ನೋವು–ನಲಿವುಗಳೊಂದಿಗೆ 2021 ಕಳೆದ ಜಿಲ್ಲೆಯ ಜನ
ಜ. 2: ಕೋವಿಡ್ ಕಾರಣಕ್ಕೆ ಮುಚ್ಚಿದ್ದ ಕಾಲೇಜುಗಳು ಆರಂಭ.
ಜ. 12: ಜನಸೇವಾ ಸಮಾವೇಶದಲ್ಲಿ ಆಗ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಲಕ್ಷ್ಮಣ ಸವದಿ, ಶ್ರೀರಾಮುಲು ಭಾಗಿ.
ಜ. 13: ಪ್ರಥಮ ಬಾರಿ ಬೆಂಗಳೂರಿನಿಂದ ಕೋಟೆನಗರಿಗೆ ಮೊದಲ ಹಂತವಾಗಿ ತಲುಪಿದ 11 ಸಾವಿರ ಡೋಸ್ ಕೋವ್ಯಾಕ್ಸಿನ್ ಲಸಿಕೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸ್ವಾಗತ.
ಜ. 16: ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ.
ಜ.17: ಆಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭಕ್ತಿಪೂರ್ವಕ ನಿಧಿ ಸಮರ್ಪಣೆ ಕಾರ್ಯಕ್ರಮಕ್ಕೆ ನಟಿ ಮಾಳವಿಕಾ ಅವಿನಾಶ್ ಚಾಲನೆ.
ಜ. 18: ಲಸಿಕೆ ಪಡೆದ ಕೆಲವರಿಗೆ ವಾಂತಿ, ಮೈ ಕಡಿತ. ಲಸಿಕೆ ಪಡೆದವರಲ್ಲಿ ಕಂಡುಬರದ ಗಂಭೀರ ಸ್ವರೂಪದ ಸಮಸ್ಯೆ.
ಜ. 24: ಪರಿಶಿಷ್ಟ ಪಂಗಡದ ಮೀಸಲಾತಿ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಕುರುಬ ಸಮುದಾಯ ಹೋರಾಟದ ಪಾದಯಾತ್ರೆ 165 ಕಿ.ಮೀ. ದೂರ ಕ್ರಮಿಸಿ ಚಿತ್ರದುರ್ಗ ಪ್ರವೇಶ.
ಜ. 27: ಬಿಜೆಪಿ ರಾಜ್ಯ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಭಾಗಿ.
ಫೆ. 2: ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ ‘2ಎ’ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಕೂಡಲಸಂಗಮದಿಂದ ಬೆಂಗಳೂರಿಗೆ ತೆರಳುತ್ತಿರುವ ಪಾದಯಾತ್ರೆ ಸುಮಾರು 400 ಕಿ.ಮೀ. ಕ್ರಮಿಸಿ ಚಿತ್ರದುರ್ಗ ಜಿಲ್ಲೆಗೆ ಪ್ರವೇಶ.
ಫೆ. 21: ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಆದಿಕವಿ ಪುರಸ್ಕಾರ. ಕೋವಿಡ್ ಕಾರಣ ಸರಳವಾಗಿ ನೆರವೇರಿದ ತರಳಬಾಳು ಹುಣ್ಣಿಮೆ ಮಹೋತ್ಸವ.
ಫೆ. 23: ಆರೋಪಿಗಳಿಂದ ಅಡಿಕೆ, ವಾಹನ ಸೇರಿ ₹ 1.21 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡ ಪೊಲೀಸರು.
ಮಾ. 29: ಮಧ್ಯ ಕರ್ನಾಟಕದ ಐತಿಹಾಸಿಕ ನಾಯಕನಹಟ್ಟಿ ಗುರುತಿಪ್ಪೇರುದ್ರಸ್ವಾಮಿ ವಾರ್ಷಿಕ ಮಹಾ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ಉಳಿದಂತೆ ಈ ತಿಂಗಳಲ್ಲಿ ಅಷ್ಟೇನೂ ಗಂಭೀರವಾದ ಘಟನೆಗಳು ಜಿಲ್ಲೆಯಲ್ಲಿ ನಡೆಯಲಿಲ್ಲ.
2021ರ ಏಪ್ರಿಲ್‌ನಲ್ಲಿ ನಡೆಯಬೇಕಿದ್ದ ದುರ್ಗದ ಅಧಿದೇವತೆ ಏಕನಾಥೇಶ್ವರಿ ದೇವಿಯ ಜಾತ್ರೆ ರದ್ದು. ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮ ದೇವಿಯರ ಇತಿಹಾಸ ಪ್ರಸಿದ್ಧ ಅಕ್ಕ–ತಂಗಿ ಭೇಟಿಯೂ ರದ್ದು.
