ADVERTISEMENT

ಕೇಂದ್ರದ ಅನುದಾನದಲ್ಲಿ ₹ 1,754 ಕೋಟಿ ಖೋತಾ: ಜೆ.ಯಾದವರೆಡ್ಡಿ ಅಸಮಾಧಾನ

ಕೇಂದ್ರ ಸಚಿವ, ಸಂಸದರಿಗೆ ಇಚ್ಛಾಶಕ್ತಿ ಕೊರತೆ; ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 13:38 IST
Last Updated 6 ನವೆಂಬರ್ 2024, 13:38 IST
ಯಾದವರೆಡ್ಡಿ
ಯಾದವರೆಡ್ಡಿ   

ಚಿತ್ರದುರ್ಗ: ‘ಭದ್ರಾ ಮೇಲ್ದಂಡೆ ಯೋಜನೆ ಸಂಬಂಧ ರಾಜ್ಯ ಸರ್ಕಾರ ಕಳೆದ ಅ.28ರಂದು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಮರು ಪ್ರಸ್ತಾವ ಸಲ್ಲಿಸಿದೆ. ಅದರಂತೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ ₹ 5,300 ಕೋಟಿ ಅನುದಾನದಲ್ಲಿ ₹ 1,754 ಕೋಟಿ ಖೋತಾ ಆಗುವ ಸಾಧ್ಯತೆ ಇದೆ. ಕೇಂದ್ರ ಸಚಿವರು ಹಾಗೂ ಸಂಸದರ ಬದ್ಧತೆಯ ಕೊರತೆಯಿಂದ ಅನ್ಯಾಯವಾಗಿದೆ’ ಎಂದು ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ನಾಯಕ ಜೆ.ಯಾದವರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

‘ಮರು ಪ್ರಸ್ತಾವದಲ್ಲಿ ಮಾರ್ಚ್ 2024ರವರೆಗೆ ಖರ್ಚು ಮಾಡಲಾದ ಮಾಹಿತಿ ಸಲ್ಲಿಸಲಾಗಿದೆ. ಮಾರ್ಚ್ ಅಂತ್ಯಕ್ಕೆ₹ 8,785 ಕೋಟಿ ಖರ್ಚು ಮಾಡಲಾಗಿದ್ದು ₹ 5910 ಕೋಟಿ ಬಾಕಿ ಉಳಿಯುತ್ತದೆ. ಈ ಮೊತ್ತಕ್ಕೆ ಕೇಂದ್ರ ಸರ್ಕಾರ ಶೇ 60ರಷ್ಟು ಅನುದಾನವ ನೀಡಿದ್ದಲ್ಲಿ ಕೇವಲ ₹ 3,546 ಕೋಟಿ ಲಭ್ಯವಾಗುತ್ತದೆ. ಇದರಿಂದ 2 ವರ್ಷಕ್ಕೆ ₹ 1754 ಕೋಟಿ ಖೋತವಾಗುತ್ತದೆ. ಕೇಂದ್ರ ಸರ್ಕಾರ ಕೊಟ್ಟಷ್ಟು ಅನುದಾನ ಕೊಡಲಿ ಎಂಬ ನಿರ್ಧಾರಕ್ಕೆ ರಾಜ್ಯ ಸರ್ಕಾರವೂ ಬಂದಂತಿದೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ 2023-24 ನೇ ಸಾಲಿನ ಬಜೆಟ್‌ನಲ್ಲಿ₹ 5,300 ಕೋಟಿ ಅನುದಾನ ಘೋಷಣೆ ಮಾಡಿತ್ತು. ಅನುದಾನ ಬಿಡುಗಡೆ ಸಂಬಂಧ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹಾಕಿತ್ತು. ಸೆ. 5ರಂದು ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬರ್ಶಿ ಮುಖರ್ಜಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಅನುದಾನ ಬಿಡುಗಡೆಗೆ ಆಕ್ಷೇಪಣೆ ವ್ಯಕ್ತಪಡಿಸಿ ಕೆಲ ತಾಂತ್ರಿಕ ಮಾಹಿತಿ ಕೋರಿದ್ದರು’ ಎಂದರು.

ADVERTISEMENT

‘ಭದ್ರಾ ಮೇಲ್ದಂಡೆಗೆ ರಾಜ್ಯ ಸರ್ಕಾರ ಈವರೆಗೆ ಮಾಡಿದ ವೆಚ್ಚ, ಯೋಜನೆ ಪೂರ್ಣಗೊಳಿಸಲು ಬೇಕಾದ ಬಾಕಿ ಮೊತ್ತ, ಭೌಗೋಳಿಕ ಹಂಚಿಕೆ ಹಾಗೂ ಹಣಕಾಸು ಲಭ್ಯತೆ ನೋಡಿಕೊಂಡು ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂಬ ಸಂಗತಿಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಕೇಂದ್ರದ ಈ ಪತ್ರ ಬಂದಾಗ ಅನುದಾನ ಖೋತಾ ಆಗುವ ಸಾಧ್ಯತೆ ಇದೆ ಎಂಬ ಮುನ್ಸೂಚನೆ ಆಗಲೇ ಸಿಕ್ಕಿತ್ತು. ಅದರಂತೆ ಅನುದಾನ ಕಡಿತಗೊಳ್ಳುವುದು ಬಹುತೇಕ ಖಚಿತವಾಗಿದೆ’ ಎಂದರು.

