ADVERTISEMENT

ಅಕ್ರಮ ತಡೆಯಲು ಜಿಲ್ಲೆಯ ಗಡಿಭಾಗಗಳಲ್ಲಿ ಕಟ್ಟೆಚ್ಚರ

ಆಂಧ್ರಪ್ರದೇಶ ಪೊಲೀಸರ ಸಹಕಾರ, ಅಗತ್ಯ ಬಿಗಿ ಬಂದೋಬಸ್ತ್‌ಗೆ ಕ್ರಮ: ಜಿಲ್ಲಾಧಿಕಾರಿ ಜ್ಯೋತ್ಸ್ನಾ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 11:38 IST
Last Updated 4 ಏಪ್ರಿಲ್ 2018, 11:38 IST

ಚಳ್ಳಕೆರೆ: ಚುನಾವಣೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾ ಆಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಚುನಾವಣಾಧಿಕಾರಿಗಳ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಆಂಧ್ರಪ್ರದೇಶದ ಗಡಿ ಭಾಗದ ಚಳ್ಳಕೆರೆ, ಹಿರಿಯೂರು ಮತ್ತು ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕದ ಗಡಿ ಭಾಗಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಆಂಧ್ರಪ್ರದೇಶದ ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿಗಳ ಸಹಕಾರ ಪಡೆಯಲಾಗುತ್ತದೆ ಎಂದು ತಿಳಿಸಿದರು.

ಆಂಧ್ರಪ್ರದೇಶದ ಗಡಿ ಭಾಗಗಳಲ್ಲಿ ಮದ್ಯ ಮಾರಾಟ, ಹಣಸಾಗಣೆಯಂತಹ ಕಾನೂನುಬಾಹಿರ ಚಟುವಟಿಕೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯ ಮೂರು ತಾಲ್ಲೂಕುಗಳ ಗಡಿಭಾಗಗಳಲ್ಲಿ 9 ಕಡೆ ಚೆಕ್‌ಪೋಸ್ಟ್‌ಗನ್ನು ಸ್ಥಾಪಿಸಲಾಗಿದೆ. ಈವ್ಯಾಪ್ತಿಯಲ್ಲಿ 8 ಪೊಲೀಸ್ ಠಾಣೆಗಳಿವೆ. ಪಾತಪ್ಪನಗುಡಿ, ಬೋಗೇನಹಳ್ಳಿ, ಮಲ್ಲಸಮುದ್ರ, ಯದ್ದಲಬೊಮ್ಮನಹಟ್ಟಿ, ತಮ್ಮೇನಹಳ್ಳಿ, ಉಡೇವು, ಹೊಸೂರು, ನಾಗಪ್ಪನಹಳ್ಳಿ ಗೇಟ್ ಹಾಗೂ ದೊಡ್ಡ ಚೆಲ್ಲೂರು ಬಳಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ದಿನದ 24 ಗಂಟೆಗಳ ಕಾಲ ಎಚ್ಚರವಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಅನಂತಪುರ ಜಿಲ್ಲೆಯ ಜಿಲ್ಲಾಧಿಕಾರಿ ವೀರಪಾಂಡ್ಯನ್ ಮಾತನಾಡಿ, ‘ಚುನಾವಣೆಗೆ ಸಂಬಂಧಿಸಿದಂತೆ ಮುಕ್ತ, ನ್ಯಾಯ ಸಮ್ಮತ ಚುನಾವಣೆಗೆ ಅಗತ್ಯ ಸಹಕಾರ ನೀಡಲಾಗುತ್ತದೆ. ಆಂಧ್ರಪ್ರದೇಶ ಮತ್ತು ಕರ್ನಾಟಕ ಪೊಲೀಸರು ಜಂಟಿಯಾಗಿ ಕಾಯನಿರ್ವಹಿಸಿ ಚುನಾವಣಾ ಅಕ್ರಮಗಳನ್ನು ತಡೆಯಲು ಶ್ರಮಿಸಲಿದ್ದಾರೆ. ಗಡಿಯಲ್ಲಿ ಸಂಚರಿಸುವ ವಾಹನಗಳನ್ನು ವಾಣಿಜ್ಯ ತೆರಿಗೆ ಅಧಿಕಾರಿಗಳ ತಂಡದೊಂದಿಗೆ ತಪಾಸಣೆ ಮಾಡಿ, ಪರಿಶೀಲನೆ ನಡೆಸಲಾಗುತ್ತದೆ’ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಚುನಾವಣಾ ಜಾಗೃತಿ ಸ್ವೀಪ್ ಸಮಿತಿ ಅಧ್ಯಕ್ಷ ಪಿ.ಎನ್. ರವೀಂದ್ರ, ಹೆಚ್ಚುವರಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಶ್ರೀನಾಥ ಎಂ. ಜೋಷಿ, ಕೆ. ಸಂಗಪ್ಪ ಅಬಕಾರಿ ಅಧಿಕಾರಿ ನಿರ್ಮಲಾ, ಅಬಕಾರಿ ಅಧಿಕಾರಿ ಅನಸೂಯ, ಚಳ್ಳಕೆರೆ ಚುನಾವಣಾಧಿಕಾರಿ ಆನಂದ್, ಮೊಳಕಾಲ್ಮುರು ಚುನಾವಣಾಧಿಕಾರಿ ಲಕ್ಷ್ಮಣ್, ಹಿರಿಯೂರು, ಚುನಾಣಾಧಿಕಾರಿ ರಾಜಗೋಪಾಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.