ADVERTISEMENT

ಚಿಕ್ಕಮಗಳೂರು | ಬೇಸಿಗೆಗೂ ಮುನ್ನ ಅಂತರ್ಜಲ ಪಾತಾಳಕ್ಕೆ

ಬರಗಾಲ: ಕೊಪ್ಪ ತಾಲ್ಲೂಕಿನಲ್ಲೇ ಹೆಚ್ಚು ಕುಸಿತ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2024, 6:57 IST
Last Updated 12 ಫೆಬ್ರುವರಿ 2024, 6:57 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಈ ವರ್ಷ ಪಾತಾಳಕ್ಕೆ ಸೇರಿದೆ. ಬಯಲು ಸೀಮೆ ಜತೆಗೆ ಮಲೆನಾಡು ಭಾಗದಲ್ಲೂ ಅಂತರ್ಜಲ ಹೆಚ್ಚು ಕುಸಿದಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಅಜ್ಜಂಪುರ ಮತ್ತು ಕಡೂರು ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂತರ್ಜಲ ಕುಸಿತವಾಗಿದೆ. ಅಜ್ಜಂಪುರ ತಾಲ್ಲೂಕಿನಲ್ಲಿ ಕಳೆದ ವರ್ಷ ಸರಾಸರಿ 4.45 ಮೀಟರ್‌ನಲ್ಲಿದ್ದ ಅಂತರ್ಜಲ 14.12 ಮೀಟರ್‌ಗೆ ಕುಸಿದಿದೆ. ಕಡೂರು ತಾಲ್ಲೂಕಿನಲ್ಲೂ 6.72 ಮೀಟರ್‌ನಲ್ಲಿದ್ದ ಅಂತರ್ಜಲ ಈ ವರ್ಷ 12.22ಕ್ಕೆ ಇಳಿದಿದೆ.

ADVERTISEMENT

ಜುಲೈ ತಿಂಗಳಿನಲ್ಲಿ ಕೊಂಚ ಸುಧಾರಿಸಿದ್ದು, ಜನವರಿಯಲ್ಲಿ ಮತ್ತಷ್ಟು ಆಳಕ್ಕೆ ಇಳಿದಿದೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಇನ್ನಷ್ಟು ಪಾತಾಳಕ್ಕೆ ಅಂತರ್ಜಲ ಇಳಿಯುವ ಆತಂಕ ಕಾಡುತ್ತಿದೆ.

ಮಳೆ ಕೊರತೆಯಿಂದ ಕೆರೆ ಕಟ್ಟೆಗಳು ಭರ್ತಿಯಗಲಿಲ್ಲ. ಜಿಲ್ಲೆಯಲ್ಲಿ ಮೂರು ಏತ ನೀರಾವರಿ ಯೋಜನೆಗಳಿದ್ದು, ಹಲವು ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಈ ವರ್ಷ ಮಳೆ ಕೊರತೆ ಆಗಿದ್ದರಿಂದ ಏತ ನೀರಾವರಿ ಮೋಟರ್‌ಗಳು ಚಾಲನೆಯೇ ಆಗಲಿಲ್ಲ. ಒಂದೇ ಒಂದು ಕೆರೆಗೂ ನೀರು ತುಂಬಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ ಎನ್ನುತ್ತಾರೆ ಗಣಿ ಮತ್ತು ಭೂ ವಿಜ್ಞಾನಿಗಳು.

ಕಳೆದ ಹತ್ತು ವರ್ಷಗಳ ಅಂಕಿ –ಅಂಶ ಗಮನಿಸಿದರೆ ಮಲೆನಾಡು ಭಾಗದಲ್ಲೇ ಅಂತರ್ಜಲ ಮಟ್ಟ ಪಾತಾಳ ಸೇರುತ್ತಿದೆ. ಅದರಲ್ಲೂ ಕೊಪ್ಪ ತಾಲ್ಲೂಕಿನಲ್ಲಿ ಅಂತರ್ಜಲ ಮಟ್ಟ ಹೆಚ್ಚು ಕುಸಿತ ಕಂಡಿದೆ. ಅತಿವೃಷ್ಟಿ ಇರಲಿ, ಅನಾವೃಷ್ಟಿ ಇರಲಿ, ಈ ತಾಲ್ಲೂಕಿನಲ್ಲಿ ಪ್ರತಿ ವರ್ಷವೂ ಅಂತರ್ಜಲ ಮಟ್ಟ ಕುಸಿತ ಕಂಡಿದೆ. 2014ರಲ್ಲಿ 10.63 ಮೀಟರ್ ಇದ್ದ ಅಂತರ್ಜಲ ಮಟ್ಟ 2024ನೇ ಜನವರಿ ವೇಳೆಗೆ 16.97 ಮೀಟರ್‌ಗೆ ಕುಸಿದಿದೆ. 

ಕಡೂರು, ಅಜ್ಜಂಪುರ ಮತ್ತು ತರೀಕೆರೆ ತಾಲ್ಲೂಕಿನ 10 ವರ್ಷಗಳ ಅಂಕಿ–ಅಂಶ ಗಮನಿಸಿದರೆ ಅಂತರ್ಜಲ ಕುಸಿತ ಕಡಿಮೆಯಾಗಿದೆ. 2014ರಲ್ಲಿ ಕಡೂರು ತಾಲ್ಲೂಕಿನ ಸರಾಸರಿ 20.31 ಇದ್ದ ಅಂತರ್ಜಲ 2017ರ ವೇಳೆಗೆ 27.86 ಮೀಟರ್‌ ಅಳಕ್ಕೆ ಹೋಗಿತ್ತು. ಬಳಿಕ ಏರಿಕೆ ಕಂಡಿದ್ದು, 2022ರಲ್ಲಿ 8.22 ಮೀಟರ್‌ಗೆ ಏರಿಕೆಯಾಗಿತ್ತು. ಬರಗಾಲ ಇರುವುದರಿಂದ ಈ ವರ್ಷ 12.22 ಮೀಟರ್ ಇದೆ.

‘ಬೇಕಾಬಿಟ್ಟಿಯಾಗಿ ಕೊಳವೆ ಬಾವಿ ಕೊರೆಯಲು ಈ ತಾಲ್ಲೂಕಿನಲ್ಲಿ ಕಡಿವಾಣ ಹಾಕಲಾಗಿದೆ. ಅಲ್ಲದೇ, ಹನಿ ನೀರಾವರಿ ಮತ್ತು ತುಂತುರು ನೀರಾವರಿಗೆ ಆದ್ಯತೆ ನೀಡಲಾಗಿದೆ. ಇದರಿಂದ ಅಂತರ್ಜಲ ಮಟ್ಟ ಸುಧಾರಣೆಯಾಗಿದೆ’ ಎನ್ನುತ್ತಾರೆ ಅಧಿಕಾರಿಗಳು.

ಪೂರಕ ಮಾಹಿತಿ: ಬಾಲು ಮಚ್ಚೇರಿ, ರವಿಕುಮಾರ್ ಶೆಟ್ಟಿಹಡ್ಲು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.