ಹರಪನಹಳ್ಳಿ: ಮಳೆಯಿಂದಾಗಿ ಹಳ್ಳ ತುಂಬಿ ಹರಿದಿರುವ ಪರಿಣಾಮ ತಾಲ್ಲೂಕಿನ ಶೃಂಗಾರತೋಟ ಗ್ರಾಮದಲ್ಲಿ ಮೃತರ ಅಂತ್ಯಸಂಸ್ಕಾರಕ್ಕೆ ಗ್ರಾಮಸ್ಥರು ಪರದಾಡಬೇಕಾದ ಸ್ಥಿತಿ ಇದೆ.
ತಾಲ್ಲೂಕಿನ ಬಾಗಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಶೃಂಗಾರತೋಟ ಗ್ರಾಮವು ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿ-25ಕ್ಕೆ ಹೊಂದಿಕೊಂಡಿದೆ. ಗ್ರಾಮದಲ್ಲಿ ಶನಿವಾರ ರಾತ್ರಿ ಮಹಿಳೆಯೊಬ್ಬರು (31) ಮೃತಪಟ್ಟಿದ್ದರು. ಭಾನುವಾರ ಅವರ ಅಂತ್ಯಸಂಸ್ಕಾರಕ್ಕಾಗಿ ಹೊರಟು ನಿಂತಾಗ ಹಳ್ಳದಲ್ಲಿ ನೀರು ತುಂಬಿದ್ದರಿಂದ ದಾಟಲು ಹರಸಾಹಸ ಪಡಬೇಕಾಯಿತು.
ತುಂಬಿದ್ದ ಹಳ್ಳದ ನೀರಿನಲ್ಲಿಯೇ ಒಬ್ಬೊಬ್ಬರಾಗಿ ಸಾಗಿದರು. ಶವವನ್ನು ಹೊತ್ತಿದ್ದ ನಾಲ್ವರು ಹಳ್ಳ ದಾಟುವಷ್ಟರಲ್ಲಿ ಸುಸ್ತಾದರು. ಗ್ರಾಮಕ್ಕೆ ಅರ್ಧ ಕಿ.ಮೀ. ದೂರದಲ್ಲಿ ಹಳ್ಳದ ದಡದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಜನಾಂಗದವರು ಅಂತ್ಯಸಂಸ್ಕಾರ ಮಾಡುತ್ತಿದ್ದಾರೆ. ಪ್ರತ್ಯೇಕ ಸ್ಥಳ ನಿಗದಿಪಡಿಸದ ಪರಿಣಾಮ ಮಳೆಗಾಲದಲ್ಲಿ ಈ ರೀತಿ ತೊಂದರೆ ಆಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
‘ಆರಂಭದಲ್ಲಿ ಬಾಗಳಿ ಕೆರೆಯ ತುದಿಯಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದೆವು. ಈಗ ಅಲ್ಲಿ ಅಲ್ಪಸಂಖ್ಯಾತರ ಇಲಾಖೆ ಮೊರಾರ್ಜಿ ದೇಸಾಯಿ ವಸತಿಶಾಲೆ ನಿರ್ಮಿಸುತ್ತಿರುವ ಕಾರಣ ಪರದಾಡುವಂತಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ್ ತಿಳಿಸಿದರು.
ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ಸುಸಜ್ಜಿತ ಸ್ಮಶಾನ ಭೂಮಿ ಕಲ್ಪಿಸಿ, ಮೂಲಸೌಕರ್ಯಗಳನ್ನು ಒದಗಿಸಬೇಕು. ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಗ್ರಾಮಸ್ಥರ ಪರದಾಟ ತಪ್ಪಿಸಬೇಕು ಎಂದು ಗ್ರಾಮಸ್ಥರಾದ ಎಸ್.ಎಂ. ಗಿರೀಶ್, ನಿಂಗರಾಜ್, ಪರಸಪ್ಪ, ತಿಮ್ಮಣ್ಣ, ವಿಜಯಕುಮಾರ್, ಪ್ರಶಾಂತ್, ಆನಂದ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.