ADVERTISEMENT

ಚಿತ್ರದುರ್ಗ | ಪತಿಯ ಕೊಲೆ; ನ್ಯಾಯ ಪಡೆಯಲು ಹೋರಾಡುವೆ: ರೇಣುಕಾಸ್ವಾಮಿ ಪತ್ನಿ

ತಾಯಿ ಜೊತೆ ಮಾತನಾಡಿದ್ದೇ ಕೊನೆ, ದರ್ಶನ್‌ ಭೇಟಿ ನೆಪದಲ್ಲಿ ಅಪಹರಣ?

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 0:16 IST
Last Updated 12 ಜೂನ್ 2024, 0:16 IST
ಚಿತ್ರದುರ್ಗದ ವಿಆರ್‌ಎಸ್‌ ಬಡಾವಣೆಯಲ್ಲಿರುವ ರೇಣುಕಾಸ್ವಾಮಿ ನಿವಾಸ
ಚಿತ್ರದುರ್ಗದ ವಿಆರ್‌ಎಸ್‌ ಬಡಾವಣೆಯಲ್ಲಿರುವ ರೇಣುಕಾಸ್ವಾಮಿ ನಿವಾಸ   

ಚಿತ್ರದುರ್ಗ: ಬೆಂಗಳೂರಿನಲ್ಲಿ ಕೊಲೆಯಾಗಿರುವ ಇಲ್ಲಿಯ ತುರುವನೂರು ರಸ್ತೆ, ವಿಆರ್‌ಎಸ್‌ ಬಡಾವಣೆ ನಿವಾಸಿ ರೇಣುಕಾಸ್ವಾಮಿ ನಿವಾಸದ ಬಳಿ ಮಂಗಳವಾರ ಬೆಳಿಗ್ಗೆಯಿಂದಲೇ ನೀರವ ಮೌನ ಆವರಿಸಿತ್ತು. ‘ಪತಿ ಆಸ್ಪತ್ರೆಯಲ್ಲಿದ್ದಾರೆ, ಜೀವಂತವಾಗಿ ಬರುತ್ತಾರೆ’ ಎಂದು ನಂಬಿದ್ದ ರೇಣುಕಾಸ್ವಾಮಿ ಪತ್ನಿ ಸಹನಾಗೆ ಮಂಗಳವಾರ ಮಧ್ಯಾಹ್ನ ಪತಿ ಸಾವಿನ ಸುದ್ದಿ ತಿಳಿದ ಕೂಡಲೇ ದುಃಖದ ಕಟ್ಟೆಯೊಡೆಯಿತು.

ಪತ್ನಿ ಗರ್ಭಿಣಿ ಎಂಬ ಕಾರಣಕ್ಕೆ ಮಧ್ಯಾಹ್ನದವರೆಗೂ ಮನೆಯವರು ವಿಷಯ ತಿಳಿಸಿರಲಿಲ್ಲ. ಸಂಜೆ ಮೃತದೇಹ ಬರಲಿದೆ ಎಂಬ ಮಾಹಿತಿ ಬಂದ ನಂತರ ಸಂಬಂಧಿಗಳು ರೇಣುಕಾಸ್ವಾಮಿ ಕೊಲೆಯಾಗಿದ್ದನ್ನು ತಿಳಿಸಿದರು.

ಬೆಸ್ಕಾಂ ನಿವೃತ್ತ ನೌಕರ ಕಾಶಿನಾಥ್‌ ಶಿವಣ್ಣ ಗೌಡರ್‌– ರತ್ನಪ್ರಭಾ ದಂಪತಿಗೆ ರೇಣುಕಾಸ್ವಾಮಿ (35) ಒಬ್ಬನೇ ಪುತ್ರ. ಕಳೆದ ವರ್ಷವಷ್ಟೇ ರೇಣುಕಾಸ್ವಾಮಿ ಕೈಹಿಡಿದಿದ್ದ ಹರಿಹರದ ಸಹಾನಾ 3 ತಿಂಗಳ ಗರ್ಭಿಣಿ. ‘ನಾನು ಕೆಲಸಕ್ಕೆ  ಹೋಗುತ್ತಿದ್ದೇನೆ, ನೀನು ಮಾತ್ರೆ ನುಂಗುವುದನ್ನು ಮರೆಯಬೇಡ‘ ಎಂದು ಹೇಳಿ ಹೋದವರು ಮನೆಗೆ ಶವವಾಗಿ ಬರುತ್ತಿದ್ದಾರೆ’ ಎಂದು ಪತ್ನಿ ಸುದ್ದಿಗಾರರೆದುರು ಗೋಳಿಟ್ಟರು.

