ADVERTISEMENT

ಮೆಕ್ಕೆಜೋಳಕ್ಕೆ ಲದ್ದಿ ಹುಳು ಕಾಟ: ಕೃಷಿ ಅಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 13:17 IST
Last Updated 20 ಜೂನ್ 2024, 13:17 IST
ಸಿರಿಗೆರೆಯಲ್ಲಿ ಮೆಕ್ಕೆಜೋಳದ ಬೆಳೆಗೆ ಲದ್ದಿ ಹುಳುಗಳ ಕಾಟ ಆರಂಭವಾಗಿದ್ದು, ಕೃಷಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು
ಸಿರಿಗೆರೆಯಲ್ಲಿ ಮೆಕ್ಕೆಜೋಳದ ಬೆಳೆಗೆ ಲದ್ದಿ ಹುಳುಗಳ ಕಾಟ ಆರಂಭವಾಗಿದ್ದು, ಕೃಷಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು   

ಸಿರಿಗೆರೆ: ಭರಮಸಾಗರ ಹೋಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮುಂಚಿತವಾಗಿಯೇ ಬಿತ್ತನೆ ಮಾಡಿರುವ ಮೆಕ್ಕೆಜೋಳದ ಪೈರಿಗೆ ಸೈನಿಕ ಹುಳು ರೋಗ ಬಾಧೆ ತಟ್ಟಿರುವುದು ವರದಿಯಾಗಿದೆ.

ಸಿರಿಗೆರೆ ಸುತ್ತಲಿನ ಹಲವು ಹಳ್ಳಿಗಳಲ್ಲಿ ಬಿತ್ತನೆಯಾಗಿರುವ ಮೆಕ್ಕೆಜೋಳದ ಜಮೀನುಗಳಿಗೆ ಕೃಷಿ ಅಧಿಕಾರಿ ಎಚ್.‌ಎಸ್.‌ ವನಜಾಕ್ಷಿ ಮತ್ತು ತಂಡ ಬುಧವಾರ ಭೇಟಿ ನೀಡಿ ರೋಗವನ್ನು ದೃಢೀಕರಿಸಿದ್ದಾರೆ.

ಸಿರಿಗೆರೆಯ ಕೃಷಿಕ ಬೆನ್ನೂರ ಸತೀಶ್‌ ಜಮೀನಿನಲ್ಲಿ ಪರಿಶೀಲನೆ ನಡೆಸಲಾಯಿತು. ಮೆಕ್ಕೆಜೋಳ ಬೆಳೆಯಲ್ಲಿ ಎಲೆ ಮತ್ತು ಸುಳಿಯನ್ನು ತಿನ್ನುವ ಹುಳುಗಳು ಕಾಣಿಸಿಕೊಂಡಿವೆ. ಇದನ್ನು ವೈಜ್ಞಾನಿಕವಾಗಿ ಸ್ಫೋಡಾಫ್ಟರಾ ಫ್ಯೂಜಿಫಡಾ ಎಂದು ಕರೆಯಲಾಗುತ್ತದೆ. ಈ ಹುಳುಗಳ ಜೊತೆಗೆ ಇತರೆ ಕಾಂಡ ಕೊರಕ ಬಾಧೆಯೂ ಕಂಡುಬಂದಿದೆ.

ADVERTISEMENT

ತಾಲ್ಲೂಕಿನಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಕಡಿಮೆ ಉಷ್ಣಾಂಶ ಮತ್ತು ಹೆಚ್ಚಿನ ಆದ್ರತೆಯ ವಾತಾವರಣ ಈ ರೋಗ ಉಲ್ಬಣಿಸಲು ಕಾರಣವಾಗುತ್ತದೆ. ಹೆಚ್ಚು ಪ್ರಮಾಣದಲ್ಲಿ ಮಳೆ ಬಂದರೆ ಈ ರೋಗ ತಾನಾಗಿ ನಿಯಂತ್ರಣಕ್ಕೆ ಬರುತ್ತದೆ. ಮಳೆ ಕಡಿಮೆ ಆದಲ್ಲಿ ಈ ರೋಗ ಕಂಡುಬರುವ ಜಮೀನಿನ ರೈತರು ಬಿತ್ತನೆ ಮಾಡಿದ 15–20 ದಿನಗಳಲ್ಲಿ ಮೆಟರೀಜಿಯಂ ಅನಿಸೋಷ್ಠಿಯೆ 5 ಗ್ರಾಂ ಪ್ರತಿ ಲೀಟರ್‌ ನೀರಿಗೆ ಸೇರಿಸಿ ಸುಳಿಗೆ ಸಿಂಪಡಿಸಬೇಕು ಎಂದು ಚ್.‌ಎಸ್.‌ ವನಜಾಕ್ಷಿ ತಿಳಿಸಿದರು. 

ರೈತರು ತಮ್ಮ ಜಮೀನುಗಳಲ್ಲಿ ದೀರ್ಘಕಾಲದಿಂದ ಒಂದೇ ಬೆಳೆಯನ್ನು ಬೆಳೆಯುವ ಪದ್ಧತಿ ಅನುಸರಿಸುತ್ತಿರುವುದೂ ಕೂಡ ಇದಕ್ಕೆ ಕಾರಣವಾಗಿದೆ. ಜಮೀನಿನಲ್ಲಿ ಪ್ರತಿ ವರ್ಷವೂ ಬೇರೆ ಬೇರೆ ಬೆಳೆಗಳನ್ನು ರೂಢಿ ಮಾಡಿಕೊಳ್ಳುವುದು ಅಗತ್ಯ. ಇದರಿಂದ ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ ಎಂದು ಹೇಳಿದರು.

ಅಧಿಕಾರಿಗಳ ಭೇಟಿಯ ಸಮಯದಲ್ಲಿ ರೈತರಾದ ಬೆನ್ನೂರು ಸತೀಶ್‌, ಪಂಚಾಕ್ಷರಯ್ಯ, ಷಣ್ಮುಖ, ಕೊಟ್ರೇಶ್‌ ಮುಂತಾದವರು ಹಾಜರಿದ್ದರು. 

ಮೆಕ್ಕೆಜೋಳದ ಎಲೆಗಳ ರಸ ಹೀರಿರುವ ಕೀಟಗಳು
ಮೆಕ್ಕೆಜೋಳದ ಬೆಳೆಯ ಎಲೆಗಳು ಒಣಗಿದಂತಾಗಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.