ಹೊಳಲ್ಕೆರೆ: ರಾಗಿ ಎಂದರೆ ಅದು ಕಡುಗಂದು ಬಣ್ಣದ್ದು ಎಂಬ ಭಾವನೆ ಎಲ್ಲರಲ್ಲೂ ಇದೆ. ಸಾಮಾನ್ಯವಾಗಿ ಈ ಭಾಗದಲ್ಲಿ ಇದೇ ಬಣ್ಣದ ರಾಗಿಯನ್ನೇ ರೈತರು ಬೆಳೆಯುವುದು ವಾಡಿಕೆ. ಆದರೆ, ಬಿಳಿ ಬಣ್ಣದ ರಾಗಿಯೂ ಇದೆ. ಅದನ್ನು ತಾಲ್ಲೂಕಿನ ದುಮ್ಮಿ ಗ್ರಾಮದ ರೈತ ಡಿ.ಸಿ. ಲೋಕೇಶ್ವರ ಬೆಳೆದು ಗಮನ ಸೆಳೆದಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಮ್ಮ 22 ಗುಂಟೆ ಜಮೀನಿನಲ್ಲಿ ಬಿಳಿ ರಾಗಿ ಬೆಳೆದಿರುವ ಇವರು, ಇದೀಗ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದಾರೆ.
‘ಬಿಳಿ ರಾಗಿ ಬೆಳೆಯಬೇಕು ಎಂದು ಹಲವು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದೆ. ಬೆಂಗಳೂರು, ಮೈಸೂರು, ಮಂಡ್ಯ ಮತ್ತಿತರ ಕಡೆ ಅಲೆದಾಡಿದರೂ ಬಿತ್ತನೆಬೀಜ ಸಿಗದ ಆ ಪ್ರಯತ್ನಕ್ಕೆ ಹಿನ್ನಡೆ ಆಗಿತ್ತು. ಕೊನೆಗೆ ಬಬ್ಬೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬಿಳಿ ರಾಗಿ ಬಿತ್ತನೆಬೀಜ ದೊರೆಯಿತು. ಅದನ್ನು ಬಿತ್ತಿ ಮೂರು ತಿಂಗಳು ಕಲೆದಿದ್ದು, ಇನ್ನೊಂದು ವಾರದಲ್ಲಿ ಬೆಳೆ ಕಟಾವು ಮಾಡಬೇಕು. ಚನ್ನಪಟ್ಟಣ ಭಾಗದಲ್ಲಿ ಒಂದು ಕೆ.ಜಿ. ಬಿಳಿ ರಾಗಿಗೆ ₹ 90ರಿಂದ ₹ 100 ದರ ಇದೆ. ಸ್ಥಳೀಯರೂ ನಮಗೆ ಕೊಡಿ ಎಂದು ಕೇಳುತ್ತಿದ್ದಾರೆ’ ಎಂದು ಬೆಲೆಗಾರ ಲೋಕೇಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಾಗಿ ಬೆಳೆಯಲು ಪ್ರತಿ ವರ್ಷ ಸಾಮಾನ್ಯವಾಗಿ ಬಳಸುವ ಗೊಬ್ಬರವನ್ನೇ ಈ ಬಿಳಿ ರಾಗಿ ಬೆಳೆಗೂ ಹಾಕಿದ್ದೇನೆ. ಇದಕ್ಕೆ ರೋಗ ಬಾಧೆಯ ಸಾಧ್ಯತೆ ವಿರಳ. ರಾಗಿ ಕಾಳುಗಳು ಸಾಮೆಯಂತೆ ಬಿಳಿ ಬಣ್ಣದಿಂದ ಕೂಡಿರುತ್ತವೆ. ರಾಗಿಯ ತೆನೆಗಳು ದಪ್ಪವಾಗಿದ್ದು, ಇದೇ ರಾಗಿಯನ್ನು ಬಿತ್ತನೆ ಬೀಜವಾಗಿಯೂ ಬಳೆಸಬಹುದು’ ಎಂದು ಅವರು ಹೇಳಿದರು.
‘ಮಂಡ್ಯದ ವಿ.ಸಿ. ಫಾರಂ ಕೃಷಿ ವಿಶ್ವವಿದ್ಯಾಲಯದ ವಿಭಾಗೀಯ ಸಂಶೋಧನಾ ಕೇಂದ್ರದ ವಿಜ್ಞಾನಿಗಳು 2018ರಲ್ಲಿ ಕೆಎಂಆರ್-340 ತಳಿಯ ಬಿಳಿ ರಾಗಿ ಬಿತ್ತನೆಬೀಜ ಬಿಡುಗಡೆ ಮಾಡಿದ್ದರು. ಮಾಮೂಲಿ ರಾಗಿಗೂ, ಬಿಳಿ ರಾಗಿಗೂ ಪೋಷಕಾಂಶಗಳಲ್ಲಿ ವ್ಯತ್ಯಾಸಗಳಿಲ್ಲ. ಆದರೆ, ಈ ರಾಗಿ ಬಿಳಿ ಬಣ್ಣದ್ದಾಗಿರುವುದರಿಂದ ಹೆಚ್ಚು ಬೇಡಿಕೆ ಇದೆ. ಬೇಕರಿ ಪದಾರ್ಥಗಳು, ಹಪ್ಪಳ ತಯಾರಿಸಲು ಈ ರಾಗಿ ಬಳಸಲಾಗುತ್ತದೆ. ಹೋಟೆಲ್‌ಗಳಲ್ಲಿ ಇಡ್ಲಿ, ದೋಸೆ ತಯಾರಿಸಲು ಈ ರಾಗಿ ಬಳಸುತ್ತಾರೆ. ಇಳುವರಿಯೂ ಎಕರೆಗೆ ಸರಾಸರಿ 10 ಕ್ವಿಂಟಲ್ ಬರುತ್ತದೆ’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಕೆ.ಟಿ.ಮಂಜುನಾಥ್.
ಕೆಎಂಆರ್-340 ಬಿಳಿ ರಾಗಿಯು ಬೆಂಕಿ ರೋಗ ಹಾಗೂ ಸಸ್ಯ ಹೇನು ರೋಗ ನಿರೋಧಕ ತಳಿಯಾಗಿದೆ. ಮಳೆಯಾಶ್ರಿತ ಬೆಳೆಯಲ್ಲೂ ಎಕರೆಗೆ 10 ಕ್ವಿಂಟಲ್ ಇಳುವರಿ ಬರಲಿದೆ.-ಕೆ.ಟಿ.ಮಂಜುನಾಥ್, ಸಹಾಯಕ ಕೃಷಿ ನಿರ್ದೇಶಕ
ರೈತರು ಹೊಸ ತಳಿಗಳನ್ನು ಬೆಳೆಯುವುದರಿಂದ ಹೆಚ್ಚು ಲಾಭ ಗಳಿಸಬಹುದು. ಆಸಕ್ತಿಯಿಂದ ಕೃಷಿ ಮಾಡಿದರೆ ಲಾಭ ಸಿಗುತ್ತದೆ.-ಡಿ.ಸಿ.ಲೋಕೇಶ್ವರ, ಬಿಳಿ ರಾಗಿ ಬೆಳೆದ ದುಮ್ಮಿ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.