ADVERTISEMENT

ಸಮಸ್ಯೆ ಸುಳಿಯಲ್ಲಿ ನಲುಗಿದ ‘ವೇದಾವತಿ’

ಹಿರಿಯೂರು ತಾಲ್ಲೂಕಿನ ಜೀವನಾಡಿ ನದಿಯ ಸೇತುವೆ ವಿಸ್ತರಣೆ, ಸ್ವಚ್ಛತೆ ಇನ್ನೂ ಕನಸು

ಬಿ.ಸುವರ್ಣ ಬಸವರಾಜ್
Published 4 ಜನವರಿ 2016, 9:54 IST
Last Updated 4 ಜನವರಿ 2016, 9:54 IST

ಹಿರಿಯೂರು: ನಗರದ ಮಧ್ಯಭಾಗದಲ್ಲಿ ಹಾದು ಹೋಗಿರುವ ವೇದಾವತಿ ನದಿಗೆ 20 ವರ್ಷಗಳ ಹಿಂದೆ ನಿರ್ಮಿಸಿದ್ದ ಸೇತುವೆ ಆಡಳಿತ ನಡೆಸುವವರ ಬೇಜವಾಬ್ದಾರಿಯಿಂದ ಶಿಥಿಲಗೊಂಡಿದೆ.

ಜಲಾಶಯ ನಿರ್ಮಿಸಿದ ಸಂದರ್ಭ ದಲ್ಲಿ ಕಟ್ಟಿದ್ದ ಸೇತುವೆ ಎರಡು ಸಣ್ಣ ಕಾರುಗಳು ಒಮ್ಮೆಗೆ ಚಲಿಸದಷ್ಟು ಕಿರಿದಾಗಿತ್ತು. ವಾಣಿ ಸಕ್ಕರೆ ಕಾರ್ಖಾನೆ ಕಬ್ಬು ಅರೆಯುತ್ತಿದ್ದ ಕಾಲದಲ್ಲಿ, ಕೃಷಿ ಉತ್ಪನ್ನ ಮಾರುಕಟ್ಟೆಗೆ ಶೇಂಗಾ, ಸೂರ್ಯಕಾಂತಿ ಬೆಳೆ ಮಾರಾಟಕ್ಕೆ ಬಂದ ಸಂದರ್ಭದಲ್ಲಿ ಸೇತುವೆ ಹತ್ತಿರ ಗಂಟೆ ಗಟ್ಟಲೇ ಸಂಚಾರ ಅಸ್ತವ್ಯಸ್ತವಾಗುತ್ತಿತ್ತು.

ಎತ್ತಿನ ಗಾಡಿಗಳಲ್ಲಿ ಶೇಂಗಾ, ಸೂರ್ಯಕಾಂತಿ ತುಂಬಿಕೊಂಡು ಬಂದರಂತೂ ವಾಹನ ಸವಾರರ ಪಾಡು ಹೇಳತೀರದಂತಿರುತ್ತಿತ್ತು. ಪರ್ಯಾಯ ಮಾರ್ಗ ಇಲ್ಲದ ಕಾರಣ ವಾಹನ ಸವಾರರು ಆಡಳಿತ ನಡೆಸುತ್ತಿದ್ದವರಿಗೆ ಹಿಡಿ ಶಾಪ ಹಾಕುತ್ತ ನಿಲ್ಲುತ್ತಿದ್ದ ದೃಶ್ಯ ಮಾಮೂಲಾಗಿತ್ತು. ಆಗ ಪ್ರಭಾವಿ ಸಚಿವ ರಾಗಿದ್ದ ಕೆ.ಎಚ್.ರಂಗನಾಥ್ ಅವರು ಸಾರ್ವಜನಿಕರ ಅನುಕೂಲಕ್ಕೆ ವಿಶಾಲ ಸೇತುವೆ ಕಾಮಗಾರಿಗೆ ಮಂಜೂರಾತಿ ಕೊಡಿಸಿದ್ದರು.

ಕೇವಲ ಎರಡು ವರ್ಷ ಗಳಲ್ಲಿ ಸೇತುವೆ ಕಾಮಗಾರಿ ಪೂರ್ಣ ಗೊಂಡಿತು. ಅದನ್ನು ಉದ್ಘಾಟಿಸುವ ಭಾಗ್ಯ ರಂಗನಾಥ್ ಅವರ ನಂತರ ಸಚಿವರಾದ ಡಿ.ಮಂಜುನಾಥ ಅವರಿಗೆ ಲಭಿಸಿತ್ತು.

