ADVERTISEMENT

ಚಿತ್ರದುರ್ಗ | ಆಡುಮಲ್ಲೇಶ್ವರ ಕಿರು ಮೃಗಾಲಯಕ್ಕೆ ಆಧುನಿಕ ರೂಪ

ಪ್ರಾಣಿ–ಪಕ್ಷಿಗಳ ವೀಕ್ಷಣೆಗೆ ಗಾಜಿನ ಮನೆ, ಸುಸಜ್ಜಿತ ವೀಕ್ಷಣಾ ಜಾಗ, ಸಿಮೆಂಟ್‌ ನೆಲಹಾಸು

ಎಂ.ಎನ್.ಯೋಗೇಶ್‌
Published 23 ಜೂನ್ 2024, 6:00 IST
Last Updated 23 ಜೂನ್ 2024, 6:00 IST
ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಹೊಸದಾಗಿ ತಲೆ ಎತ್ತಿರುವ ಗಾಜಿನ ಮನೆಗಳು
ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ಹೊಸದಾಗಿ ತಲೆ ಎತ್ತಿರುವ ಗಾಜಿನ ಮನೆಗಳು   

ಚಿತ್ರದುರ್ಗ: ಜೋಗಿಮಟ್ಟಿ ವನ್ಯಜೀವಿಧಾಮದ ಗುಡ್ಡಗಳ ನಡುವೆ ಅರಳಿ ನಿಂತಿರುವ ಆಡುಮಲ್ಲೇಶ್ವರ ಕಿರು ಮೃಗಾಲಯ ಈಗ ಆಧುನಿಕ ರೂಪ ಪಡೆದಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸುಂದರ ಪ್ರಾಕೃತಿಕ ಪರಿಸರದಲ್ಲಿ ಪ್ರಾಣಿ, ಪಕ್ಷಿಗಳ ವೀಕ್ಷಣೆಗೆ ಹಲವು ಸೌಲಭ್ಯ ಒದಗಿಸಲಾಗಿದ್ದು ನೋಡುಗರ ಮನಸೂರೆಗೊಳ್ಳುತ್ತಿದೆ.

ಮೃಗಾಲಯದ ಆವರಣದಲ್ಲಿ ಪ್ರಾಣಿಗಳಿಗಾಗಿ ಹೊಸ ವಿನ್ಯಾಸದ ಗಾಜಿನ ಮನೆಗಳನ್ನು (ಎನ್‌ಕ್ಲೋಷರ್ಸ್‌) ನಿರ್ಮಾಣ ಮಾಡಲಾಗಿದೆ. ದೊಡ್ಡ ಮೃಗಾಲಯವನ್ನೂ ಮೀರಿಸುವ ರೀತಿಯಲ್ಲಿ ಕಟ್ಟಡಗಳಿಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಸಾಲು ಗಾಜಿನ ಮನೆಗಳಲ್ಲಿ ಜನರು ಯಾವುದೇ ಭಯವಿಲ್ಲದೇ ಪ್ರಾಣಿ, ಪಕ್ಷಿಗಳನ್ನು ವೀಕ್ಷಣೆ ಮಾಡಬಹುದಾಗಿದೆ.

ಹಳೆಯ ನಿವಾಸಗಳನ್ನು ತೆರವು ಮಾಡಲಾಗಿದ್ದು ಹೊಸ ಗಾಜಿನ ಮನೆಗಳಿಗೆ ಪ್ರಾಣಿ, ಪಕ್ಷಿಗಳನ್ನು ಸ್ಥಳಾಂತರ ಮಾಡಲಾಗಿದೆ. ಒಂದು ಮನೆಯಿಂದ ಮತ್ತೊಂದು ಮನೆಗೆ ತೆರಳಲು ಸಂಪೂರ್ಣವಾಗಿ ಸಿಮೆಂಟ್‌ ಹಾಸಿನ ರಸ್ತೆ ನಿರ್ಮಾಣ ಮಾಡಲಾಗಿದೆ. ಇದಕ್ಕೂ ಮೊದಲು ಮಣ್ಣಿನ ರಸ್ತೆ ಇದ್ದ ಕಾರಣ ಮಳೆ ಬಂದಾಗ ಓಡಾಡಲು ತೊಂದರೆಯಾಗುತ್ತಿತ್ತು. ಈಗ ಸುಸಜ್ಜಿತ ರಸ್ತೆ ನಿರ್ಮಿಸಲಾಗಿದ್ದು ಇಡೀ ಮೃಗಾಯಕ್ಕೆ ಹೊಸ ರೂಪ ಬಂದಿದೆ.

