ಭರಮಸಾಗರ: ಹೊಲದಲ್ಲೇ ಮನೆ, ಮನೆ ಮುಂದೆ ಮಲ್ಲಿಗೆ ತೋಟ. ಪಕ್ಕದಲ್ಲಿ ಒಂದೂವರೆ ಎಕರೆ ಅಡಿಕೆ ತೋಟ. ಕಣ್ಣೆದುರು ಸದಾ ಹಚ್ಚ ಹಸುರಿನ ಪರಿಸರ. ಮಾಡಲು ಕೈತುಂಬ ಕೆಲಸ. ಕೆಲಸಕ್ಕೆ ತಕ್ಕ ಆದಾಯ. ನೆಮ್ಮದಿಯಿಂದ ಜೀವನ ಸಾಗಿಸಲು ಇನ್ನೇನು ಬೇಕು ಎನ್ನುವುದು ನಂದಿಹಳ್ಳಿ ಗ್ರಾಮದ ರೈತ ಬಿ. ರುದ್ರೇಶ್ ಅವರ ಮಾತು.
ಇವರು ಐದು ವರ್ಷಗಳಿಂದ ಮಲ್ಲಿಗೆ ಹೂವಿನ ಕೃಷಿ ಕೈಗೊಂಡು ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಊರ ಸಮೀಪದಲ್ಲೇ ಜಮೀನು ಇದ್ದ ಕಾರಣ ಅಲ್ಲಿಯೇ ಮನೆ ಕಟ್ಟಿಕೊಂಡಿದ್ದಾರೆ. ಮನೆ ಎದುರು ಅರ್ಧ ಎಕರೆಗೂ ಹೆಚ್ಚು ಪ್ರದೇಶದಲ್ಲಿ ದುಂಡು ಮಲ್ಲಿಗೆ ಮತ್ತು ಸೂಜಿ ಮಲ್ಲಿಗೆ ಗಿಡಗಳನ್ನು ಬೆಳೆಸಿ ವರ್ಷಕ್ಕೆ ₹ 2 ಲಕ್ಷದಿಂದ ₹ 3 ಲಕ್ಷದವರೆಗೆ ಆದಾಯ ಗಳಿಸುತ್ತಿದ್ದಾರೆ. ಪಕ್ಕದಲ್ಲೇ ಒಂದೂವರೆ ಎಕರೆ ಫಸಲಿಗೆ ಬಂದ ಅಡಿಕೆ ತೋಟವಿದ್ದು ಅದರಿಂದಲೂ ಉತ್ತಮ ಆದಾಯ ಬರುತ್ತಿದೆ.
‘ನಮ್ಮದು ಬಯಲುಸೀಮೆ ಪ್ರದೇಶ. ಎರಡು ವರ್ಷ ಮಳೆ ಚನ್ನಾಗಿ ಆಗಿರುವುದರಿಂದ ಅಂತರ್ಜಲ ಸ್ವಲ್ಪ ಹೆಚ್ಚಾಗಿದೆ. ಆದರೆ, ಕೊಳವೆಬಾವಿಯನ್ನು ಶಾಶ್ವತ ಎಂದು ಭಾವಿಸುವಂತಿಲ್ಲ. ಹೀಗಾಗಿ ಕಡಿಮೆ ಜಮೀನು ಇರುವ ರೈತರು ತಮ್ಮ ಪರಿಸರಕ್ಕೆ ಅನುಗುಣವಾಗಿ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ವಾಣಿಜ್ಯ ಬೆಳೆಗಳತ್ತ ಗಮನ ಹರಿಸುವುದರಿಂದ ಆರ್ಥಿಕ ಸಂಕಷ್ಟದಿಂದ ಪಾರಾಗಬಹುದು’ ಎಂದು ಅಭಿಪ್ರಾಯಪಡುತ್ತಾರೆ ರುದ್ರೇಶ್.
ಸಸಿ ತರುವುದು, ನಾಟಿ ಮಾಡಲು ಗುಂಡಿ ತೆಗೆಯುವುದು, ಗೊಬ್ಬರ, ಹನಿ ನೀರಾವರಿ ಪದ್ಧತಿ ಸೇರಿ ಅರ್ಧ ಎಕರೆ ಮಲ್ಲಿಗೆ ತೋಟ ಮಾಡಲು ಸುಮಾರು ₹ 50 ಸಾವಿರ ಖರ್ಚಾಗುತ್ತದೆ. ನಂತರ ನಿರ್ವಹಣಾ ವೆಚ್ಚ ಹೆಚ್ಚು ಇರುವುದಿಲ್ಲ.