ಸೇತುವೆ ನಿರ್ಮಾಣಗೊಂಡ 20 ವರ್ಷಗಳಲ್ಲಿ ಒಂದೆರಡು ಬಾರಿ ಮಾತ್ರ ಅಲ್ಲಿನ ರಸ್ತೆಗೆ ಡಾಂಬರು ಹಾಕಲಾಗಿದೆ. ಈಗ ಸೇತುವೆಯ ಬಹಳಷ್ಟು ಕಡೆ ಡಾಂಬರು ಕಿತ್ತು ಹೋಗಿದ್ದು, ಸಣ್ಣಸಣ್ಣ ಗುಂಡಿಗಳು ಬಿದ್ದಿವೆ. ಸೇತುವೆ ಅಂಚಿಗೆ ಪಾದಚಾರಿಗಳ ಓಡಾಟಕ್ಕೆ  ಹಾಕಿರುವ ಸಿಮೆಂಟ್ ಸ್ಲ್ಯಾಬ್‌ಗಳು ಬಹಳಷ್ಟು ಕಡೆ ಮುರಿದು ಹೋಗಿವೆ. ವಿಚಿತ್ರವೆಂದರೆ ಸೇತುವೆಯಲ್ಲಿರುವ ಬೀದಿ ದೀಪಗಳು ಉರಿಯುವುದೇ ಇಲ್ಲ. ಹೀಗಾಗಿ ರಾತ್ರಿ ವೇಳೆ ಪಾದಚಾರಿಗಳು ಅನಿವಾರ್ಯ ವಾಗಿ ರಸ್ತೆಯ ಮೇಲೆ ನಡೆದುಕೊಂಡು ಹೋಗುತ್ತಾರೆ.

ಅಂತಹ ಸೇತುವೆಯನ್ನು ಈಗಿನ ವ್ಯವಸ್ಥೆಯಲ್ಲಿ ಕಟ್ಟುವುದಂತೂ ಕನಸಿನ ಮಾತು, ಸರಿಯಾಗಿ ನಿರ್ವಹಣೆ ಮಾಡುವುದಾದರೂ ಬೇಡವೇ ಎಂಬ ಪ್ರಶ್ನೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ ಹೊರಕೇರಪ್ಪ ಅವರದ್ದು.

ಮಲಿನ ನದಿ: ‘ಸೇತುವೆಯ ಕೆಳಗೆ ಹರಿಯುವ ವೇದಾವತಿ ನದಿ ಸ್ವಚ್ಛವಾಗು ವುದು ವರ್ಷದಲ್ಲಿ ಒಂದೆರಡು ಬಾರಿ ಬಿರು ಮಳೆ ಬಂದು ನೀರು ಹರಿದಾಗ ಮಾತ್ರ. ಉಳಿದಂತೆ ಪ್ರತಿದಿನ ನಗರದ ತ್ಯಾಜ್ಯವೆಲ್ಲ ನದಿಯಲ್ಲಿ ತುಂಬಿರುತ್ತದೆ. ಇಷ್ಟು ಸಾಲದು ಎನ್ನುವಂತೆ ಮಾಂಸ ಮಾರುಕಟ್ಟೆಯ ತ್ಯಾಜ್ಯವನ್ನೆಲ್ಲ ನದಿಗೆ ತಂದು ಸುರಿಯಲಾಗುತ್ತದೆ. ಹೀಗಾಗಿ ಇಡೀ ನದಿ ಸಾಂಕ್ರಾಮಿಕ ರೋಗಗಳ ತಾಣವಾಗಿದೆ ಎಂದು ಅವರು ಬೇಸರ ವ್ಯಕ್ತಡಿಸುತ್ತಾರೆ.

ವೇದಾವತಿ ನದಿ ಹಾಗೂ ಸೇತುವೆಗೆ ಆಡಳಿತ ನಡೆಸುವವರು ಯಾವಾಗ ಮುಕ್ತಿ ದೊರಕಿಸುತ್ತಾರೆ ಎಂದು ಕಾಯುತ್ತಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.