ಏ. 7: ಜಿಲ್ಲೆಯಲ್ಲೂ ದೊಡ್ಡ ಸುದ್ದಿಯಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೌಕರರ ಮುಷ್ಕರ.
ಏ. 8: ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಎಂ. ಚಂದ್ರಪ್ಪ.
ಏ. 9: ಮುಷ್ಕರದ ನಡುವೆಯೂ ಸಾರಿಗೆ ಸಂಸ್ಥೆಯ ಬಸ್ ಸಂಚಾರ. ಹಲವು ದಿನಗಳ ಬಳಿಕ ಬಸ್ ಸಂಚಾರ ಎಂದಿನಂತೆ ಆರಂಭ.
ಬುದ್ಧ ಪೂರ್ಣಿಮೆ ಆಜುಬಾಜು ಅವಧಿಯಲ್ಲಿ ನಡೆಯಬೇಕಿದ್ದ ಪಾಳೆಗಾರರ ಕುಲದೇವತೆ ಉಚ್ಚಂಗಿಯಲ್ಲಮ್ಮ ದೇವಿ ಜಾತ್ರೆ ಕೂಡ ರದ್ದು.
ಮೇ. 15: ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ಸಿಗದೆ ಕಂಗೆಟ್ಟ ಕೊರೊನಾ ಸೋಂಕಿತೆಯೊಬ್ಬರು ಆಂಬುಲೆನ್ಸ್‌ನಲ್ಲೇ ಆಮ್ಲಜನಕದ ಆಸರೆಯಲ್ಲಿ ರಾತ್ರಿ ಕಳೆದಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಅವರ ಸೂಚನೆಯ ಬಳಿಕವೂ ಹಾಸಿಗೆಗೆ ಪರದಾಡುವ ಸ್ಥಿತಿ ಮೇ ಅವಧಿಯಲ್ಲಿ ನಿವಾರಣೆ ಆಗಿರಲಿಲ್ಲ.
ಜೂನ್. 1: ಗಣಿ ಮತ್ತು ಉಕ್ಕು ಉದ್ಯಮಿ ಹಾಗೂ ಇಆರ್‌ಎಂ ಸಮೂಹದ ಅಧ್ಯಕ್ಷ ಆರ್. ಪ್ರವೀಣ್ ಚಂದ್ರ ನೇತೃತ್ವದ ಜಾನ್ ಮೈನ್ಸ್ ಕೋವಿಡ್ ವಿರುದ್ಧದ ಹೋರಾಟಕ್ಕೆ ₹ 15.23 ಲಕ್ಷ ಮೌಲ್ಯದ 20 ‘ಆಮ್ಲಜನಕ ಸಾಂದ್ರಕ’ಗಳನ್ನು ಜಿಲ್ಲಾಡಳಿತಕ್ಕೆ ನೀಡಿತ್ತು.
ಜೂನ್. 3: ಕೋವಿಡ್ ಎರಡನೇ ಅಲೆ ಸಮರ್ಥವಾಗಿ ಎದುರಿಸಲು ಸರ್ಕಾರದೊಂದಿಗೆ ಕೈಜೋಡಿಸಿದ್ದ ವೇದಾಂತ ಕಂಪನಿ ನಿರ್ಮಾಣದ 100 ಹಾಸಿಗೆ ಸಾಮರ್ಥ್ಯದ ತಾತ್ಕಾಲಿಕ ‘ಕೋವಿಡ್ ಫೀಲ್ಡ್ ಆಸ್ಪತ್ರೆ’ಯನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿದ್ದ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ.
ಜೂನ್. 21: ಹಳ್ಳಿಯ ಕಡೆ ತಜ್ಞ ವೈದ್ಯರ ನಡೆ ಕಾರ್ಯಕ್ರಮಕ್ಕೆ ಚಾಲನೆ. ದೇವರು ಸೂಚನೆ ನೀಡಿದ್ದು, ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎನ್ನುತ್ತಿದ್ದ ಜನರಿದ್ದ ಗ್ರಾಮಗಳಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿ ಜನಜಾಗೃತಿ.