ಬೆಳೆಯುವ ವಿಧಾನ: ಸೂಜಿ ಮಲ್ಲಿಗೆಗೆ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ 6 ಅಡಿ ಅಂತರ ಇರುವಂತೆ ದುಂಡು ಮಲ್ಲಿಗೆಗೆ ನಾಲ್ಕು ಅಡಿ ಅಂತರವಿರುವಂತೆ 1 ಅಡಿ ಆಳ, ಅಗಲ ಇರುವ ಗುಂಡಿಗಳನ್ನು ತೆಗೆದು ಸಸಿಗಳನ್ನು ನಾಟಿ ಮಾಡಬೇಕು. ಆಗಸ್ಟ್ ತಿಂಗಳಲ್ಲಿ ನಾಟಿ ಮಾಡಿದರೆ ಮಾರ್ಚ್ ತಿಂಗಳಲ್ಲಿ ಹೂ ಬಿಡಲು ಆರಂಭವಾಗುತ್ತದೆ. ಆರಂಭದಲ್ಲಿ ಒಂದು ಗಿಡದಲ್ಲಿ 50 ಗ್ರಾಂವರೆಗೆ ಹೂವು ಸಿಗುತ್ತದೆ. ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚುತ್ತದೆ. 3 ವರ್ಷಗಳಾದ ಮೇಲೆ ಒಂದು ಗಿಡದಲ್ಲಿ ನಿತ್ಯ ಸುಮಾರು 200ರಿಂದ 250 ಗ್ರಾಂ ಹೂವು ಸಿಗುತ್ತದೆ. ನಾಲ್ಕೈದು ವರ್ಷಗಳ ನಂತರ ಗಿಡದ ಸುತ್ತಲಿನ ರಂಬೆಗಳನ್ನು ಕತ್ತರಿಸಬೇಕು.
ಅರ್ಧ ಎಕರೆಯಲ್ಲಿ ಹೂ ಬಿಡಿಸಲು 6 ಜನರ ಅವಶ್ಯಕತೆ ಇದೆ. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಹೂ ಬಿಡಿಸಲು ₹ 150 ರಿಂದ ₹ 200 ಕೂಲಿ ನೀಡಬೇಕು. ಮಧ್ಯಾಹ್ನದೊಳಗೆ ಹೂ ಬಿಡಿಸಿ ಚಿತ್ರದುರ್ಗದ ಹೂವಿನ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಾರೆ. ಇಳುವರಿ ಕಡಿಮೆ ಇದ್ದಾಗ ಕುಟುಂಬದ ಮಹಿಳೆಯರು ಮನೆಯಲ್ಲಿ ಹೂ ಕಟ್ಟಿ
ಮಾರುತ್ತಾರೆ.
20 ವರ್ಷಗಳವರೆಗೆ ಆದಾಯ
ಮಲ್ಲಿಗೆ ಹೂವಿನ ಬೆಲೆ ಕೆ.ಜಿ.ಗೆ ₹ 180ರಿಂದ ಆರಂಭವಾಗಿ ಸೀಜನ್‌ನಲ್ಲಿ ₹ 400 ರಿಂದ ₹ 800ರವರೆಗೆ ಇರುತ್ತದೆ. ಸಾಮಾನ್ಯವಾಗಿ ಮೇ, ಜೂನ್, ಜುಲೈ ತಿಂಗಳಲ್ಲಿ ಬೆಲೆ ಕಡಿಮೆ ಇರುತ್ತದೆ. ಆಗಸ್ಟ್ ತಿಂಗಳಿಂದ ದರ ಹೆಚ್ಚಾಗುತ್ತದೆ. ಸೂಜಿ ಮಲ್ಲಿಗೆ ನಿತ್ಯ ಹೂವು ಬಿಡುತ್ತದೆ. ದುಂಡು ಮಲ್ಲಿಗೆ ತಿಂಗಳಲ್ಲಿ ಹದಿನೈದು ದಿನ ಹೂ ಬಿಡುತ್ತದೆ. ದುಂಡು ಮಲ್ಲಿಗೆಗೆ ಹೆಚ್ಚು ಬೇಡಿಕೆ. ಸೂಜಿ ಮಲ್ಲಿಗೆಗೆ ರೋಗ ಬಾಧೆ ಕಡಿಮೆ. ದುಂಡು ಮಲ್ಲಿಗೆಗೆ 15 ದಿನಗಳಿಗೊಮ್ಮೆ ಔಷಧ ಸಿಂಪಡಿಸಬೇಕು. ಸರಿಯಾಗಿ ನಿರ್ವಹಣೆ ಮಾಡಿದರೆ 20 ವರ್ಷಗಳವರೆಗೆ ಆದಾಯ ಪಡೆಯಬಹುದು’ ಎಂದು ರುದ್ರೇಶ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.