ಚಿತ್ರದುರ್ಗ: ಕೇಂದ್ರ ಸರ್ಕಾರದ ಕಾರ್ಮಿಕ, ರೈತ, ಜನ ವಿರೋಧಿ ನೀತಿ ಖಂಡಿಸಿ ಹತ್ತಕ್ಕೂ ಅಧಿಕ ಟ್ರೇಡ್ ಯೂನಿಯನ್ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್ ಹಿನ್ನಲೆಯಲ್ಲಿ ಬುಧವಾರ ಸಂಘಟನೆಗಳು, ರೈತರು ಪ್ರತ್ಯೇಕವಾಗಿ ನಗರದ ಎರಡು ಕಡೆಗಳಲ್ಲಿ ಮುಷ್ಕರ ನಡೆಸಿದರು.
ಎಐಟಿಯುಸಿ, ಐಎನ್‌ಟಿಯುಸಿ, ಎಐಯುಟಿಯುಸಿ, ಸಿಐಟಿಯು, ಎಐಕೆಎಸ್, ಎಐಡಿಎಸ್‌ಒ ಸಂಘಟನೆಗಳ ಕಾರ್ಯಕರ್ತರು ಬೆಳಿಗ್ಗೆ ಗಾಂಧಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದರು. ಈ ವೇಳೆ ಕಮ್ಯುನಿಸ್ಟ್ ಸೇರಿ ಇತರೆ ಸಂಘಟನೆಗಳ 30 ಮಂದಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಸಂಘಟನೆಗಳಿಗೆ ಜಿಲ್ಲಾಧಿಕಾರಿ ವೃತ್ತದ ಮುಂಭಾಗ ಪ್ರತಿಭಟಿಸಲು ಅವಕಾಶ ನೀಡಲಾಗಿತ್ತು. ಆದರೆ, ಮೆರವಣಿಗೆ ನಡೆಸಲು ಪೊಲೀಸ್ ಇಲಾಖೆ ಅವಕಾಶ ನೀಡಿರಲಿಲ್ಲ. ಅದನ್ನು ಮೀರಿ ಮೆರವಣಿಗೆ ನಡೆಸಲು ಮುಂದಾಗಿದ್ದರಿಂದ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗುವ ಸಾಧ್ಯತೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಂಧಿಸಿ, ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದೊಯ್ದರು.
ಬಂಧಿಸಿದವರನ್ನು ಎರಡು ಗಂಟೆಗಳ ನಂತರ ಬಿಡುಗಡೆಗೊಳಿಸಲಾಯಿತು. ಬಳಿಕ ಜಿಲ್ಲಾಧಿಕಾರಿ ವೃತ್ತದ ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಮುಖಂಡರು, ಕಾರ್ಯಕರ್ತರು, ಆಶಾ, ಅಂಗನವಾಡಿ ಕಾರ್ಯಕರ್ತೆಯರೂ ಆಕ್ರೋಶ ಹೊರಹಾಕಿದರು.
ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ರಾಜ್ಯ ರೈತಸಂಘ ಹಾಗೂ ಹಸಿರುಸೇನೆ, ಅಖಿಲ ಭಾರತ ಕಿಸಾನ್ ಸಭಾ, ಕರ್ನಾಟಕ ಪ್ರಾಂತ ರೈತಸಂಘ ಜಿಲ್ಲಾ ಶಾಖೆಯ ಕಾರ್ಯಕರ್ತರು, ಮುಖಂಡರು ಎಪಿಎಂಸಿ ರಸ್ತೆ ಮಾರ್ಗದ ರೈತ ಭವನ ಸಮೀಪದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೂ ಮುಷ್ಕರ ನಡೆಸಿದರು.