ಜುಲೈ. 7: ಸಂಸದರಾಗಿ ಆಯ್ಕೆಯಾದ ಮೊದಲ ಅವಧಿಯಲ್ಲೇ ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾಗಿ ಸ್ಥಾನ ಪಡೆದ ಎ. ನಾರಾಯಣಸ್ವಾಮಿ. ಈ ಅವಕಾಶ ಅನಿರೀಕ್ಷಿತವಾಗಿ ಅರಸಿ ಬಂದ ಕ್ಷಣ.
ಜುಲೈ. 13: ಇಸಾಮುದ್ರ ಲಂಬಾಣಿಹಟ್ಟಿಯಲ್ಲಿ ಮುದ್ದೆ ಉಂಡು ಮಲಗಿದ್ದ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಸಾವಿಗೆ ವಿಷಾಹಾರವೇ ಕಾರಣ ಎಂದು ಮೇಲ್ನೋಟಕ್ಕೆ ಕಾಣಿಸಿತ್ತು. ಘಟನೆಗೆ ಲಂಬಾಣಿಹಟ್ಟಿಯ ಜನ ಕಣ್ಣೀರ ಧಾರೆ ಸುರಿಸಿದ್ದರು. ಘಟನೆ ಭೇದಿಸಿ ಪೊಲೀಸರು. ಮಕ್ಕಳಿಗೆ ತೋರುವ ಪ್ರೀತಿ–ವಾತ್ಸಲ್ಯದಲ್ಲಿ ಆಗಿರುವ ತಾರತಮ್ಯದಿಂದಾಗಿ ಪುತ್ರಿಯೇ ವಿಷವಿಟ್ಟು ಪೋಷಕರನ್ನು ಕೊಲೆ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿತು.
ಜುಲೈ. 23: ಭರಮಸಾಗರ ಠಾಣಾ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ಬಹಿರ್ದೆಸೆಗೆ ತೆರಳಿದ್ದ 13 ವರ್ಷದ ಬಾಲಕಿಯ ಮೇಲೆ ಹಾಡಹಗಲೇ ಅತ್ಯಾಚಾರ ಎಸಗಿ ಕೊಲೆ ಮಾಡಿದ ಕೃತ್ಯ ನಡೆದಿತ್ತು. ಈ ಅಮಾನುಷ ಘಟನೆಗೆ ರಾಜ್ಯದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು.
ಆ. 2: ಐತಿಹಾಸಿಕ ಚಿತ್ರದುರ್ಗ ಕೋಟೆಗೆ ಧ್ವನಿ ಸಮೇತ ಬೆಳಕಿನ ದೀಪ ಅಳವಡಿಸಲು ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ನೇತೃತ್ವದೊಂದಿಗೆ ಭೇಟಿ ನೀಡಿದ್ದ ತಾಂತ್ರಿಕ ಅಧಿಕಾರಿಗಳ ತಂಡ.
ಆ. 18: ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಥಮ ಬಾರಿ ಜಿಲ್ಲೆಗೆ ಭೇಟಿ ನೀಡಿದ ಎ. ನಾರಾಯಣಸ್ವಾಮಿ ಅವರಿಗೆ ಚಿತ್ರದುರ್ಗದಲ್ಲಿ ಬಿಜೆಪಿ ಕಾರ್ಯಕರ್ತರು, ಸಮುದಾಯದ ಮುಖಂಡರು, ಅಭಿಮಾನಿಗಳಿಂದ ಅದ್ದೂರಿ ಸ್ವಾಗತ.
ಆ. 22: ಹಿರಿಯೂರಿನಲ್ಲಿ ಅಸಂಘಟಿತ ವಲಯದ ಒಂಬತ್ತು ಸಾವಿರ ಕಾರ್ಮಿಕರಿಗೆ ಆಹಾರದ ಕಿಟ್ ವಿತರಣೆ.
ಆ. 23: ಬಹುದಿನಗಳಿಂದ ಬಾಗಿಲು ಮುಚ್ಚಿದ್ದ ಶಾಲೆ–ಕಾಲೇಜುಗಳ ಆರಂಭ. ಮಕ್ಕಳ ಕಲರವ. ಶಿಕ್ಷಕರ ಮೊಗದಲ್ಲಿ ಮಂದಹಾಸ.
