ADVERTISEMENT

ಮತದಾರರನ್ನು ಭಿಕ್ಷುಕರನ್ನಾಗಿಸುವ ‘ಗ್ಯಾರಂಟಿ’

ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 11:17 IST
Last Updated 2 ಜೂನ್ 2023, 11:17 IST

ಚಿತ್ರದುರ್ಗ: ‘ಗ್ಯಾರಂಟಿ’ ತೋರಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಕಾಂಗ್ರೆಸ್‌, ದೇಶದ ಮತದಾರರನ್ನು ಭಿಕ್ಷುಕರ ಸಾಲಿನಲ್ಲಿ ನಿಲ್ಲಿಸುವ ಷಡ್ಯಂತ್ರ ರೂಪಿಸಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

‘ಶತಮಾನ ಪೂರೈಸಿರುವ ಕಾಂಗ್ರೆಸ್‌, ಸಿದ್ಧಾಂತ ಬಿಟ್ಟು ಆಮಿಷ ತೋರಿಸಿ ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಿದೆ. ಸಿದ್ಧಾಂತದ ಆಧಾರದ ಮೇರೆಗೆ ಚುನಾವಣೆ ಎದುರಿಸದೇ, ಗ್ಯಾರಂಟಿಗಳ ಆಮಿಷ ತೋರಿಸಿದೆ. ಈ ಮೂಲಕ ಮತದಾರರನ್ನು ಭಿಕ್ಷಾಟನೆಯ ಕೂಪಕ್ಕೆ ತಳ್ಳುವ ಹುನ್ನಾರ ನಡೆಸಿದೆ’ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌, ಆಡಳಿತ ನಡೆಸುವ ಬದಲಿಗೆ ಗ್ಯಾರಂಟಿ ಅನುಷ್ಠಾನದ ಬಗ್ಗೆ ಚರ್ಚೆಯಲ್ಲಿ ಮುಳುಗಿದೆ. ಮೂಲಸೌಲಭ್ಯ ಅಭಿವೃದ್ಧಿ, ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಬಿಟ್ಟು ಜನರ ದಿಕ್ಕು ತಪ್ಪಿಸುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪೂರ್ವದಲ್ಲಿ ಪ್ರತಿಯೊಬ್ಬರ ಬ್ಯಾಂಕ್‌ ಖಾತೆಗೆ ₹ 15 ಲಕ್ಷ ಹಾಕುತ್ತೇವೆ ಎಂಬುದಾಗಿ ಹೇಳಿರಲಿಲ್ಲ. ಹೀಗೆ ಹೇಳಿಕೆ ನೀಡಿದ ದಾಖಲೆಯನ್ನು ಒದಗಿಸಿದರೆ ರಾಜಕೀಯ ನಿವೃತ್ತಿ ಪಡೆಯಲು ಸಿದ್ಧ ಇದ್ದೇವೆ. ಆದರೆ, ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದಕ್ಕೆ ಸಾಕ್ಷ್ಯ ಇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.