ಚಿಕ್ಕಮಗಳೂರು: ಸ್ಥಳ ಪರಿಶೀಲನೆ ನೆಪದಲ್ಲಿ ಮೋಜುಮಸ್ತಿಗೆ ಅರಣ್ಯಕ್ಕೆ ಹೊರಟಿದ್ದಾರೆಂದು ಅರಣ್ಯಾಧಿಕಾರಿಗಳಿದ್ದ ಎಂಟಕ್ಕೂ ಹೆಚ್ಚು ವಾಹನಗಳನ್ನು ಗ್ರಾಮಸ್ಥರು ತಡೆದು ವಾಪಸ್ ಕಳಿಸಿರುವ ಘಟನೆ ತರೀಕೆರೆ ತಾಲ್ಲೂಕಿನ ಸಂತವೇರಿ ಗ್ರಾಮದಲ್ಲಿ ನಡೆದಿದೆ.
ಅರಣ್ಯ ಪಡೆಯ ಪ್ರಧಾನಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ಅರಣ್ಯ ಮತ್ತು ಪರಿಸರ ಜೀವವಿಜ್ಞಾನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಚಿಕ್ಕಮಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಇತರ ಅಧಿಕಾರಿಗಳು ವಾಹನಗಳಲ್ಲಿದ್ದರು. ಗುರುವಾರ (ಇದೇ 20) ಮಧ್ಯಾಹ್ನ 1 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಗ್ರಾಮಸ್ಥರು ವಾಹನಗಳನ್ನು ತಡೆದಿರುವುದು, ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿರುವ ವಿಡಿಯೊ ವೈರಲ್ ಆಗಿದೆ.
‘ಅಧಿಕಾರಿಗಳು ಮೋಜುಮಸ್ತಿ, ಪಾರ್ಟಿ ಮಾಡಲು ಬಂದಿದ್ದಾರೆ. ಕೋವಿಡ್ ತಲ್ಲಣದ ಈ ಹೊತ್ತಿನಲ್ಲಿ ಇದೆಲ್ಲ ಬೇಕಾ? ಎಂದು ಗ್ರಾಮಸ್ಥರು ಪ್ರಶ್ನಿಸಿರುವುದು’ ವಿಡಿಯೊದಲ್ಲಿದೆ.
‘ಎಂಟ್ಹತ್ತು ವಾಹನಗಳು ಸಾಗುತ್ತಿರುವುದನ್ನು ಗಮನಿಸಿ ತಡೆದು ವಿಚಾರಿಸಿದೆವು. ಏನೇನೊ ಸಬೂಬು ಹೇಳಿದರು. ಕೆಲವರು ಬೆಂಗಳೂರಿನಿಂದ ಬಂದಿದ್ದವರು ಇದ್ದರು. ಕೋವಿಡ್ ಸಂದರ್ಭದಲ್ಲಿ ಇಷ್ಟೊಂದು ವಾಹನಗಳು ಓಡಾಡುವುದು ಬೇಡ ವಾಪಸ್ ಕಳಿಸಿದೆವು. ಪರಿಶೀಲನೆ ನೆಪ ಹೇಳಿ ಮೋಜುಮಸ್ತಿಗೆ ಹೊರಟಿದ್ದರು’ ಎಂದು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಬೆಂಗಳೂರಿನಿಂದ ಬಂದಿದ್ದ ಅಧಿಕಾರಿಗಳು ಇದೇ 19ರಂದು ಮುತ್ತೋಡಿ ವ್ಯಾಪ್ತಿಯ ಸೀಗೇಖಾನ್ ನಿರೀಕ್ಷಣಾ ಮಂದಿರದಲ್ಲಿ, 20ರಂದು ಲಕ್ಕವಳ್ಳಿಯ ಅರಣ್ಯ ಗೃಹದಲ್ಲಿ ಉಳಿದಿದ್ದರು. 21ರಂದು ಮಧ್ಯಾಹ್ನ ಬೆಂಗಳೂರಿಗೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ಪರಿಶೀಲನೆಗೆ ತಂಡ ಬಂದಿತ್ತು’
‘ಮುಳ್ಳಯ್ಯನಗಿರಿ ಸಂರಕ್ಷಿತ ಪ್ರದೇಶ ಪ್ರಸ್ತಾವ ನಿಟ್ಟಿನಲ್ಲಿ ಸ್ಥಳ ಪರಿಶೀಲನೆಗೆ ಅಧಿಕಾರಿಗಳ ತಂಡ ಬಂದಿತ್ತು. ಸಂತವೇರಿ ಪ್ರದೇಶದ ಕಾಡಿನ ಮೂಲಕ ಕೆಮ್ಮಣ್ಣುಗುಂಡಿಗೆ ಕಾಲ್ನಡಿಗೆಯಲ್ಲಿ ತೆರಳಲು ಹೊರಟಿದ್ದೆವು. ಗ್ರಾಮಸ್ಥರು ಅಡ್ಡಗಟ್ಟಿ ವಾಪಸ್ ಕಳಿಸಿದರು’ ಎಂದು ಚಿಕ್ಕಮಗಳೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಸುನಿಲ್ ಪನ್ವಾರ್ ತಿಳಿಸಿದರು.
‘ಕರ್ತವ್ಯಕ್ಕೆ ತೆರಳಲು ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ವಾಹನಗಳು ಜಾಸ್ತಿ ಇದ್ದವು ತಕರಾರು ಮಾಡಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.