀಡಲಾಗುವುದು ಎಂದರು.

ಮುಖ್ಯ ಶಿಕ್ಷಕ ವೆಂಕಟೇಶ್, ಶಾಲೆ 20 ವರ್ಷದಿಂದ ಉತ್ತಮ ಶಿಕ್ಷಣ ನೀಡುತ್ತಿದೆ. ಕಲಿತ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಉರ್ದು ಭಾಷೆಯಲ್ಲಿ ಪದವಿ ಕಲಿತವರಿಗೆ ಉತ್ತಮ ಭವಿಷ್ಯ ಇದೆ ಎಂದರು.

ಕೆಪಿಸಿಸಿ ಸದಸ್ಯ ನಟರಾಜ್, ಮುಸ್ಲಿಂ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಬೇಕು. ಉನ್ನತ ಶಿಕ್ಷಣ ಪಡೆಯಬೇಕು. ಶೈಕ್ಷಣಿಕವಾಗಿ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕ ಹೆಚ್.ಎಂ.ಉಮಾಪತಿ, ಕಾಂತರಾಜ್, ಫಾತಿಮಾ ಅವರನ್ನು ಸನ್ಮಾನಿಸಲಾಯಿತು.

ಮುಖಂಡ ಮಸೂದ್ ಅಹ್ಮದ್ , ನವಾಜ್ , ಮಹೇಂದ್ರಚಾರ್, ಅಣ್ಣಯ್ಯ, ಬಂಡ್ರೆ ಕಲ್ಲೇಶ್, ಜೋಗಿ ಪ್ರಕಾಶ್, ಗುರುಮೂರ್ತಿ, ಕೃಷ್ಣಪ್ಪ, ತಿಪ್ಪೇಶ್ ಮಡಿವಾಳ್, ರಿಯಾಜ್, ಮುಹೀಬ್ ಉರ್ ರೆಹಮಾನ್ ಇದ್ದರು.

ಮುಖ್ಯ ಶಿಕ್ಷಕ ದೇವೇಂದ್ರಪ್ಪ,ಜಿ.ಎನ್.ಈಶ್ವರಪ್ಪ, ಎಂ.ಆರ್. ಜಗದೀಶ್ ಹಾಜರಿದ್ದರು. ಈಚೆಗೆ ನಿಧನರಾದ ವೈದ್ಯ ಡಾ. ಬಿ.ಎಸ್. ನಾಗರಾಜ್ ಅವರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.