ADVERTISEMENT
ಐಎಫ್‌ಎಸ್‌ ಅಧಿಕಾರಿಗಳಾದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್‌ ಪನ್ವಾರ್‌ ಕಾರ್ಯನಿರ್ವಹಕ ನಿರ್ದೇಶಕ ಟಿ.ರಾಜಣ್ಣ ಅವರ ಮಾರ್ಗರ್ಶನ ಇಆರ್‌ಎಂ ಗ್ರೂಪ್‌ನ ಆರ್‌.ಪ್ರವೀಣ್‌ಚಂದ್ರ ಅವರ ಕೊಡುಗೆ ಇಷ್ಟೆಲ್ಲಾ ಅಭಿವೃದ್ಧಿಗೆ ಕಾರಣವಾಗಿದೆ.
ಎನ್‌.ವಾಸುದೇವ್‌, ವಲಯ ಅರಣ್ಯಾಧಿಕಾರಿ

ಮೃಗಾಲಯಕ್ಕೆ ಪ್ರವೇಶ ಪಡೆಯುತ್ತಿದ್ದಂತೆ ಎಮು ಪಕ್ಷಿಗಳು ಪ್ರವಾಸಿಗರನ್ನು ಸ್ವಾಗತಿಸುತ್ತವೆ. ಎಮು ನಿವಾಸ ಕೂಡ ಹೊಸದಾಗಿದ್ದು ಪಕ್ಷಿಗಳು ವಿಶಾಲ ಜಾಗದಲ್ಲಿ ಸ್ವಚ್ಛಂದವಾಗಿ ವಿಹಾರ ಮಾಡುತ್ತಿವೆ. 2 ಹೆಣ್ಣು, 1 ಗಂಡು ಎಮು ಪಕ್ಷಿಗಳು ಮೃಗಾಲಯದಲ್ಲಿವೆ. ನಂತರ ಸಿಗುವ ಮೊದಲ ಗಾಜಿನ ಮನೆಯಲ್ಲಿ ಕಲ್ಲಾಮೆ, ನಕ್ಷತ್ರ ಆಮೆಗಳನ್ನು ವೀಕ್ಷಣೆ ಮಾಡಬಹುದಾಗಿದೆ

2ನೇ ಗಾಜಿನ ಮನೆಯಲ್ಲಿ ನರಿಗಳಿದ್ದು ಅವುಗಳ ಉತ್ಸಾಹದ ಓಡಾಟ ಆಕರ್ಷಿಸುತ್ತದೆ. ಇನ್ನೊಂದು ಗಾಜಿನ ಮನೆಯಲ್ಲಿರವ ಹೆಬ್ಬಾವುಗಳು ನೋಡುಗರನ್ನು ಆಶ್ಚರ್ಯಚಕಿತಗೊಳಿಸುತ್ತವೆ. ನಾಲ್ಕು ಬೃಹತ್‌ ಹೆಬ್ಬಾವುಗಳಿದ್ದು ಅವುಗಳಿಗೆ ಸೂರ್ಯನ ಕಿರಣಗಳು ನೇರವಾಗಿ ಬೀಳುವಂತೆ ವಿನ್ಯಾಸಗೊಳಿಸಿ ಮನೆ ನಿರ್ಮಾಣ ಮಾಡಲಾಗಿದೆ. ಮತ್ತೊಂದು ಗಾಜಿನ ಮನೆಯಲ್ಲಿ ನವಿಲುಗಳನ್ನು ಬಿಡಲಾಗಿದೆ. ಇನ್ನೊಂದು ಮನೆಯಲ್ಲಿ ಸಿಲ್ವರ್‌ ಫೆಸೆಂಟ್‌, ಯೆಲ್ಲೋ ಗೋಲ್ಡನ್‌ ಫೆಸೆಂಟ್‌ ಸೇರಿದಂತೆ ಕಾಕ್‌ಟೀಲ್‌, ಕಾಡುಕೋಳಿಗಳು ಗಮನ ಸೆಳೆಯುತ್ತಿವೆ.

