ಚಿಕ್ಕಮಗಳೂರು: ಹಾಸ್ಟೆಲ್ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡಲು ವಿಶೇಷ ಕಾರ್ಯಾಗಾರ ಆಯೋಜಿಸಲಾಗಿದೆ. ಇದಕ್ಕಾಗಿ ಅ. 21ರಂದು ಪೂರ್ವ ಸಿದ್ಧತಾ ಪೂರ್ವಭಾವಿ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಹೇಳಿದರು.
ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ. ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಹಯೋಗದಲ್ಲಿ ಅ. 28ರಂದು ಕಾರ್ಯಾಗಾರ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಹೇಳಿದರು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ ಸೇರಿ ಜಿಲ್ಲೆಯಲ್ಲಿ 64 ವಸತಿ ನಿಲಯಗಳಿದ್ದು, 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ಸೇರಿ ಎಲ್ಲಾ ವಿದ್ಯಾರ್ಥಿಗಳೂ ಪೂರ್ವಭಾವಿ ಪರೀಕ್ಷೆಗೆ ಹಾಜರಾಗಲು ಅವಕಾಶ ಇದೆ ಎಂದರು.
ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಮಾದರಿಯಲ್ಲೇ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುವುದು. ಬಹು ಆಯ್ಕೆ ಪ್ರಶ್ನೆಗಳಿದ್ದು, ಉತ್ತರವನ್ನು ವಿದ್ಯಾರ್ಥಿಗಳು ಒಎಂಆರ್ ಶೀಟ್‌ನಲ್ಲೇ ನಮೂದಿಸಬೇಕು. ಒಎಂಆರ್ ಶೀಟ್‌ನಲ್ಲಿ ಹೇಗೆ ಉತ್ತರ ದಾಖಲಿಸಬೇಕು ಎಂಬುದು ಅರ್ಥವಾಗಲಿ ಎಂಬ ಕಾರಣಕ್ಕೆ ಈ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಪ್ರತಿ ವಿದ್ಯಾರ್ಥಿ ನಿಲಯದಿಂದ ಹೆಚ್ಚು ಅಂಕ ಪಡೆದ ತಲಾ 10 ವಿದ್ಯಾರ್ಥಿಗಳನ್ನು ಕಾರ್ಯಾಗಾರಕ್ಕೆ ಕರೆತರಲಾಗುವುದು. ಅ. 25ರಂದು ಎಐಟಿ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಾಗಾರದಲ್ಲಿ ಇನ್‌ಸೈಟ್ಸ್ ಸಂಸ್ಥೆಯ ತರಬೇತಿದಾರರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ವಿವರಿಸಿದರು.
ಕಾರ್ಯಾಗಾರದಲ್ಲಿ ಭಾಗವಹಿಸಲು ಸಾಧ್ಯವಾಗದ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲೇ ವೀಕ್ಷಣೆ ಮಾಡಲು ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುವುದು. ಇತ್ತೀಚೆಗೆ ಯುಪಿಎಸ್‌ಸಿ ಮತ್ತು ಕೆಪಿಎಸ್‌ಸಿ ಪರೀಕ್ಷೆ ಎದುರಿಸಿ ಯಶಸ್ಸು ಸಾಧಿಸಿರುವ ಅಧಿಕಾರಿಗಳೂ ತರಬೇತಿ ನೀಡಲಿದ್ದಾರೆ. ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು. ಪರೀಕ್ಷೆಯ ವಿಧಾನಗಳು, ಹೇಗೆ ಯಶಸ್ಸು ಗಳಿಸಬೇಕು ಎಂಬ ವಿಚಾರದ ಬಗ್ಗೆ ಅರಿವು ಮೂಡಿಸುವರು ಎಂದು ತಿಳಿಸಿದರು.
ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ 50 ವಿದ್ಯಾರ್ಥಿಗಳು ₹1 ಲಕ್ಷ ಮೊತ್ತದ ಸ್ಕಾಲರ್‌ಶಿಪ್‌ಗೆ ಆಯ್ಕೆಯಾಗಲಿದ್ದಾರೆ. ಅವರಿಗೆ ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಪ್ರಮಾಣ ಪತ್ರ ನೀಡಲಿದೆ. ಅವರು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಾಗ ಇನ್‌ಸೈಟ್ಸ್ ಸಂಸ್ಥೆ ಉಚಿತವಾಗಿ ತರಬೇತಿ ನೀಡಲಿದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಯೋಗೀಶ್, ಶಾಂತಿನಿಕೇತನ ಚಿತ್ರಕಲಾ ವಿದ್ಯಾಲಯದ ವಿಶ್ವಕರ್ಮ ಆಚಾರ್ಯ ಇದ್ದರು.
ಸ್ವಚ್ಛತಾ ವಿಷಯದಲ್ಲಿ ರಾಜ್ಯಕ್ಕೆ ಪ್ರಥಮ
ಸ್ವಚ್ಛತಾ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದೆ. ಸ್ವಚ್ಛತಾ ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆದಿದ್ದು ಉತ್ತಮವಾಗಿ ಕಾರ್ಯನಿರ್ವಹಿಸಿದ ಪ್ರಶಂಸೆಗೆ ಜಿಲ್ಲೆ ಪಾತ್ರವಾಗಿದೆ ಎಂದು ಎಚ್.ಎಸ್.ಕೀರ್ತನಾ ತಿಳಿಸಿದರು. ‘ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಂಸನಾ ಪತ್ರ ಪಡೆದುಕೊಂಡು ಬಂದಿದ್ದೇವೆ. ಸ್ವಚ್ಛತೆಗೆ ಆದ್ಯತೆ ನೀಡಿದ ಪಂಚಾಯತ್ ರಾಜ್ ಇಲಾಖೆಯ ಎಲ್ಲಾ ಸಿಬ್ಬಂದಿಯ ಶ್ರಮದಿಂದ ಇದು ಸಾಧ್ಯವಾಗಿದೆ’ ಎಂದರು. ನರೇಗಾ ಯೋಜನೆಯಡಿಯಲ್ಲಿ ಜಿಲ್ಲೆ ಶೇ 154ರಷ್ಟು ಸಾಧನೆ ಮಾಡಲಾಗಿದೆ. ಗುಡ್ಡಗಳ ಸುತ್ತಲ ನೀರು ಗಾಲುವೆಗಳನ್ನು ಸ್ವಚ್ಛಗೊಳಿಸಲು ವಿಶೇಷ ಅಭಿಯಾನ ಆರಂಭಿಸಲಾಗಿದೆ. ಕಾಫಿತೋಟಗಳಲ್ಲಿ ಕೆಲಸ ಸಿಗದ 50ವರ್ಷಕ್ಕೂ ಮೇಲ್ಪಟ್ಟವರು ಅಂಗವಿಕಲರು ಕೆಲಸ ಮಾಡುವ ಸಾಮರ್ಥ್ಯ ಇರುವ ಗರ್ಭಿಣಿಯರಿಗೆ ಕೆಲಸ ಕೊಡಲಾಗುತ್ತಿದೆ ಎಂದು ವಿವರಿಸಿದರು. ನಾಡಹಬ್ಬ ಮೈಸೂರು ದಸರಾದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಸ್ತದ್ಭಚಿತ್ರಕ್ಕೆ ಸಮಾಧಾನಕರ ಬಹುಮಾನ ಬಂದಿದೆ. ತೇಜಸ್ವಿ ವಿಸ್ಮಯ ಶೀರ್ಷಿಕೆಯಲ್ಲಿ ಸಿದ್ಧಪಡಿಸಿದ್ದ ಸ್ತಬ್ಧಚಿತ್ರಕ್ಕೆ ವಿಶೇಷ ಮನ್ನಣೆ ದೊರೆತಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.