ಚಿತ್ರದುರ್ಗ: ‘ದೇಶದಲ್ಲಿ ಸಂವಿಧಾನ ಎಷ್ಟು ಮುಖ್ಯವಾಗಿದೆಯೋ, ರಾಮಾಯಣ ಮತ್ತು ಮಹಾಭಾರತ ಗ್ರಂಥಗಳೂ ಅಷ್ಟೇ ಅವಶ್ಯವಾಗಿದೆ’ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.
ನಗರದಿಂದ ಅಯೋಧ್ಯೆಗೆ ಹೊರಟ ವಿಶೇಷ ರೈಲಿಗೆ ಭಾನುವಾರ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.
ರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ಬಹುಸಂಖ್ಯಾತ ಹಿಂದೂಗಳಿಗೆ ಅತ್ಯವಶ್ಯವಾಗಿವೆ. ಜತೆಗೆ ಅವರ ಜೀವನ ಪದ್ಧತಿಯೂ ಆಗಿವೆ. ಕಾಶಿ ಮತ್ತು ಮಥುರಾಗಳು ಈ ದೇಶದ ಅಸ್ಮಿತೆಯಾಗಿದ್ದು, ಇತರೆ ಧರ್ಮದವರು ಹಿಂದೂಗಳಿಗೆ ಸಹಕಾರ ನೀಡಬೇಕು ಎಂದರು.
ಸ್ಥಳೀಯರಿಗೆ ಟಿಕೆಟ್: ‘ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಯಾ ಕ್ಷೇತ್ರಗಳಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವುದು ಎಲ್ಲ ಪಕ್ಷಗಳ ಅವಶ್ಯಕತೆಯಾಗಿದೆ’ ಎಂದು ಅವರು ಹೇಳಿದರು.
‘ಟಿಕೆಟ್ ನೀಡುವ ವಿಚಾರ ಪಕ್ಷದಲ್ಲಿ ಚರ್ಚೆ ಆಗುತ್ತಿದೆ. ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನೇ ಹೊರತು, ರಾಜಕಾರಣಿ ಅಲ್ಲ. ನನ್ನನ್ನು ಕೆಣಕಬೇಡಿ. ಪಕ್ಷದ ಬೆಳವಣಿಗೆಯಲ್ಲಿ ನಾನೂ ಒಬ್ಬ. ನಾನು ಎಲ್ಲಿಗೆ ಹೋಗುತ್ತೇನೆ, ಎಲ್ಲಿಗೆ ಬರುತ್ತೇನೆ ಎಂಬುದನ್ನೂ ಕೇಳಬೇಡಿ’ ಎಂದು ಸುದ್ದಿಗಾರರನ್ನು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.