ಚಿಕ್ಕಮಗಳೂರು: ಕಾಫಿನಾಡಿನ ನಕಲ್ಸ್ ಬಾಧಿತ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಪೈಪ್‌ಲೈನ್ ವವಸ್ಥೆ, ರಸ್ತೆ ಅಭಿವೃದ್ಧಿ, ಗಿರಿಜನರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಕಲ್ಪಿಸುವ ನಿಟ್ಟಿನಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಸ್ಥೆ ವಹಿಸಿದ್ದರು.
ಕಡಲತಡಿಯ ಉಡುಪಿ ಜಿಲ್ಲೆಯ ಸೆರಗಿನಲ್ಲೇ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಇದೆ. ಕಾಫಿನಾಡಿನೊಂದಿಗೆ ಸ್ವಾಮೀಜಿ ಅವಿನಾಭಾವ ನಂಟು ಇತ್ತು. ಇಲ್ಲಿನ ನಕ್ಸಲ್ ಛಾಯೆ ಊರುಗಳಲ್ಲಿ ಮೂಲಸೌಕರ್ಯ ಒದಗಿಸಲು ಅವರು ಶ್ರಮಿಸಿದ್ದರು.
ಶೃಂಗೇರಿ, ಕೊಪ್ಪ, ಮೂಡಿಗೆರೆ ಭಾಗಗಳ ಗ್ರಾಮಗಳಲ್ಲಿ ಓಡಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಪೇಜಾವರ ಮಠದಿಂದ ಕರ್ನಾಟಕದ ಪಶ್ಚಿಮಘಟ್ಟ ಗುಡ್ಡಗಾಡು ಪ್ರದೇಶಾಭಿವೃದ್ಧಿ ಯೋಜನೆ ರೂಪಿಸಿ ಕಾರ್ಯೋನ್ಮುಖರಾಗಿದ್ದರು.
ಈ ಯೋಜನೆಯಲ್ಲಿ ಕಾರ್ಯಕರ್ತರಾಗಿ ಕಾರ್ಯನಿರ್ವಹಿಸಿದ್ದ ನಾಗೇಶ್ ಅಂಗೀರಸ ಅವರು ಸುಧಾರಣೆ ಹಾದಿಯ ಅಂಶಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.
‘2007ನೇ ಇಸವಿಯಲ್ಲಿ ಸ್ವಾಮೀಜಿ ಅವರು ಜಿಲ್ಲೆಯ ನಕ್ಸಲ್ ಬಾಧಿತ ಪ್ರದೇಶಗಳ ಸಮಸ್ಯೆಗಳ ಅವಲೋಕನ ಮಾಡಿದರು. ಭೌತಿಕ ಮತ್ತು ಆಂತರಿಕ ಸಮಸ್ಯೆಗಳನ್ನು ಗುರುತಿಸಿ ಅವುಗಳ ಪರಿಹಾರಕ್ಕೆ ಶ್ರಮಿಸಿದರು’ ಎಂದು ಕೈಂಕರ್ಯದ ಲಾಗಾಯ್ತನ್ನು ಬಿಚ್ಚಿಟ್ಟರು.
‘ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಪೈಪ್‌ಲೈನ್ ವ್ಯವಸ್ಥೆ ಮೊದಲಾದ ಮೂಲಸೌಕರ್ಯ ಕಲ್ಪಿಸುವ ಮೂಲಕ ಭೌತಿಕ ಸಮಸ್ಯೆಗಳ ಪರಿಹಾರಕ್ಕೆ ಮುಂದಾದರು. ಹಾಗೆಯೇ ಗಿರಿಜನ ಹಾಡಿಗಳಲ್ಲಿ ವಾಸ್ತವ್ಯ, ಪಾದಯಾತ್ರೆ, ಅವರ ಮನೆಗಳಲ್ಲಿ ಭೋಜನ ಮೂಲಕ ಆಂತರಿಕ ಸಮಸ್ಯೆಗಳಿಗೆ(ಅಭದ್ರತೆ, ತುಮುಲ) ಇತಿಶ್ರೀ ಹಾಡಲು ಶ್ರಮಿಸಿದರು. ಗಿರಿಜನರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದರು’ ಎಂದು ತಿಳಿಸಿದರು.