ಕರಡಿಗಳಿಗೆ ಜೋಕಾಲಿ: 

ಬೃಹತ್‌ ಕಲ್ಲುಗಳ ನಡುವೆ ಇರುವ ಕರಡಿ ಮನೆ ಕಿರು ಮೃಗಾಲಯದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ. ಕರಡಿಗಳು ಕುಳಿತು ವೀಕ್ಷಕರಿಗೆ ಪೋಸು ನೀಡಲು ಹೊಸದಾಗಿ ಜೋಕಾಲಿ ರೂಪಿಸಿರುವುದು ನೋಡುಗರ ಗಮನ ಸೆಳೆಯುತ್ತಿದೆ. ಕಲ್ಲು ಬೆಂಚು, ಓಡಾಡಲು ಬ್ರಿಡ್ಜ್, ತೊಟ್ಟಿ ನಿರ್ಮಾಣ ಮಾಡಲಾಗಿದೆ. 1 ಗಂಡು, 2 ಹೆಣ್ಣು, 2 ಮರಿ ಕರಡಿಗಳು ನೋಡುಗರಿಗೆ ಮನರಂಜನೆ ನೀಡುತ್ತಿವೆ. 

2 ಹುಲಿಗಳಿದ್ದು ಅವುಗಳ ವೀಕ್ಷಣೆಗೂ ಗಾಜಿನ ಮನೆ ನಿರ್ಮಿಸಲಾಗಿದೆ. 5 ಚಿರತೆಗಳಿದ್ದು ಅವುಗಳ ಮನೆಗಳನ್ನೂ ವಿಸ್ತಾರಗೊಳಿಸಲಾಗಿದೆ. 30 ಕೃಷ್ಣಮೃಗಗಳಿದ್ದು ಅವುಗಳ ನಿವಾಸಕ್ಕೆ ಹೊಸದಾಗಿ ತೊಟ್ಟಿ ಕಟ್ಟಿಸಲಾಗಿದೆ. 11 ಚುಕ್ಕಿ ಜಿಂಕೆ, 9 ನೀಲ್‌ಗಾಯ್‌ಗಳಿದ್ದು ಅವುಗಳ ಪ್ರತ್ಯೇಕ ನಿವಾಸಗಳಿಗೆ ಹೊಸ ರೂಪ ನೀಡಲಾಗಿದೆ. ಪ್ರಾಣಿಗಳು ಬಿಸಿಲಿನಿಂದ ರಕ್ಷಿಸಿಕೊಳ್ಳಲು ನಿವಾಸದಲ್ಲಿ ಸ್ಪ್ರಿಂಕ್ಲರ್‌ ಅಳವಡಿಸಲಾಗಿದ್ದು ನೀರು ಚಿಮುಕಿಸುವ ವ್ಯವಸ್ಥೆ ಮಾಡಲಾಗಿದೆ. 21 ಎಕರೆ ವಿಸ್ತೀರ್ಣದಲ್ಲಿ ಅರಳಿ ನಿಂತಿರುವ ಈ ಕಿರು ಮೃಗಾಲಯ ಮಧ್ಯ ಕರ್ನಾಟಕದ ಪ್ರಮುಖ ಆಕರ್ಷಣೆಯಾಗಿದೆ.

ಪ್ರಾಣಿಗಳ ಸಂತಾನೋತ್ಪತ್ತಿ ಉತ್ತಮವಾಗಿರುವ ಕಾರಣ ವಿವಿಧ ಮೃಗಾಲಯಗಳಿಗೆ ಪ್ರಾಣಿಗಳ ವಿನಿಯಮ ಮಾಡಿಕೊಳ್ಳಲಾಗುತ್ತಿದೆ. ಒಡಿಶಾದ ಮೃಗಾಲಯಕ್ಕೆ ಇಲ್ಲಿಂದ ಕರಡಿಯೊಂದನ್ನು ನೀಡಲಾಗಿದೆ. ಬನ್ನೇರುಘಟ್ಟ ಉದ್ಯಾನಕ್ಕೆ 3 ನೀಲ್‌ಗಾಯ್‌ಗಳನ್ನು ಕೊಡಲಾಗಿದೆ. ಬೆಳಗಾವಿ ಮೃಗಾಲಯದಿಂದ 3 ಎಮು ಪಕ್ಷಿ ತರಿಸಲಾಗಿದೆ. ಮೈಸೂರು ಮೃಗಾಲಯದಿಂದ ಲವ್‌ ಬರ್ಡ್‌, ಎಲ್ಲೋ ಗೋಲ್ಡನ್‌ ಫೆಸೆಂಟ್‌ ಪಕ್ಷಿಗಳನ್ನು ತರಿಸಲಾಗಿದೆ. ಪ್ರಾಣಿ ಪಕ್ಷಿಗಳನ್ನು ನೋಡಲು ವೀಕ್ಷಣಾ ಸ್ಥಳ ಗುರುತಿಸಲಾಗಿದ್ದು ಅಲ್ಲಿ ಹೊಸದಾಗಿ ನೆರಳಿನ ವ್ಯವಸ್ಥೆ, ಕಲ್ಲು ಬೆಂಚು ಅಳವಡಿಸಲಾಗಿದೆ.