ADVERTISEMENT

‘ನಾನು ತಾಯಿ ಆಗುತ್ತಿದ್ದೇನೆ, ಇಂತಹ ಕಷ್ಟ ಯಾರಿಗೂ ಬರಬಾರದು, ನನ್ನೊಳಗೆ ಒಂದು ಜೀವ ಇದೆ, ಅದಕ್ಕೇ  ಸಂಕಟವಾಗುತ್ತಿದೆ. ನನ್ನ ಗಂಡ ತಪ್ಪು ಮಾಡಿದ್ದರೆ ಎಚ್ಚರಿಕೆ ಕೊಡಬಹುದಾಗಿತ್ತು, ಯಾಕೆ ಕೊಲೆ ಮಾಡಿದರು? ನನ್ನೊಂದಿಗೆ ಜನ ಇದ್ದಾರೆ. ನನ್ನ ಗಂಡನ ಸಾವಿನ ನ್ಯಾಯ ಪಡೆಯಲು ಹೋರಾಟ ಮಾಡುತ್ತೇನೆ’ ಎಂದು ಸಹನಾ ನೋವು ನುಂಗಿಕೊಳ್ಳುತ್ತಲೇ ಹೇಳಿದರು.

ತಾಯಿ ಜೊತೆ ಮಾತನಾಡಿದ್ದೇ ಕೊನೆ:

ಖಾಸಗಿ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಾಸ್ವಾಮಿ ಜೂನ್‌ 8ರಂದು ಮಧ್ಯಾಹ್ನದವರೆಗೂ ಅಲ್ಲಿ ಕೆಲಸ ಮಾಡಿದ್ದರು. ಊಟಕ್ಕೆ ಕರೆಯಲೆಂದೇ ತಾಯಿ ಕರೆ ಮಾಡಿದಾಗ ಸ್ನೇಹಿತರ ಜೊತೆ ಹೊರಗೆ ಹೋಗುತ್ತಿರುವುದಾಗಿ ತಿಳಿಸಿದ್ದರು. ಕುಟುಂಬದಲ್ಲಿ ತಾಯಿ ಜೊತೆ ಮಾತನಾಡಿದ್ದೇ ಕೊನೆ. ಅವತ್ತು ರಾತ್ರಿಯಾದರೂ ಮನೆಗೆ ಬಾರದಿದ್ದ ಕಾರಣಕ್ಕೆ ಪಾಲಕರು ಮಾರನೇ (ಜೂನ್‌ 9) ದಿನವಿಡೀ ಹುಡುಕಾಟ ನಡೆಸಿದ್ದರು. ಕೆಲಸ ಮಾಡುತ್ತಿದ್ದ ಫಾರ್ಮಸಿಯಿಂದ 100 ಮೀಟರ್‌ ದೂರದಲ್ಲಿ ರೇಣುಕಾಸ್ವಾಮಿ ಬೈಕ್‌ ಸಹ ಪತ್ತೆಯಾಗಿತ್ತು.

ನಾಪತ್ತೆ ಪ್ರಕರಣ ದಾಖಲು ಮಾಡಲು ಕುಟುಂಬ ಸದಸ್ಯರು ಸಿದ್ಧತೆ ನಡೆಸುತ್ತಿರುವಾಗ ಬೆಂಗಳೂರು ಪೊಲೀಸರು ಕರೆ ಮಾಡಿ ಕರೆಸಿಕೊಂಡಿದ್ದಾರೆ. ಮಂಗಳವಾರ ಬೆಳಿಗ್ಗೆಯಷ್ಟೇ ರೇಣುಕಾಸ್ವಾಮಿ ಸಾವಿನ ಸುದ್ದಿ ಬೆಳಕಿಗೆ ಬಂದಿದೆ.