ಆ. 27: ಕೋವಿಡ್ ಮತ್ತು ನ್ಯುಮೋನಿಯಾ ಸೇರಿ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಮಕ್ಕಳನ್ನು ರಕ್ಷಿಸಲು ಚಿತ್ರದುರ್ಗಕ್ಕೆ ಬಂದ 15 ಸಾವಿರ ಡೋಸ್ ನ್ಯುಮೊಕಾಕಲ್ ಕಾಂಜುಗೇಟ್ (ಪಿಸಿವಿ) ನೂತನ ಲಸಿಕೆ.
ಸೆ. 6: ಕೋವಿಡ್ ಕಾರಣದಿಂದಾಗಿ 18 ತಿಂಗಳು ಮುಚ್ಚಿದ್ದ ಆರು, ಏಳು, ಎಂಟನೇ ತರಗತಿ ಶಾಲೆಗಳು ಪುನರಾರಂಭ.
ಸೆ. 18: ಲೋಕೋಪಯೋಗಿ ನೂತನ ಕಟ್ಟಡ ಉದ್ಘಾಟನೆ.
ಅ. 2: ‘ಹಿಂದೂ ಮಹಾಗಣಪತಿ’ ಬೃಹತ್ ಶೋಭಾಯಾತ್ರೆಗೆ ನಿರೀಕ್ಷೆ ಮೀರಿ ವಿವಿಧೆಡೆಯಿಂದ ಬಂದಿದ್ದ ಭಕ್ತರು.
ಅ.18: ಮುರುಘಾಮಠದ ಶರಣ ಸಂಸ್ಕೃತಿ ಉತ್ಸವ, ಶಿವಮೂರ್ತಿ ಮುರುಘಾ ಶರಣರ ಪೀಠಾರೋಹಣ ತೃತೀಯ ದಶಮಾನೋತ್ಸವದ ಅಂಗವಾಗಿ ಮುರುಘಾಮಠದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ‘ಶರಣಶ್ರೀ’, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ‘ಬಸವಭೂಷಣ’ ಪ್ರಶಸ್ತಿ ಪ್ರದಾನ. ಜಿಲ್ಲೆಯಲ್ಲಿ ಕೈಗಾರಿಕಾ ಟೌನ್‌ಶಿಪ್ ನಿರ್ಮಿಸುವುದಾಗಿ ಸಿಎಂ ಘೋಷಣೆ.
ಉತ್ಸವದಲ್ಲಿ ಗಣ್ಯರಿಗೆ ‘ಬಸವಶ್ರೀ, ಮುರುಘಾಶ್ರೀ’ ಪ್ರಶಸ್ತಿ ಪ್ರದಾನ.
ನ. 1: 1ರಿಂದ 6ರ ವರೆಗೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿಯಲ್ಲಿ ರಾಷ್ಟ್ರೀಯ ನಾಟಕೋತ್ಸವ.
ನ. 4: ಮುರುಘಾ ಮಠದಿಂದ ಪುನೀತ್ ರಾಜ್‌ಕುಮಾರ್ ಅವರಿಗೆ ಮರಣೋತ್ತರ ‘ಬಸವಶ್ರೀ’ ಪ್ರಶಸ್ತಿ ಘೋಷಣೆ.
ನ.8: ನರ್ಸರಿ, ಎಲ್‌ಕೆಜಿ, ಯುಕೆಜಿ ಸೇರಿ ಪ್ರಾಥಮಿಕ ಶಾಲೆಗಳು ಪುನರಾರಂಭ.
ಡಿ. 1: ₹ 2.12 ಕೋಟಿ ಮೌಲ್ಯದ ಕಳವಾದ ವಸ್ತುಗಳನ್ನು ನಾಗರಿಕರಿಗೆ ಹಿಂದಿರುಗಿಸಿದ ಪೊಲೀಸ್ ಇಲಾಖೆ.
ಡಿ. 4: ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿ
ಸಮೀಪದ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ನಿಂತಿದ್ದ ಈರುಳ್ಳಿ ತುಂಬಿದ್ದ ಲಾರಿಗೆ ಗ್ಯಾಸ್ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ರೈತ ಸೇರಿ ನಾಲ್ವರು ಮೃತಪಟ್ಟಿದ್ದರು.
ಡಿ. 13: ಹಿರಿಯೂರು ನಗರದ ರಾಷ್ಟ್ರೀಯ ಹೆದ್ದಾರಿ–4ರ ಆಲೂರು ಕ್ರಾಸ್ ಸಮೀಪ ಈರುಳ್ಳಿ ಸಾಗಿಸುತ್ತಿದ್ದ ಲಾರಿಯ ಟೈರ್ ಸಿಡಿದು ಉರುಳಿ ಬಿದ್ದಾಗ ಈರುಳ್ಳಿ ಚೀಲದಡಿ ಸಿಲುಕಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಈ ಘಟನೆ ಇನ್ನೂ ಮಾಸಿಲ್ಲ.