ಕಿರು ಮೃಗಾಲಯ ನಿರ್ವಹಣೆಯಲ್ಲಿ ಇಆರ್‌ಎಂ ಗ್ರೂಪ್‌ನ ಜಾನ್‌ ಮೈನ್‌ ಕಂಪನಿ ₹ 80 ಲಕ್ಷ ಧನಸಹಾಯ ನೀಡಿದೆ. ಸಾಮಾಜಿಕ ಹೊಣೆಗಾರಿಕೆ (ಸಿಆರ್‌ಎಸ್‌) ಅಡಿ ಬಂದಿರುವ ಹಣವನ್ನು ಕಿರು ಮೃಗಾಲಯದಲ್ಲಿ ಸದ್ಬಳಕೆ ಮಾಡಿಕೊಳ್ಳಲಾಗಿದೆ. ಜೊತೆಗೆ ಕಂಪನಿಯವರು 4 ಜೊತೆ ವಿದೇಶಿ ಗಿಳಿಗಳನ್ನು ಕೊಡಿಸಲು ಒಪ್ಪಿದ್ದಾರೆ.

ಕಿರು ಮೃಗಾಲಯದಲ್ಲಿ ಸ್ವಚ್ಛಂದವಾಗಿ ವಿಹಾರ ಮಾಡುತ್ತಿರುವ ಕರಡಿಗಳು ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ

ಮಕ್ಕಳಿಗಾಗಿ ಆಟಿಕೆ ಉದ್ಯಾನ

ಕಿರು ಮೃಗಾಲಯದ ಆವರಣದಲ್ಲಿ ಮಕ್ಕಳಿಗಾಗಿಯೇ ಬಲು ವಿಶೇಷವಾಗಿ ನಿರ್ಮಾಣ ಮಾಡಿರುವ ಆಟಿಕೆ ಉದ್ಯಾನ ಇಲ್ಲಿಯ ಪ್ರಮುಖ ಆಕರ್ಷಣೆಯಾಗಿದೆ. ಮೃಗಾಲಯ ನೋಡಿದ ನಂತರ ಮಕ್ಕಳು ನೆರಳಿನ ನಡುವೆ ಆಟಿಕೆಗಳ ಜೊತೆ ಆನಂದ ಅನುಭವಿಸುತ್ತಾರೆ. ಎಲ್ಲಾ ರೀತಿಯ ಆಟಿಕೆಗಳು ಇಲ್ಲಿದ್ದು ಇದು ಮಕ್ಕಳ ಮೆಚ್ಚಿನ ಸ್ಥಳವಾಗಿದೆ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನೂ ನಿರ್ಮಿಸಲಾಗಿದೆ. ಆಟಿಕೆ ಉದ್ಯಾನ ನಿರ್ಮಾಣಕ್ಕೆ ಜೆಎಸ್‌ಡಬ್ಲ್ಯು ಕಂಪೆನಿ ₹34 ಲಕ್ಷ ಕೊಡುಗೆ ನೀಡಿದೆ.

ದತ್ತು ಪಡೆಯಲು ಅವಕಾಶ

ಪ್ರಾಣಿ ಪಕ್ಷಿ ಪ್ರಿಯರಿಗಾಗಿ ವಿಶೇಷ ದತ್ತು ಯೋಜನೆ ಜಾರಿಗೊಳಿಸಲಾಗಿದೆ. ವಿವಿಧ ಪ್ರಾಣಿ ಪಕ್ಷಿಗಳ ದತ್ತು ದರವನ್ನು ಪ್ರಕಟಿಸಲಾಗಿದ್ದು ಸಾಮಾನ್ಯರು ಕೂಡ ದತ್ತು ಪಡೆದು ನಿರ್ವಹಣೆ ಮಾಡಬಹುದು. ವರ್ಷಕ್ಕೆ ಗರಿಷ್ಠ ₹ 2 ಲಕ್ಷದಿಂದ ಕನಿಷ್ಠ ₹ 1000ದವರೆಗೂ ದರವಿದೆ. ದತ್ತು ಪಡೆದವರ ಹೆಸರನ್ನು ಮೃಗಾಲಯದಲ್ಲಿ ಪ್ರಕಟಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.