ಜಯಪುರ (ಬಾಳೆಹೊನ್ನೂರು): ಚಿಕ್ಕಮಗಳೂರಿನಿಂದ ಶೃಂಗೇರಿಗೆ ಸಂಚರಿಸುವ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಬಸ್‍ಗಳ ಆಸನದಲ್ಲಿ ನಿತ್ಯವೂ ತರಕಾರಿ ಸಾಗಾಟ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗಿದೆ ಎಂದು ಸಾರ್ವಜನಿಕರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ದೂರು ನೀಡಿದ್ದಾರೆ.
ಬೆಳಗ್ಗಿನ ಸಮಯದಲ್ಲಿ ಸಂಚರಿಸುವ (ಕೆಎ 18 ಎಫ್ 0693) ಬಸ್‌ನ ಹಿಂಭಾಗದ ಮೂರು– ನಾಲ್ಕು ಆಸನಗಳಲ್ಲಿ ಚಿಕ್ಕಮಗಳೂರಿನಿಂದ ಜಯಪುರದ ಕೆಲವು ಅಂಗಡಿಗಳಿಗೆ ತರಕಾರಿಯನ್ನು ಚೀಲದಲ್ಲಿ ತುಂಬಿಸಿ ಇಡಲಾಗುತ್ತದೆ. ಕಡಬಗೆರೆ, ಸಂಗಮೇಶ್ವರಪೇಟೆ, ಬಾಳೆಹೊನ್ನೂರಿನಿಂದಲೇ ಬಸ್‌ನಲ್ಲಿ ಪ್ರಯಾಣಿಕರು, ವಿದ್ಯಾರ್ಥಿಗಳು ತುಂಬಿ ತುಳುಕುತ್ತಿರುತ್ತದೆ. ಈ ಮಧ್ಯೆ ತರಕಾರಿ ಮೂಟೆಗಳಿಂದಾಗಿ ಸೀಗೋಡು, ಹೇರೂರು, ದೂಬಳ ಕೈಮರ, ಜಯಪುರದಿಂದ ಶೃಂಗೇರಿಯ ಶಾಲಾ– ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಬಸ್ ನಿಲುಗಡೆ ಮಾಡುತ್ತಿಲ್ಲ. ಇದರಿಂದಾಗಿ ಹಲವು ಬಾರಿ ವಿದ್ಯಾರ್ಥಿಗಳಿಗೆ ಪರೀಕ್ಷೆ, ತರಗತಿಗಳು ತಪ್ಪಿಹೋಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
‘ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯೊಳಗೆ ಬಾಳೆಹೊನ್ನೂರು– ಶೃಂಗೇರಿ ನಡುವೆ ಮೂರ್ನಾಲ್ಕು ಸರ್ಕಾರಿ ಬಸ್‌ಗಳು ಸಂಚರಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿತ್ತು. ಆದರೆ, ಒಂದು ತಿಂಗಳಿನಿಂದ ಒಂದು ಬಸ್ ಸಂಚಾರ ಸ್ಥಗಿತಗೊಂಡಿದೆ. ಉಳಿದ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗ ಸಿಗುತ್ತಿಲ್ಲ. ತಕ್ಷಣ ಈ ಭಾಗದಲ್ಲಿ ಸ್ಥಗಿತಗೊಂಡಿರುವ ಬಸ್ ಸಂಚಾರವನ್ನು ಪುನರ್ ಆರಂಭಿಸಬೇಕು. ಸರ್ಕಾರಿ ಬಸ್‌ನ ಆಸನಗಳಲ್ಲಿ ತರಕಾರಿ ಸಾಗಾಟವನ್ನು ತಡೆಯಬೇಕು. ಇಲ್ಲದೆ ಇದ್ದರೆ ಮುಂದಿನ ದಿನಗಳಲ್ಲಿ ಜಯಪುರದಲ್ಲಿ ಸರ್ಕಾರಿ ಬಸ್ ಅಡ್ಡಗಟ್ಟಿ ಪ್ರತಿಭಟನೆ ನಡೆಸಲಾಗುವುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರ ಯಾವುದೇ ಸಮಸ್ಯೆಗೆ ಸಂಸ್ಥೆಯ ಚಿಕ್ಕಮಗಳೂರಿನ ವಿಭಾಗೀಯ ನಿಯಂತ್ರಣಾಧಿಕಾರಿ ಸರಿಯಾಗಿ ಸ್ಪಂದಿಸುತ್ತಿಲ್ಲ. ಅವರ ಬಗ್ಗೆಯೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಾರಿಗೆ ಸಚಿವರಿಗೆ ದೂರು ನೀಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತ ಜಿ.ವಿ.ಸಂದೀಪ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಚಿಕ್ಕಮಗಳೂರಿನ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಕರಿಗೆ ಹಲವು ಬಾರಿ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.