ಹೊಸದುರ್ಗ: ತಾಲ್ಲೂಕಿನ ಹಳ್ಳಿ ಹಳ್ಳಿಯಲ್ಲಿ ಮತದಾರರೇ ವಿಧಾನಸಭೆ ಚುನಾವಣೆ ಅಭ್ಯರ್ಥಿಗೆ ಹಣ ದಾನ ಮಾಡುತ್ತಿರುವುದು ಶ್ಲಾಘನೀಯ ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಘದ ಕಾರ್ಯಾಧ್ಯಕ್ಷ ಬಯಲಪ್ಪ ಹೇಳಿದರು.
ಪಟ್ಟಣದಲ್ಲಿ ಶನಿವಾರ ಸಂಜೆ ನಡೆದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.ಪ್ರಜಾಪ್ರಭುತ್ವದ ಆಶಯದ ಕೆಳಗೆ ಮತದಾರರು ಅಭ್ಯರ್ಥಿಗೆ ಚುನಾವಣೆ ವೆಚ್ಚದ ಹಣ ಕೊಟ್ಟು ಮತಹಾಕಿ ಗೆಲ್ಲಿಸಬೇಕು. ಒಂದು ವೋಟ್, ಒಂದು ನೋಟು, ಒಂದು ಊಟ ಈ ಮೂರನ್ನು ಮತದಾರರೇ ಸ್ವಯಂ ಪ್ರೇರಣೆಯಿಂದ ಕೊಟ್ಟು ಯೋಗ್ಯ ಅಭ್ಯರ್ಥಿ ಗೆಲ್ಲಿಸಬೇಕು ಎಂಬುದು ರೈತ ಸಂಘದ ಆಶಯವಾಗಿದೆ ಎಂದರು.
ನಮ್ಮ ಸಂಘದ ಆಶಯದಂತೆ ನಿಜವಾದ ಚುನಾವಣೆ ವ್ಯವಸ್ಥೆಯನ್ನು ಜಾರಿಗೆ ತರಲಿಕ್ಕೆ ಜನರು ಸಿದ್ಧರಾಗಿದ್ದಾರೆ. ಇಂತಹ ವ್ಯವಸ್ಥೆ ರಾಜ್ಯದೆಲ್ಲೆಡೆ ಬರಬೇಕು ಎಂದು ಮನವಿ ಮಾಡಿದರು.
ಮತದಾರಿಂದಲೇ ಹಣ ಪಡೆದು ಗೆಲ್ಲುವ ಜನಪ್ರತಿನಿಧಿ ಭ್ರಷ್ಟಾಚಾರ ರಹಿತವಾಗಿ ಜನಪರವಾಗಿ ಕೆಲಸ ಮಾಡಬೇಕು. ವೈಯಕ್ತಿಕ ಹಿತಾಸಕ್ತಿ ಎಲ್ಲಾ ಧರ್ಮ, ಜಾತಿಯ ಜನರನ್ನು ಸಮಾನವಾಗಿ ಕಾಣಬೇಕು. ಜನರ ಆಶಯದಂತೆ ಕೆಲಸ ಮಾಡದೇ ತಪ್ಪುದಾರಿ ತುಳಿದರೆ, ಹಣ ಮತ್ತು ಮತಕೊಟ್ಟು ಗೆಲ್ಲಿಸಿದ ಮತದಾರರು ಕಪಾಳ ಮೋಕ್ಷ ಮಾಡುತ್ತಾರೆ. ಗ್ರಾಮೀಣ ಶೈಲಿಯಲ್ಲಿ ಕೊಡಬೇಕಾದ ಎಲ್ಲಾ ಶಿಕ್ಷೆಯನ್ನು ಸೌಜನ್ಯದ ಚೌಕಟ್ಟಿನಲ್ಲಿ ಕೊಡುವ ಅಧಿಕಾರ ಮತದಾರರಿಗೆ ಇದೆ ಎಂಬುದನ್ನು ಜನಪ್ರತಿನಿಧಿ ಮರೆಯಬಾರದು. ಇಂತಹ ವ್ಯವಸ್ಥೆಯಿಂದ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಂಘದ ಸಂಪನ್ಮೂಲ ವ್ಯಕ್ತಿ ತಾರಿಕೆರೆ ಕರಿಸಿದ್ದಯ್ಯ, ತಾಲ್ಲೂಕು ಸಂಘದ ಅಧ್ಯಕ್ಷ ಕೊರಟಿಕೆರೆ ರಮೇಶ್, ಕಾರ್ಯದರ್ಶಿ ಓಂಕಾರಪ್ಪ, ಮುಖಂಡರಾದ ಮುರುಗೇಂದ್ರಪ್ಪ, ಕುಮಾರ್, ಓಂಕಾರಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.