ಸದಾ ಏಕಾಂಗಿಯಾಗಿ ಇರುತ್ತಿದ್ದ ರೇಣುಕಾಸ್ವಾಮಿ ಮೊಬೈಲ್‌, ಇಂಟರ್‌ನೆಟ್‌ಗೆ ದಾಸರಾಗಿದ್ದರು, ಅತಿಯಾಗಿ ಗುಟ್ಕಾ ಸೇವನೆ ಮಾಡುತ್ತಿದ್ದರು. ಇದಕ್ಕೂ ಮೊದಲು ಹಲವು ಮಹಿಳೆಯರಿಗೆ ಕೆಟ್ಟದಾಗಿ ಸಂದೇಶ ಕಳುಹಿಸಿದ್ದ ಕಾರಣಕ್ಕೆ ಎಚ್ಚರಿಕೆ ನೀಡಲಾಗಿತ್ತು ಎಂದು ಆಪ್ತ ವಲಯದವರು ಮಾತನಾಡಿಕೊಳ್ಳುತ್ತಿದ್ದಾರೆ. ದರ್ಶನ್‌ ಅಭಿಮಾನಿಯೂ ಆಗಿದ್ದ ರೇಣುಕಾಸ್ವಾಮಿ, ಅವರ ಗೆಳತಿ ಪವಿತ್ರಾಗೌಡ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟದಾಗಿ ಸಂದೇಶ ಹಾಕುತ್ತಿದ್ದರು. ಇದೇ ಕಾರಣ ದರ್ಶನ್ ಹಾಗೂ ಅವರ ಅಭಿಮಾನಿಗಳು ಸಿಟ್ಟಾಗಿದ್ದರು ಎಂಬ ಮಾತುಗಳೂ ಕೇಳಿಬಂದಿವೆ.

ಕೊಲೆ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು, ಸ್ನೇಹಿತರು ರೇಣುಕಾಸ್ವಾಮಿ ನಿವಾಸದತ್ತ ಬೆಳಿಗ್ಗೆಯಿಂದಲೇ ಬರಲಾರಂಭಿಸಿದರು. ‘ಅವನು ಅಂತಹ ಹುಡುಗನಲ್ಲ. ತೀರಾ ಮುಗ್ದ, ಸೌಮ್ಯ ಸ್ವಭಾವದವನು. ಎಂದೂ ಗಲಾಟೆ, ಗದ್ದಲಗಳಲ್ಲಿ ಭಾಗಿಯಾದವನಲ್ಲ. ಅಂತಹ ಹುಡುಗನನ್ನು ದರ್ಶನ್‌ ಏಕೆ ಕೊಲೆ ಮಾಡಿಸಿದರು? ದೈಹಿಕವಾಗಿ ತೀರಾ ಕೃಶನಾಗಿದ್ದ ರೇಣುಕಾಸ್ವಾಮಿ ಒಂದೇ ಏಟಿಗೆ ತೀರಿಕೊಂಡಿದ್ದಾನೆ. ದರ್ಶನ್‌ ಅಣ್ಣನನ್ನು ಭೇಟಿ ಮಾಡಿಸುವ ಆಮಿಷವೊಡ್ಡಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ದು ಕೊಲೆ ಮಾಡಿರಬಹುದು‘ ಎಂದು ಸ್ಥಳೀಯರು ಹೇಳಿದರು. 

ಮಧ್ಯಾಹ್ನದ ವೇಳೆಗೆ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ರೇಣುಕಾಸ್ವಾಮಿ ಸ್ನೇಹಿತರು, ಸಂಬಂಧಿಕರು ಮೌನಕ್ಕೆ ಶರಣಾದರು. ಅವರ ಮೊಬೈಲ್‌ ಫೋನ್‌ಗಳು ಸ್ಥಗಿತಗೊಂಡಿದ್ದವು.

ರೇಣುಕಾಸ್ವಾಮಿ ಆರ್‌ಎಸ್‌ಎಸ್‌, ಬಜರಂಗದಳದಲ್ಲೂ ಸಕ್ರಿಯರಾಗಿದ್ದರು. ಮೂರು ವರ್ಷಗಳ ಹಿಂದೆ ಬಜರಂಗದಳದಲ್ಲಿ ಸುರಕ್ಷಾ ಪ್ರಮುಖ್ ಜವಾಬ್ದಾರಿ ಇತ್ತು. ನಗರದಲ್ಲಿ ನಡೆಯುವ ಹಿಂದೂ ಮಹಾಗಣಪತಿ ಉತ್ಸವ, ಬಡಾವಣೆಯ ಗಣೇಶೋತ್ಸವ, ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಸ್ಥಳೀಯವಾಗಿ ನಡೆದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಎಂಬ ಮಾಹಿತಿ ಇದೆ.

ಸಂಘದ ಅಧ್ಯಕ್ಷನಿಂದ ಅಪಹರಣ?:

ಅಖಿಲ ಕರ್ನಾಟಕ ದರ್ಶನ್‌ ತೂಗುದೀಪ ಸೇನಾದ ಜಿಲ್ಲಾ ಘಟಕದ ಅಧ್ಯಕ್ಷ ರಾಘವೇಂದ್ರ ಕೂಡ ಪ್ರಕರಣದಲ್ಲಿ ಬಂಧಿತನಾಗಿದ್ದು, ಈತ ಹಾಗೂ ಸಹಚರರು ರೇಣುಕಾಸ್ವಾಮಿಯನ್ನು ಅಪಹರಿಸಿ ಕರೆದೊಯ್ದಿರಬಹುದು ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಈ ಕುರಿತು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ಸಾಮಾಜಿಕ ಸಂಪರ್ಕ:

