ಹಿರಿಯೂರು: ಜಿ.ಎಸ್. ಶಿವರುದ್ರಪ್ಪ ಮೊದಲಾದ ವಿದ್ವಾಂಸರು ನನಗೆ ಕಾಲೇಜಿನಲ್ಲಿ ಕಲಿಸಿದ ಗುರುಗಳು. ಆದರೆ, ಸಿರಿಯಜ್ಜಿ, ದಾನಜ್ಜಿ, ಹನುಮಜ್ಜಿ, ಕ್ಯಾತಗಾನಹಳ್ಳಿ ಗಿರಿಯಯ್ಯ ಇವರೆಲ್ಲ, ಯಾವ ವಿದ್ಯೆ ಅಹಂಕಾರ ಕಲಿಸುತ್ತದೆ, ಯಾವುದು ಅಹಂಕಾರ ಅಳಿಸುತ್ತದೆ ಎನ್ನುವುದನ್ನು ಕಲಿಸಿದ ದೇಸೀ ಗುರುಗಳು ಎಂದು ಖ್ಯಾತ ಜಾನಪದ ವಿದ್ವಾಂಸ ಕೃಷ್ಣಮೂರ್ತಿ ಹನೂರು ಹೇಳಿದರು.
ನಗರದ ನೆಹರು ಮೈದಾನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಾಲ್ಲೂಕುಮಟ್ಟದ ಮೂರನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಬಯಲುಸೀಮೆಯ ಈ ನೆಲದಲ್ಲಿ ಕಲಿಯಬೇಕಾದ್ದು ಸಾಕಷ್ಟಿದೆ. ಇಲ್ಲಿನ ಸಾಮಾನ್ಯ ಜನರ ನಡುವೆ ದೊಡ್ಡದಾದ ಸಾಂಸ್ಕೃತಿಕ ಶ್ರೀಮಂತಿಕೆ ಇರುವುದನ್ನು ಕಾಣಬಹುದಾಗಿದೆ. ಕಟ್ಟಿದ ಕೋಟೆ, ಅರಮನೆಗಳು ಮುರಿದು ಬಿದ್ದಿವೆ. ಆದರೆ, ಹಿರಿಯರು ಕಟ್ಟಿ ಹೋಗಿರುವ ಸಾಂಸ್ಕೃತಿಕ ಸಿರಿವಂತಿಕೆ ಅಳಿಯದೇ ಉಳಿದಿದೆ. ಕನ್ನಡ ಭಾಷೆ ಸಾಂಸ್ಕೃತಿಕವಾಗಿ ಬೇರೆಲ್ಲ ಭಾಷೆಗಳಿಗಿಂತ ಕೆಲವು ಹೆಜ್ಜೆ ಮುಂದಿದೆ. ಕುವೆಂಪು, ಬೇಂದ್ರೆ, ಅಡಿಗರು, ಯಶವಂತ ಚಿತ್ತಾಲ ಮೊದಲಾದವರ ಸಾಹಿತ್ಯವನ್ನು ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿದ್ದರೆ ಹತ್ತಾರು ನೋಬೆಲ್ ಬಹುಮಾನಗಳು ಹುಡುಕಿಕೊಂಡು ಬರುತ್ತಿದ್ದವು.
ಮಕ್ಕಳು ಕನ್ನಡದಲ್ಲಿ ಓದಬೇಕೋ, ಇಂಗ್ಲಿಷ್‌ನಲ್ಲಿ ಓದಬೇಕೋ ಎಂಬ ದೊಡ್ಡ ಸಮಸ್ಯೆ ಪೋಷಕರನ್ನು ಕಾಡುತ್ತಿದೆ. ಯಾವ ಭಾಷೆ ಓದಿದರೆ ಹೆಚ್ಚು ಲಾಭ ಎಂಬ ಲೆಕ್ಕಾಚಾರ ಆರಂಭವಾಗಿದೆ. ಇಂತಹ ಯಾವುದೇ ಲೆಕ್ಕಾಚಾರಗಳಿಲ್ಲದೇ ಭೀಮಯ್ಯ, ಸಿರಿಯಜ್ಜಿ, ಬೆಳಗೆರೆ ಶಾಸ್ತ್ರಿಗಳಂತಹವರು ಬದುಕಿಲ್ಲವೆ? ಎಂದು ಪ್ರಶ್ನಿಸಿದ ಅವರು, ಈಗಿನ ಯುವಕರು ಓದಿ ಅತ್ತ ಊರಿಗೆ ಹಿಂದಿರುಗಲಾಗದೆ, ಇತ್ತ ಬಯಸಿದ ಉದ್ಯೋಗವೂ ಸಿಗದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಹಣ ಎಲ್ಲರನ್ನೂ ಉದ್ಧಾರ ಮಾಡದು. ಆದರೆ ಸಾಹಿತ್ಯ-ಸಂಸ್ಕೃತಿ ನಮ್ಮನ್ನು ಬೆಳೆಸುತ್ತದೆ. ಸಾಹಿತ್ಯ ಶ್ರೀಮಂತಿಕೆಗೆ ಸಮನಾಗಿ ರಾಜಕೀಯ ಶ್ರೀಮಂತಿಕೆ ಬೆಳೆಯಬೇಕಿದೆ. ತಮಿಳುನಾಡಿನ ರಾಜಕಾರಣಿಗಳಲ್ಲಿ ರಾಜಕೀಯ ಇಚ್ಛಾಶಕ್ತಿ ಇರುವ ಕಾರಣ ಹೋರಾಟ ಮಾಡದೆಯೇ ಅವರಿಗೆ ಸೌಲಭ್ಯಗಳು ಸಿಗುತ್ತಿವೆ. ನಾವು ಇಚ್ಛಾಶಕ್ತಿಯ ಕೊರತೆಯ ಕಾರಣದಿಂದ ಹೋರಾಟ ನಡೆಸಿದರೂ ಕೇಂದ್ರದಿಂದ ನ್ಯಾಯವಾಗಿ ಸಿಗಬೇಕಿರುವ ಸೌಲಭ್ಯಗಳನ್ನು ಪಡೆಯಲಾಗುತ್ತಿಲ್ಲ ಎಂದು ಕೃಷ್ಣಮೂರ್ತಿ ವಿಷಾದಿಸಿದರು.
ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಎಚ್.ವಿ. ವೀರಭದ್ರಯ್ಯ ಅವರು ನೂತನ ಸಮ್ಮೇಳನಾಧ್ಯಕ್ಷರಿಗೆ ಕನ್ನಡ ಧ್ವಜ ಹಸ್ತಾಂತರಿಸಿ ಮಾತನಾಡಿ, ಸಾಹಿತ್ಯ ಎಲ್ಲರಿಗೂ ಕೊಡುವ ಉದಾರತೆ ನಮ್ಮಲ್ಲಿ ಬರಲಿಲ್ಲ. ನಮ್ಮ ಹಿರಿಯರು ನಮಗೆ ನಡೆ, ನುಡಿ, ಉಣ್ಣುವುದು, ಉಡುವುದು, ಬದುಕನ್ನು ನಿರಾಕರಿಸದೇ ಅಪ್ಪಿಕೊಳ್ಳುವುದು ಹೇಗೆಂದು ಕಲಿಸಿದರು. ಎಲ್ಲರ ಬದುಕು, ಭಾವನೆಗಳನ್ನು ಗೌರವಿಸುವುದನ್ನು ನಾವು ಕಲಿಯಬೇಕಿದೆ. ಸಾಹಿತ್ಯ ಸಮ್ಮೇಳನಗಳು ಮಾನವೀಯ ಮೌಲ್ಯಗಳ ಕಣ್ಣು ತೆರೆಸುವ, ಜನರಿಗೆ ಅರ್ಥವತ್ತಾದ ಬದುಕು ಕಟ್ಟಿಕೊಳ್ಳಲು ಅಗತ್ಯವಾದ ಮಾರ್ಗದರ್ಶನ ಮಾಡಬೇಕು ಎಂದು ಕರೆ ನೀಡಿದರು.
ಸಮ್ಮೇಳನಾಧ್ಯಕ್ಷ ಮಾರೇನಹಳ್ಳಿ ಭೀಮಯ್ಯ ಮಾತನಾಡಿ, ಕುವೆಂಪು ಅವರ ರಾಮಾಯಣದರ್ಶನಂ ಕೃತಿಯನ್ನು ಗ್ರಹಿಸುತ್ತಾ ಹೋದಂತೆ ದೈವ ಸ್ವರೂಪವೇ ಕಣ್ಣೆದುರು ಬಂದಂತೆ ಆಯಿತು. ನಂತರ, ಅನುವಾದ ಮಾಡುವ ಕೆಲಸಕ್ಕೆ ತೊಡಗಿದೆ. ಯುವಕರು ರಾಗ-ದ್ವೇಷಗಳನ್ನು ತೊರೆದು, ಪರಿಶುದ್ಧ ಬದುಕು ನಡೆಸಬೇಕು. ಶಿಸ್ತು, ಸಂಯಮದ ಮೂಲಕ ಮಾತ್ರ ಉತ್ತಮವಾದುದನ್ನು ಸಾಧಿಸಲು ಸಾಧ್ಯ ಎಂಬ ಸತ್ಯವನ್ನು ಅರಿಯಬೇಕು ಎಂದು ತಿಳಿಸಿದರು.
ತಾಲ್ಲೂಕು ಕಸಾಪದ ನಿಕಟಪೂರ್ವ ಅಧ್ಯಕ್ಷ ಚಂದ್ರಯ್ಯ, ಡಾ.ಎಂ.ಎನ್. ಶ್ರೀಪತಿ, ಜಿಲ್ಲಾ ಕಸಾಪ ಅಧ್ಯಕ್ಷ ಆರ್. ಮಲ್ಲಿಕಾರ್ಜುನಯ್ಯ, ಕೇಂದ್ರ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಸಂಗಮೇಶ ಬಾದವಾಡಗಿ, ಬಿ.ವಿ. ಮಾಧವ ಮಾತನಾಡಿದರು.
ಜಿ. ಧನಂಜಯಕುಮಾರ್, ವೈ.ಎಸ್. ಅಶ್ವತ್ಥಕುಮಾರ್, ಎಚ್.ಟಿ. ಚಂದ್ರಶೇಖರಯ್ಯ, ವಿಶ್ವನಾಥ್, ರಾಮಣ್ಣ, ಸಿ.ಆರ್. ಮೂರ್ತಿ, ಜಯಣ್ಣ, ಯಳನಾಡು ಅಂಜನಪ್ಪ, ಅಷ್ವಕ್ ಅಹಮದ್ ಉಪಸ್ಥಿತರಿದ್ದರು.
ಮಲ್ಲಪ್ಪನಹಳ್ಳಿ ಮಹಾಲಿಂಗಯ್ಯ ಸ್ವಾಗತಿಸಿದರು. ಜಿ.ಡಿ. ಚಿತ್ತಣ್ಣ ಕಾರ್ಯಕ್ರಮ ನಿರೂಪಿಸಿದರು. ಇತ್ತೀಚೆಗೆ ನಿಧನರಾದ ಬೆಳಗೆರೆ ಕೃಷ್ಣಶಾಸ್ತ್ರಿಗೆ ಸಂತಾಪ ಸೂಚಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.