ADVERTISEMENT

ಎಲ್ಲ ಸಾಹಿತಿಗಳೂ ರಾಜಕಾರಣ ಮಾಡುವುದಿಲ್ಲ: ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ

ಡಿಕೆಶಿ ಹೇಳಿಕೆಗೆ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿರುಗೇಟು

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 15:39 IST
Last Updated 20 ಜೂನ್ 2024, 15:39 IST
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ   

ಹೊಸದುರ್ಗ: ‘ಸಾಂಸ್ಕೃತಿಕ ಅಕಾಡೆಮಿಗಳಿಗೆ, ಪ್ರಾಧಿಕಾರಗಳಿಗೆ ಸರ್ಕಾರದಿಂದ ಅಧ್ಯಕ್ಷರು ನೇಮಕವಾಗಿದ್ದರೂ ಅವರಿಗೆ ಸ್ವಾಯತ್ತತೆ ಇದೆ. ಅಕಾಡೆಮಿ, ಪ್ರಾಧಿಕಾರಗಳು ಸರ್ಕಾರದ ಅಂಗಸಂಸ್ಥೆಗಳಾದರೂ ರಾಜಕೀಯ ಪಕ್ಷಗಳ ಅಂಗಸಂಸ್ಥೆಗಳಲ್ಲ. ಎಲ್ಲ ಸಾಹಿತಿಗಳೂ ರಾಜಕಾರಣ ಮಾಡುವುದಿಲ್ಲ. ಬದಲಿಗೆ, ರಾಜಕಾರಣಿಗಳು ತಪ್ಪು ಮಾಡಿದಾಗ ಎಚ್ಚರಿಸುವ ಅವಕಾಶ ಸಾಹಿತಿಗಳಿಗಿದೆ’ ಎಂದು ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

‘ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ‘ಸಾಹಿತಿಗಳನ್ನು ನಾನೇ ಕರೆಸಿದ್ದು; ತಪ್ಪೇನು?’ ಎಂದು ಕೇಳಿದ್ದಾರೆ. ಕರೆಸಿದ್ದರಲ್ಲಿ ಖಂಡಿತ ತಪ್ಪಿಲ್ಲ. ಆದರೆ ಪ್ರಾಧಿಕಾರದ ಅಧ್ಯಕ್ಷರೂ ರಾಜಕಾರಣಿಗಳೇ ಎಂದಿರುವುದು ಮತ್ತು ಸಾಂಸ್ಕೃತಿಕ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರನ್ನು ಸರ್ಕಾರವೇ ನೇಮಕ ಮಾಡಿದೆ. ಅವರನ್ನು ಎಲ್ಲಿಗೆ ಬೇಕಾದರೂ ಕರೆಸಿಕೊಳ್ಳಬಹುದು ಎಂದಿರುವುದು ಸರಿಯಲ್ಲ’ ಎಂದು ಅವರು ಪ್ರಕಟಣೆ ಮೂಲಕ ಹೇಳಿದ್ದಾರೆ.

ಮದ್ಯ ಮಾರಾಟ ನಿಷೇಧಿಸಿ:

ADVERTISEMENT

ಸರ್ಕಾರ ದುಬಾರಿ ಮದ್ಯದ ದರ ಇಳಿಕೆ ಮಾಡುವುದರ ಬದಲು, ಮದ್ಯದ ಮಾರಾಟವನ್ನೇ ನಿಷೇಧಿಸಿದರೆ ಅದು ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ತತ್ವಗಳಿಗೆ ಗೌರವ ಕೊಟ್ಟಂತಾಗುತ್ತಿದೆ ಎಂದು ಪಂಡಿತಾರಾಧ್ಯ ಶ್ರೀ ತಿಳಿಸಿದ್ದಾರೆ.

‘ದುಬಾರಿ ಮದ್ಯ ಜುಲೈ 1ರಿಂದ ಅಗ್ಗ ಎನ್ನುವ ‘ಪ್ರಜಾವಾಣಿ’ಯ ವರದಿ ಓದಿ ಸರ್ಕಾರದ ಧೋರಣೆಯ ಬಗ್ಗೆ ಬೇಸರವಾಗಿದೆ. ಸರ್ಕಾರ ಬಡವರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಿರುವುದು ಸ್ತುತ್ಯರ್ಹ. ದರ ಇಳಿಕೆಯಾದರೆ ಮದ್ಯ ಮಾರಾಟ ಗಣನೀಯವಾಗಿ ಏರಿಕೆಯಾಗಿ, ಬೊಕ್ಕಸಕ್ಕೆ ಇನ್ನೂ ಹೆಚ್ಚು ಅಬಕಾರಿ ತೆರಿಗೆ ಬರಬಹುದು ಎಂಬ ನಿರೀಕ್ಷೆ ಇಲಾಖೆಯ ಅಧಿಕಾರಿಗಳಲ್ಲಿದೆ ಎಂದು ವರದಿಯಾಗಿದೆ. ಇದು ಒಂದು ಕಡೆಯಿಂದ ಬಡವರಿಗೆ ಸಹಾಯ ಮಾಡಿ ಹೆಚ್ಚು ಕುಡಿಯಿರಿ ಎಂದು ಪ್ರೋತ್ಸಾಹಿಸಿ ಕನ್ನಡ ನಾಡನ್ನು ಕುಡುಕರ ಬೀಡನ್ನಾಗಿಸಿದಂತೆ. ಈ ಬಗ್ಗೆ ಸರ್ಕಾರ ಮರುಚಿಂತನೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.