ಚಿತ್ರದುರ್ಗ: ‘ದೇಶ ಮತ್ತು ಪ್ರಜೆಗಳಿಗೆ ಅಚ್ಛೆ ದಿನ್ ಬರಲಿದೆ ಎಂಬುದಾಗಿ ಪ್ರಧಾನಿ ಮೋದಿ ಅವರು ಹೇಳಿದ ಮಾತು ಸುಳ್ಳಾಗಿದೆ. ಅದು ಕೇವಲ ಕನಸಾಗಿಯೇ ಉಳಿಯಲಿದೆ’ ಎಂದು ಮಾಜಿ ಸಚಿವ ಎಚ್. ಆಂಜನೇಯ ದೂರಿದರು.
‘ದೇಶ ಆರ್ಥಿಕ ಸಂಕಷ್ಟದಲ್ಲಿ ಇರುವುದಕ್ಕೆ ಕೋವಿಡ್ ಒಂದೇ ಕಾರಣವಲ್ಲ. ಇದರಲ್ಲಿ ಬಹುಪಾಲು ಪ್ರಧಾನಿ ಅವರು ತೆಗೆದುಕೊಂಡ ಕೆಲ ತಪ್ಪು ನಿರ್ಧಾರಗಳೂ ಕಾರಣ. ಇದಕ್ಕೆ ಬಿಜೆಪಿಯೇ ನೇರ ಹೊಣೆ. ಬಿಜೆಪಿಯಿಂದ ದೇಶ ದಿವಾಳಿಯಾಗಿದೆ. ಮೋದಿ ದೇಶದ ಅಭಿವೃದ್ಧಿ ಸಾಧಿಸುವ ಬದಲು ಕುಂಠಿತಗೊಳಿಸಲು ಮುಂದಾಗಿದ್ದಾರೆ’ ಎಂದು ಅವರು ಶನಿವಾರಪತ್ರಿಕಾಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.
‘ನುಡಿದಂತೆ ನಡೆಯುವಲ್ಲಿ ಮೋದಿ ಸಂಪೂರ್ಣ ಸೋತಿದ್ದಾರೆ. ಉದ್ಯೋಗ ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ. ಮಾತುಗಳಿಂದಲೇ ಜನರ ಹೊಟ್ಟೆ ತುಂಬಿಸುವ ಕಲೆ ಕರಗತ ಮಾಡಿಕೊಂಡಿದ್ದಾರೆ. ಅವರಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯವಿಲ್ಲ’ ಎಂದರು.
ರಾಜ್ಯಸಭಾ ಸದಸ್ಯ ಎಲ್. ಹನುಮಂತಯ್ಯ, ‘6 ವರ್ಷದ ಮೋದಿ ಅವರ ಆಡಳಿತದಿಂದ ದೇಶದ ಪ್ರಜೆಗಳಿಗೆ ಅನುಕೂಲವಾಗಿಲ್ಲ. ಬದಲಿಗೆ ಕಾರ್ಪೊರೇಟ್ ಕಂಪನಿಗಳಿಗೆ ಲಾಭವಾಗಿದೆ. ಬಡತನ ನಿರ್ಮೂಲನೆ ಸಾಧ್ಯವಾಗಿಲ್ಲ. ಉದ್ಯೋಗ ಸೃಷ್ಟಿ ಬದಲು ನಿರುದ್ಯೋಗ ಸೃಷ್ಟಿಸುತ್ತಿದ್ದಾರೆ. ರೈತ ಹಾಗೂ ಕಾರ್ಮಿಕರ ಬದುಕನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ’ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.