ರೈತರು, ಕೃಷಿ ಕೂಲಿಕಾರರನ್ನು ಸಾಲದಿಂದ ಸಂಪೂರ್ಣ ಮುಕ್ತಿಗೊಳಿಸಲು ಋಣಮುಕ್ತ ಕಾಯ್ದೆ ಜಾರಿಗೊಳಿಸಬೇಕು. ಡಾ. ಸ್ವಾಮಿನಾಥನ್ ವರದಿ ಆಧಾರಿತ ಕನಿಷ್ಟ ಬೆಂಬಲ ಬೆಲೆ ಖಾತರಿ ಕಾಯ್ದೆ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮುಷ್ಕರನಿರತ ಸ್ಥಳಕ್ಕೆ ಜಿಲ್ಲಾಧಿಕಾರಿ ಅವರು ಬಾರದ ಹಿನ್ನಲೆಯಲ್ಲಿ ರೈತ ಮುಖಂಡರು ಆಕ್ರೋಶಗೊಂಡರು. ಸರ್ಕಾರ ಹಾಗೂ ಡಿಸಿ ವಿರುದ್ಧ ಘೋಷಣೆ ಕೂಗಿದರು.ಜಿಲ್ಲಾಧಿಕಾರಿ ಕಚೇರಿಯವರೆಗೂ ಮೆರವಣಿಗೆ ಹೊರಡಲು ತೀರ್ಮಾನಿಸಿ, ಮುನ್ನುಗ್ಗಿದರು. ಇದೇ ಸಂದರ್ಭದಲ್ಲಿ ಪೊಲೀಸರು ಬ್ಯಾರಿಕೇಡ್ ಅಡ್ಡ ಹಾಕಿದರು. ಅದನ್ನು ದಾಟಲು ಮುಂದಾದ ಸಂದರ್ಭದಲ್ಲಿ ಸುಮಾರು 50ಕ್ಕೂ ಹೆಚ್ಚು ರೈತರನ್ನು ಪೊಲೀಸರು ಅನಿವಾರ್ಯವಾಗಿ ಬಂಧಿಸಿದರು.
ಕೋಟೆ ಪೊಲೀಸ್ ಠಾಣೆ ಆವರಣಕ್ಕೆ ರೈತರನ್ನು ಕರೆತಂದಾಗ ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದರು.ಇಲ್ಲಿನ ಜಿಲ್ಲಾಧಿಕಾರಿ ರೈತ ಸಮುದಾಯದ ಕುರಿತು ನಿರ್ಲಕ್ಷ್ಯ ತೋರುತ್ತಿರುವುದು ಇದೇ ಮೊದಲೇನಲ್ಲ. ಎರಡ್ಮೂರು ಬಾರಿ ಮನವಿ ನೀಡಲು ಹೋದಾಗ ವಿನಾಕಾರಣ ತಡ ಮಾಡಿದ್ದಾರೆ. ನಿಜವಾಗಿಯೂ ಕಾಳಜಿ ಇದ್ದಿದ್ದರೆ ಈ ರೀತಿ ವರ್ತಿಸುತ್ತಿರಲಿಲ್ಲ ಎಂದು ಡಿಸಿ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮೆಲ್ಲರನ್ನು ಜಿಲ್ಲಾಧಿಕಾರಿ ಕಚೇರಿ ಬಳಿಗೆ ಕರೆದುಕೊಂಡು ಹೋಗಿ ಎಂದು ಮೊದಲು ಮನವಿ ಮಾಡಿದ ರೈತರು, ನಂತರ ಮನವಿ ಕೊಡುವುದಿಲ್ಲ ಎಂದು ಅಸಮಾಧಾನ ಹೊರಹಾಕಿ ಮಧ್ಯಾಹ್ನ 2ರ ಸುಮಾರಿಗೆ ಮುಷ್ಕರ ನಿಲ್ಲಿಸಿದರು.
ರೈತ ಮುಖಂಡರಾದ ನುಲೇನೂರು ಶಂಕರಪ್ಪ, ಬಸ್ತಿಹಳ್ಳಿ ಸುರೇಶ್‌ಬಾಬು, ಮುದ್ದಾಪುರ ನಾಗರಾಜ, ಹಂಪಯ್ಯನಮಾಳಿಗೆ ಧನಂಜಯ, ವಿವಿಧ ಸಂಘಟನೆಗಳ ಮುಖಂಡರಾದ ಶಿವರುದ್ರಪ್ಪ, ಬಸವರಾಜಪ್ಪ, ಸಿ.ಕೆ. ಗೌಸ್‌ಪೀರ್, ನಾಗರಾಜಾಚಾರಿ, ರವಿಕುಮಾರ್, ಟಿ.ಶಫಿವುಲ್ಲಾ, ರಹಮ್ಮತ್ ಉಲ್ಲಾ, ಮಹಮ್ಮದ್ ಸೈಫುಲ್ಲಾ, ಶೇಖ್ ಕಲೀಂ ಉಲ್ಲಾ, ಶಿವುಯಾದವ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.