ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ದಮ್‌ ಲೆಸ್ ಆಗಿದ್ದಾರೆ: ಸಿ.ಟಿ. ರವಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2024, 0:29 IST
Last Updated 4 ಜೂನ್ 2024, 0:29 IST
ಸಿ.ಟಿ.ರವಿ
ಸಿ.ಟಿ.ರವಿ   

ಚಿಕ್ಕಮಗಳೂರು: ‘ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರ ಪ್ರಕರಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದಮ್ಮಿಲ್ಲ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಲೇವಡಿ ಮಾಡಿದರು.

‘ರಾಜೀನಾಮೆ ಪಡೆದು ನನ್ನ ಚಡ್ಡಿ ಬಿಚ್ಚಲು ಬಂದರೆ ನಿಮ್ಮ ಪಂಚೆ ಬಿಚ್ಚುತ್ತೇನೆ ಎಂದು ನಾಗೇಂದ್ರ ಧಮ್ಕಿ ಹಾಕಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಅವರಿಗೆ ರಾಜೀನಾಮೆ ಕೇಳುವ ಧೈರ್ಯ ಇಲ್ಲವಾಗಿದೆ’ ಎಂದು ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದರು.

‘ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣಕ್ಕೆ ಇರಿಸಿದ್ದ ಹಣದಲ್ಲಿ ಕಳೆದ ವರ್ಷ ₹11 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದರು. ಈ ವರ್ಷ ಇನ್ನೂ ₹14 ಸಾವಿರ ಕೋಟಿ ವರ್ಗಾಯಿಸಲಿದ್ದಾರೆ. ಒಟ್ಟು ₹25 ಸಾವಿರ ಕೋಟಿ ಬೇರೆ ಕಾರ್ಯಕ್ಕೆ ವರ್ಗಾವಣೆಯಾಗಲಿದೆ. ಇದು ಒಂದೆಡೆಯಾದರೆ, ಮತ್ತೊಂದೆಡೆ ನಕಲಿ ಖಾತೆಗೆ ₹187 ಕೋಟಿ ವರ್ಗಾವಣೆ ಮಾಡಲಾಗಿದೆ. ಸಚಿವರ ರಾಜೀನಾಮೆ ಪಡೆದರೆ ಅವರು ತಮ್ಮನ್ನೂ ಎಳೆದುಕೊಳ್ಳುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಹೆದರುತ್ತಿದ್ದಾರೆ’ ಎಂದರು.

ADVERTISEMENT

‘ಈಶ್ವರಪ್ಪ ರಾಜೀನಾಮೆ ಪ್ರಕರಣಕ್ಕೂ ಇದಕ್ಕೂ ವ್ಯತ್ಯಾಸ ಇದೆ. ಆ ಪ್ರಕರಣದಲ್ಲಿ ಟೆಂಡರ್ ಇಲ್ಲದೆ, ಕಾರ್ಯಾದೇಶ ಇಲ್ಲದೆ ಕೆಲಸ ಮಾಡಿದ್ದ ಸಂತೋಷ್, ಬಿಲ್ ಪಾವತಿಸಲು ಕೇಳಿದ್ದರು. ನಿಯಮದಲ್ಲಿ ಅವಕಾಶ ಇಲ್ಲ ಎಂದು ಈಶ್ವರಪ್ಪ ಹೇಳಿದ್ದರು. ಆದರೂ, ಸಂತೋಷ್ ಆತ್ಮಹತ್ಯೆ ಮಾಡಿಕೊಂಡಾಗ ಜನರ ಸಂಶಯ ದೂರ ಮಾಡಲು ರಾಜೀನಾಮೆ ನೀಡಿದ್ದರು. ನಾಗೇಂದ್ರ ಅವರ ಪ್ರಕರಣದಲ್ಲಿ ನೇರವಾಗಿ ಸರ್ಕಾರದ ಹಣವನ್ನು ನಕಲಿ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಅವರ ವಿರುದ್ಧ ಇನ್ನೂ ಏಕೆ ಕೊಲೆ ಪ್ರಕರಣ ದಾಖಲಿಸಿಲ್ಲ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.