‘28 ದೇಗುಲಗಳ ಜೀರ್ಣೋದ್ಧಾರ ಕೈಂಕರ್ಯ ಮಾಡಿದರು. ಶೃಂಗೇರಿ ತಾಲ್ಲೂಕಿನ ಮುಂಡಗಾರು ಹ್ಯಾಮ್ಲೆಟ್‌ಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಮಾರಿಯಮ್ಮ ದೇಗುಲ ಜೀರ್ಣೋದ್ಧಾರ ಮಾಡಿಸಿ ಉದ್ಘಾಟನೆ ನೆರವೇರಿಸಿದ್ದು, ಇವೆಲ್ಲವೂ ಸ್ಮರಣೀಯ ಕಾರ್ಯಗಳು’ ಎಂದು ಹೆಗ್ಗುರುತುಗಳನ್ನು ನೆನಪಿಸಿಕೊಂಡರು.
‘ಸ್ವ ಉದ್ಯೋಗ ನಿಟ್ಟಿನಲ್ಲಿ ಹೊಲಿಗೆ ಯಂತ್ರ, ಕಾಯಿನ್ ಫೋನ್ ಉಪಕರಣ ಇತರ ಪರಿಕರ ಒದಗಿಸಿದ್ದರು. ನಕ್ಸಲ್ ಶರಣಾಗತಿಗೆ ಮುನ್ನಡಿ ಬರೆದವರು ವಿಶ್ವೇಶತೀರ್ಥ ಸ್ವಾಮೀಜಿ. ಅವರು ಸಮಾಜದ ಅಭಿವೃದ್ಧಿಗೆ ಬಹುವಾಗಿ ಶ್ರಮಿಸಿದ್ದರು’ ಎಂದು ಸ್ಮರಿಸಿದರು.
‘ಹೊಳೆಯಲ್ಲಿ ಮಿಂದು, ದಂಡೆಯಲ್ಲಿ ಪೂಜೆ’
ಮುಂಡಗಾರು ಗ್ರಾಮದಲ್ಲಿ ಪೇಜಾವರಶ್ರೀ ಅವರು ಮಾರಿಯಮ್ಮ ದೇಗುಲ ಮತ್ತು ವಿದ್ಯುತ್ ಸಂಪರ್ಕ ಸೌಕರ್ಯ ಉದ್ಘಾಟನೆ ನೇರವೇರಿಸಿದ್ದರು. ಆ ಕಾರ್ಯಕ್ರಮ ಗದ್ದೆಯಲ್ಲಿ ಏರ್ಪಾಡಾಗಿತ್ತು. ಆ ದಿನ ಅವರು ಕಾರ್ಯಕ್ರಮ ವೇದಿಕೆ ಸಮೀಪದ ಹೊಳೆಯಲ್ಲಿ ಮಿಂದು, ದಂಡೆಯಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದ್ದರು ಎಂದು ಮುಂಡಗಾರು ಬಳಿ ಹೊಲ್ಮ ಗ್ರಾಮದ ದಿನೇಶ್ ನೆನಪಿಸಿಕೊಂಡರು.
‘ಆ ದಿನ ದಂಡೆಯಲ್ಲಿ ಮೂರ್ತಿ ಇಟ್ಟುಕೊಂಡು ಪೂಜಾ ಕೈಂಕರ್ಯ ನೆರವೇರಿಸಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಮುಂಡಗಾರಿನ ಗಿರಿಜನ ಕಾಲೊನಿಗೆ ವಿದ್ಯುತ್ ಸಂಪರ್ಕ ಒದಗಿಸುವ ಮಹತ್ಕಾರ್ಯವನ್ನು ಸ್ವಾಮೀಜಿ ಮಾಡಿದರು’ ಎಂದು ಸ್ಮರಿಸಿದರು.
ಕಾಫಿನಾಡಿನ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿ
ವಿಶ್ವೇಶ್ವತೀರ್ಥ ಸ್ವಾಮೀಜಿ ಅವರು ಜಿಲ್ಲೆಯಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ನಡೆನುಡಿಯಿಂದ ಜನಮಾನಸದಲ್ಲಿ ನೆಲೆಸಿದ್ದಾರೆ. ಜಿಲ್ಲೆಯ ಶೃಂಗೇರಿ ಶಾರದಾಪೀಠ, ಬಾಳೆಹೊನ್ನೂರಿನ ರಂಭಾಪುರಿ ಮಠ ಸಹಿತ ವಿವಿಧ ಶ್ರೀಮಠಗಳೊಂದಿಗೆ ಒಡನಾಟ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.