‘ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಣೆಯಾಗಲು ಕೇಂದ್ರ ನಿರ್ಧರಿಸುವಾಗಲೇ ರಾಜ್ಯ ಸರ್ಕಾರ ಎಲ್ಲಾ ತಾಂತ್ರಿಕ ಮಾಹಿತಿಯನ್ನು ಒದಗಿಸಿತ್ತು. ಆದರೂ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ಬರೆದ ಪತ್ರ ಅನುದಾನ ಬಿಡುಗಡೆಗೆ ಕೇಂದ್ರ ಮಾಡುತ್ತಿರುವ ರಾಜಕಾರಣದ ಭಾಗ ಎಂಬದು ರಹಸ್ಯವಾಗಿ ಉಳಿದಿಲ್ಲ. ಅನುದಾನ ಬಿಡುಗಡೆಗೆ ಕಾಲಹರಣ ಮಾಡುವ ಉದ್ದೇಶದಿಂದಲೇ ಈ ಪತ್ರ ಬರೆಯಲಾಗಿತ್ತು’ ಎಂದು ಆರೋಪಿಸಿದರು.

‘ಮಾರ್ಚ್ 2022ರವರೆಗೆ ಖರ್ಚು ಮಾಡಿದ ಅನುದಾನ ಆಧರಿಸಿ ₹ 5300 ಕೋಟಿ ಕೇಂದ್ರದಿಂದ ಲಭ್ಯವಾಗಬೇಕಿತ್ತು. ಅಂದರೆ ₹ 14, 697 ಕೋಟಿ ಯೋಜನಾ ವೆಚ್ಚದಲ್ಲಿ ₹ 5,528 ಕೋಟಿ ರಾಜ್ಯ ಸರ್ಕಾರ ಖರ್ಚು ಮಾಡಿತ್ತು. ಉಳಿದ 9,168 ಕೋಟಿಯಲ್ಲಿ ಕೇಂದ್ರ ಸರ್ಕಾರ ತನ್ನ ಪಾಲಿನ ಶೇ 60 ರಷ್ಟು ಮೊತ್ತ 5,501 ಕೋಟಿ ಕೊಡಬೇಕಾಗಿದ್ದು ಅದನ್ನು ₹ 5,300 ಕೋಟಿಗೆ ಸೀಮಿತಗೊಳಿಸಲಾಗಿತ್ತು’ ಎಂದರು.

ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಾಬು, ರೈತ ಸಂಘ ಜಿಲ್ಲಾ ಘಟಕದ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ ಇದ್ದರು.

ಸಚಿವ ಸೋಮಣ್ಣ ಮಾತು ಉಳಿಸಿಕೊಳ್ಳಲಿ

ಚಿತ್ರದುರ್ಗಕ್ಕೆ ಬಂದಿದ್ದ ಜಲಶಕ್ತಿಯ ರಾಜ್ಯ ಸಚಿವ ವಿ.ಸೋಮಣ್ಣ ಅವರು ನೀರಾವರಿ ಅನುಷ್ಢಾನ ಸಮಿತಿಯೊಂದಿಗೆ ಸಭೆ ನಡೆಸಿ ಒಂದೂವರೆ ತಿಂಗಳ ಒಳಗಾಗಿ ಕೇಂದ್ರದಿಂದ ಮೊದಲ ಕಂತಿನ ಅನುದಾನ ಬಿಡುಗಡೆ ಮಾಡಿಸುವುದಾಗಿ ಭರವಸೆ ನೀಡಿ ಹೋಗಿದ್ದರು. ಈಗ ಗಡುವು ಹತ್ತಿರ ಬಂದಿದೆ. ಸಚಿವರು ಮಾತು ಉಳಿಸಿಕೊಳ್ಳಲಿ’ ಎಂದು ಸಮಿತಿ ಸದಸ್ಯರು ಒತ್ತಾಯಿಸಿದರು. ‘ಭದ್ರಾ ಮೇಲ್ದಂಡೆ ಜಾರಿ ವಿಚಾರದಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರಿಗೆ ಬದ್ಧತೆ ಇಲ್ಲವಾಗಿದೆ. ಅವರು ಪ್ರಧಾನಿ ನರೇಂದ್ರ ಮೋದಿ ಮುಂದೆ ನಿಂತು ಮಾತನಾಡುವ ಪರಿಸ್ಥಿತಿಯಿಲ್ಲ. ಈಗಲಾದರೂ ರಾಜ್ಯದ ಬಿಜೆಪಿ ಸಂಸದರು ಹೊರ ಬಂದು ಕೇಂದ್ರದಿಂದ ಭದ್ರಾ ಮೇಲ್ಡಂಡೆಗೆ ಅನುದಾನ ಬಿಡುಗಡೆ ಮಾಡಿಸುವುದರ ಮೂಲಕ ಇಚ್ಚಾಶಕ್ತಿ ಪ್ರದರ್ಶಿಸಲಿ’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.