ಡಿ. 14: ಕಾಂಗ್ರೆಸ್‌ನ ಭದ್ರಕೋಟೆಯ ಕಲ್ಲುಗಳುಒಂದೊಂದಾಗಿ ಉರುಳುತ್ತಿದ್ದು, ಅದು ವಿಧಾನಪರಿಷತ್ ಚುನಾವಣೆಯಲ್ಲೂ ಸಾಬೀತಾಯಿತು. ಬಿಜೆಪಿಯಕೆ.ಎಸ್. ನವೀನ್ ಜಯಭೇರಿ ಬಾರಿಸುವ ಮೂಲಕ ಕೋಟೆನಾಡನ್ನು ಬಿಜೆಪಿ ಬಹುತೇಕ ತನ್ನ ತೆಕ್ಕೆಗೆತೆಗೆದುಕೊಂಡ ಕ್ಷಣ. ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದಕ್ಕೆ ಜಿಲ್ಲೆಯ ರೈತರು ಸಿಹಿ ಹಂಚಿ ಸಂಭ್ರಮಿಸಿದ ವರ್ಷವೂ ಹೌದು.
ಅಪಘಾತದಲ್ಲಿ ಸಾವು; ಬೆಳೆ ನಾಶ
2021ರಲ್ಲಿ 286ಕ್ಕೂ ಹೆಚ್ಚು ಅಪಘಾತ ಸಂಭವಿಸಿ, 306ಕ್ಕೂ ಹೆಚ್ಚು ಮಂದಿ ಬಲಿಯಾದ ವರ್ಷ ಇದಾಗಿದೆ. 1,03,077 ಹೆಕ್ಟೇರ್ ಪ್ರದೇಶದ ಬೆಳೆ ನಾಶವಾಗಿದೆ. 1,02,731 ಹೆಕ್ಟೇರ್ ಕೃಷಿ ಬೆಳೆಗೆ ಹಾನಿ ಉಂಟಾಗಿದೆ. 346 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದೆ. 528 ಮಿ.ಮೀ ವಾಡಿಕೆ ಮಳೆಗೆ 843 ಮಿ.ಮೀ ಮಳೆ ಸುರಿದಿದೆ. ಅಕಾಲಿಕ ಮಳೆಯಿಂದಾಗಿ ರೈತರ ಬೆಳೆ ನಾಶವಾಗಿದೆ.
ಜಿಲ್ಲೆಗೆ ಗಣ್ಯರ ಭೇಟಿ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಚಿವರಾದ ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ಸಿ.ಸಿ. ಪಾಟೀಲ್, ಬಿ.ಸಿ. ಪಾಟೀಲ್, ಆರ್. ಅಶೋಕ್, ನಾಗೇಶ್, ನಾರಾಯಣಗೌಡ, ಬಿ. ಶ್ರೀರಾಮುಲು, ಮುಖಂಡರಾದ ಸದಾನಂದಗೌಡ ಸೇರಿ ಹಲವು ಗಣ್ಯರು ಜಿಲ್ಲೆಗೆ ಭೇಟಿ ನೀಡಿದ್ದರು.
ಮಾರ್ಚ್ 22ರಂದು ಪುನೀತ್ ಭೇಟಿ
‘ಯುವರತ್ನ’ ಸಿನಿಮಾದ ಪ್ರಚಾರಕ್ಕೆ ಮಾರ್ಚ್ 22ರಂದು ನಟ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಕುಣಿದು ಸಂಭ್ರಮಿಸಿದ್ದರು. ಕೇಕ್ ಕತ್ತರಿಸಿ ಅಭಿಮಾನಿಗಳೊಂದಿಗೆ ಸಂಭ್ರಮ ಹಂಚಿಕೊಂಡಿದ್ದರು. ಚಿತ್ರದುರ್ಗದೊಂದಿಗೆ ಮರೆಯಲಾರದ ನಂಟು ಬೆಸೆದುಕೊಂಡಿದ್ದಕ್ಕೆ ಈ ಭೇಟಿ ಕೂಡ ಸಾಕ್ಷಿಯಾಗಿತ್ತು. ಅಭಿಮಾನಿಗಳ ಮನೆಗೂ ಅನಿರೀಕ್ಷಿತವಾಗಿ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.