ADVERTISEMENT

ಕಳಸ: ಕೆಪಿಎಸ್‌ಗೆ ಹೆಚ್ಚಿದ ಬೇಡಿಕೆ

ರವಿ ಕೆಳಂಗಡಿ
Published 3 ಜುಲೈ 2024, 6:34 IST
Last Updated 3 ಜುಲೈ 2024, 6:34 IST

ಕಳಸದ ಕೆಪಿಎಸ್ ಶಾಲೆಯ ಹೊರ ನೋಟ

ಕಳಸದ ಕೆಪಿಎಸ್ ಶಾಲೆಯ ಹೊರ ನೋಟ

ಕಳಸ: ತಾಲ್ಲೂಕಿನ ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿ 8ನೇ ತರಗತಿಗೆ ದಾಖಲಾತಿ ಬಹುತೇಕ ಮುಗಿದಿದೆ. ಗ್ರಾಮೀಣ ಶಾಲೆಗಳಾದ ಸಂಸೆ, ಹೊರನಾಡು, ಹಿರೇಬೈಲು, ಕುದುರೆಮುಖ ಮತ್ತು ಬಾಳೆಹೊಳೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಆದರೆ, ಕಳಸ ಕೆಪಿಎಸ್ ಶಾಲೆಯಲ್ಲಿ ಮಾತ್ರ ದಾಖಲಾತಿಗಾಗಿ ನೂಕುನುಗ್ಗಲಿನ ಸ್ಥಿತಿ ಇದೆ.

ADVERTISEMENT

ಸಂಸೆ ಶಾಲೆಯ 8ನೇ ತರಗತಿಗೆ ಈವರೆಗೆ 10 ಮಕ್ಕಳು ಮಾತ್ರ ದಾಖಲಾಗಿದ್ದಾರೆ. ಕುದುರೆಮುಖದಲ್ಲಿ 3 ವಿದ್ಯಾರ್ಥಿಗಳು, ಬಾಳೆಹೊಳೆಯಲ್ಲಿ 7 ಮಕ್ಕಳು ಮತ್ತು ಹೊರನಾಡಿನಲ್ಲಿ 9 ಮಕ್ಕಳು 8ನೇ ತರಗತಿಗೆ ಪ್ರವೇಶ ಪಡೆದಿದ್ದಾರೆ. ಹಿರೇಬೈಲಿನಲ್ಲಿ 22 ಮಕ್ಕಳು ದಾಖಲಾಗಿದ್ದಾರೆ. ಕಳಸ ಕೆಪಿಎಸ್ ಶಾಲೆಗೆ 113 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈಗಾಗಲೇ ಶಾಲೆಯಲ್ಲಿ 8ನೇ ತರಗತಿಗೆ 2 ಪ್ರತ್ಯೇಕ ಕೊಠಡಿಯಲ್ಲಿ ತರಗತಿ ನಡೆಸಲಾಗುತ್ತಿದೆ.

ಕಳಸ ಕೆಪಿಎಸ್ ಶಾಲೆಯ ಶೈಕ್ಷಣಿಕ ಗುಣಮಟ್ಟ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಬಂದಿರುವುದು ವಿದ್ಯಾರ್ಥಿಗಳು ಈ ಶಾಲೆ ಸೇರಲು ಪೂರಕ ಅಂಶಗಳಾಗಿವೆ. ದಾನಿಯೊಬ್ಬರು ₹40 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಒಳಾಂಗಣ ಕ್ರೀಡಾಂಗಣ ಮತ್ತು ಸಭಾಂಗಣ, ರಾಜ್ಯ ಮಟ್ಟದವರೆಗೂ ಗ್ರಾಮೀಣ ಮಕ್ಕಳನ್ನು ಕರೆದೊಯ್ದಿರುವ ಅಟಲ್‍ಜೀ ಟಿಂಕರಿಂಗ್ ಲ್ಯಾಬ್‌ ಕೂಡ ಕಳಸ ಕೆಪಿಎಸ್ ಶಾಲೆಯ ಹೆಗ್ಗುರುತು. ಸುಸಜ್ಜಿತ ಪ್ರಯೋಗಾಲಯ, ಸ್ಮಾರ್ಟ್ ಕ್ಲಾಸ್‍ಗಳು ಗುಣಮಟ್ಟದ ಕಲಿಕೆ, ಶಿಕ್ಷಕ ವೃಂದದ ಬದ್ಧತೆ ಮತ್ತು ಶಾಲಾಭಿವೃದ್ಧಿ ಸಮಿತಿಯ ಸಹಕಾರದಿಂದ ಶಾಲೆ ತಾಲ್ಲೂಕಿನಲ್ಲೇ ಗುಣಮಟ್ಟದಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ.

ಇಲ್ಲಿನ ಇಂಗ್ಲಿಷ್ ಮಾಧ್ಯಮ  8ನೇ ತರಗತಿಗೆ 32 ಮಕ್ಕಳ ದಾಖಲಾತಿ ಆಗಿದೆ. ಕಳಸ ತಾಲ್ಲೂಕಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ನಡೆಯುವ ಸರ್ಕಾರಿ ಪ್ರೌಢಶಾಲೆ ಇದೊಂದೇ ಆಗಿರುವುದು ಗ್ರಾಮೀಣ ಮಕ್ಕಳ ಪಾಲಿಗೆ ದೊಡ್ಡ ವರದಾನ ಎನ್ನುತ್ತಾರೆ ಶಾಲೆಯ ವಿಜ್ಞಾನ ಶಿಕ್ಷಕ ಲೋಕೇಶ್ ಸತೀಶ್.

ಇಲ್ಲಿನ 9 ಮತ್ತು 10ನೇ ತರಗತಿಯಲ್ಲಿ ತಲಾ 4 ವಿಭಾಗಗಳು ಇದ್ದು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ.  ಖಾಸಗಿ ಶಾಲೆಗಳಲ್ಲಿ 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದ ಮಕ್ಕಳು 8ನೇ ತರಗತಿಗೆ ಈ ಸರ್ಕಾರಿ ಶಾಲೆಗೆ ಸೇರ್ಪಡೆ ಆಗುತ್ತಿರುವುದು ಇಲ್ಲಿನ ಹೆಚ್ಚುಗಾರಿಕೆ.

ಹೆಚ್ಚುವರಿ ಕೊಠಡಿಗೆ ಪ್ರಸ್ತಾವನೆ

ಶಾಲೆಗೆ ಬೇಕಾದ  ಮೂಲಸೌಕರ್ಯ ಕಲ್ಪಿಸಲು ಎಲ್ಲರ ಸಹಕಾರದೊಂದಿಗೆ ಅತ್ಯಂತ ಶ್ರಮ ವಹಿಸಿ ಕೆಲಸ ಮಾಡಲಾಗುತ್ತಿದೆ. ಕೆಪಿಎಸ್ ಶಾಲೆಯ ಎಲ್‍ಕೆಜಿಯಿಂದ 12ನೇ ತರಗತಿವರೆಗೆ ಎಲ್ಲ ತರಗತಿಗಳು ಒಂದೇ ಕ್ಯಾಂಪಸ್‌ನಲ್ಲಿ ನಡೆಯಬೇಕು ಎಂಬ ಆಶಯ ಇದೆ. ಅದಕ್ಕೆ ತಕ್ಕಂತೆ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಸಚಿವರಿಗೆ ಮನವಿ ಮಾಡಿದ್ದೇವೆ. ಸುಸಜ್ಜಿತ ಶೌಚಾಲಯಗಳ ನಿರ್ಮಾಣ ಕೂಡ ಆಗುತ್ತಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಫೀಕ್ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.