ಕೊಲೆಗೀಡಾಗಿರುವ ರೇಣುಕಾಸ್ವಾಮಿ ಅವರ ಕುಟುಂಬ ಸಾಮಾಜಿಕವಾಗಿ ಜನರೊಂದಿಗೆ ನಿಕಟ ಸಂಪರ್ಕದಲ್ಲಿತ್ತು. ಅವರ ತಂದೆ ಅನೇಕ ಧಾರ್ಮಿಕ ಕಾರ್ಯಕ್ರಮಗಳಿಗೆ ತಮ್ಮ ನಿವಾಸಿದಲ್ಲೇ ಆತಿಥ್ಯ ನೀಡುತ್ತಿದ್ದರು. ನಾಡಿನ ಹಲವಾರು ಮಠಾಧೀಶರು ಇವರ ಮನೆಯಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. ಈ ಸಂದರ್ಭ ಚಿತ್ರದುರ್ಗದ ವಿವಿಧ ಸಮುದಾಯಗಳ ಮುಖಂಡರು, ನೆರೆಹೊರೆಯವರು, ಸಂಬಂಧಿಗಳು ಪಾಲ್ಗೊಳ್ಳುತ್ತಿದ್ದರು ಎಂದೂ ಸಂಬಂಧಿಗಳು ತಿಳಿಸಿದರು.

ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದಾರೆ ಎನ್ನಲಾದ ಅಖಿಲ ಕರ್ನಾಟಕ ದರ್ಶನ್‌ ತೂಗುದೀಪ ಸೇನಾದ  ಚಿತ್ರದುರ್ಗ ಜಿಲ್ಲಾ ಘಟಕದ ಅಧ್ಯಕ್ಷ ರಘು ನಟ ದರ್ಶನ್‌ ಜೊತೆಗಿರುವುದು (ಸಂಗ್ರಹ ಚಿತ್ರ)

ರೇಣುಕಾಸ್ವಾಮಿ
ಜೂನ್‌ 8ರ ಮಧ್ಯಾಹ್ನದಿಂದ ರೇಣುಕಾಸ್ವಾಮಿ ನಾಪತ್ತೆ ಜೂನ್‌ 9ರಂದು ಮನೆಯವರಿಂದ ಹುಡುಕಾಟ ಜೂನ್‌ 10ರಂದು ಕೊಲೆ ಬಗ್ಗೆ ಮಾಹಿತಿ ನೀಡಿದ ಪೊಲೀಸರು ಆರ್‌ಎಸ್‌ಎಸ್‌, ಬಜರಂಗದಳದಲ್ಲಿ ಸಕ್ರಿಯನಾಗಿದ್ದ ರೇಣುಕಾಸ್ವಾಮಿ ಈ ಮುಂಚೆ ಕೆಲ ಮಹಿಳೆಯರಿಗೆ ಸಂದೇಶ ಕಳಿಸಿದ್ದರಿಂದ ಎಚ್ಚರಿಕೆ
ದರ್ಶನ್‌ಗೆ ಆಪ್ತನಾಗಿದ್ದ ರಘು
ರೇಣುಕಾಸ್ವಾಮಿ ಅಪಹರಣ ಮತ್ತು ಕೊಲೆ ಪ್ರಕರಣದ ಆರೋಪ ಹೊತ್ತಿರುವ ಅಖಿಲ ಕರ್ನಾಟಕ ದರ್ಶನ್‌ ತೂಗುದೀಪ ಸೇನಾ ಅಧಕ್ಷ ರಘು ನಟ ದರ್ಶನ್‌ಗೆ ಆಪ್ತನಾಗಿದ್ದರು. ರಘು ಮಗಳ ಜನ್ಮದಿನಕ್ಕೆ ದರ್ಶನ್‌ ಬೆಂಗಳೂರಿಗೆ ಕರೆಸಿಕೊಂಡು ಶುಭಾಶಯ ಕೋರಿದ್ದರು. ಈ ಕುರಿತು ರಘು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಚಿತ್ರಗಳನ್ನು ಹಾಕಿಕೊಂಡಿದ್ದರು. ಈ ಚಿತ್ರಗಳು ಈಗ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪ್ರಕರಣದ ಪ್ರಮುಖ ಪಾತ್ರಧಾರಿ ರಘು ಎನ್ನಲಾಗುತ್ತಿದ್ದು ಈತನ ವಿಚಾರಣೆಯ ನಂತರವೇ ಇಡೀ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.