ADVERTISEMENT

ಅನಾಥ ಕುದುರೆಗೆ ಬೇಕು ಆಶ್ರಯ: ಬೊಮ್ಮನಕಟ್ಟೆ ಕೆರೆ ಬಳಿ ನೆಲೆಸಿರುವ ಅಶ್ವ

6 ತಿಂಗಳಿನಿಂದ ಬೊಮ್ಮನಕಟ್ಟೆ ಕೆರೆ ಬಳಿ ನೆಲೆಸಿರುವ ಅಶ್ವ

ಸಾಂತೇನಹಳ್ಳಿ ಸಂದೇಶ ಗೌಡ
Published 23 ಡಿಸೆಂಬರ್ 2021, 7:38 IST
Last Updated 23 ಡಿಸೆಂಬರ್ 2021, 7:38 IST
ಹೊಳಲ್ಕೆರೆ ತಾಲ್ಲೂಕಿನ ಬೊಮ್ಮನಕಟ್ಟೆ ಕೆರೆ ಸಮೀಪ ಇರುವ ಅನಾಥ ಕುದುರೆ.
ಹೊಳಲ್ಕೆರೆ ತಾಲ್ಲೂಕಿನ ಬೊಮ್ಮನಕಟ್ಟೆ ಕೆರೆ ಸಮೀಪ ಇರುವ ಅನಾಥ ಕುದುರೆ.   

ಹೊಳಲ್ಕೆರೆ: ತಾಲ್ಲೂಕಿನ ಬೊಮ್ಮನಕಟ್ಟೆ ಕೆರೆ ಬಳಿ ಆರು ತಿಂಗಳಿನಿಂದ ಅನಾಥ ಕುದುರೆಯೊಂದು ವಾಸಿಸುತ್ತಿದ್ದು, ಆಶ್ರಯ ಬೇಡುತ್ತಿದೆ.

ಕೆರೆಯ ಪಕ್ಕದಲ್ಲಿರುವ ಹೊಳಲ್ಕೆರೆ–ಹೊಸದುರ್ಗ ರಾಜ್ಯ ಹೆದ್ದಾರಿ ಪಕ್ಕದಲ್ಲೇ ನಿಂತಿರುವ ಈ ಕುದುರೆ ಸ್ಥಳ ಬಿಟ್ಟು ಕದಲುತ್ತಿಲ್ಲ. ಇದೇ ಪ್ರದೇಶದಲ್ಲಿ ಹುಲ್ಲು ಮೇಯುವ ಈ ಅಶ್ವ ಬೊಮ್ಮನಕಟ್ಟೆ ಕೆರೆಯಲ್ಲಿ ನೀರು ಕುಡಿದು ರಸ್ತೆ ಪಕ್ಕದಲ್ಲೇ ಮಲಗುತ್ತದೆ. ಈ ಮಾರ್ಗದಲ್ಲಿ ಪ್ರಯಾಣಿಸುವವರಿಗೆ ದಿನದ 24 ಗಂಟೆಯೂ ದರ್ಶನ ನೀಡುತ್ತದೆ. ಆರೋಗ್ಯವಾಗಿರುವ ಈ ಕುದುರೆ ಬಿಸಿಲು, ಮಳೆ, ಚಳಿ ಎನ್ನದೆ ಬಯಲಲ್ಲೇ ಮಲಗುವ ದೃಶ್ಯ ಮನ ಕಲಕುತ್ತದೆ.

‘ನಾನು ನಿತ್ಯ ಬೆಳಿಗ್ಗೆ ಮತ್ತು ಸಂಜೆ ಇದೇ ಮಾರ್ಗದಲ್ಲಿ ಬೈಕ್‌ನಲ್ಲಿ ಸಂಚರಿಸುತ್ತೇನೆ. ಯಾವಾಗಲೂ ಕುದುರೆ ಇದೇ ಸ್ಥಳದಲ್ಲಿ ಇರುತ್ತದೆ. ಅತ್ಯಂತ ಸಾಧು ಸ್ವಭಾವದ ಈ ಕುದುರೆ ನೋಡಲು ಆಕರ್ಷಕವಾಗಿದೆ. ದಿನವೂ ಬೈಕ್ ನಿಲ್ಲಿಸಿ ಕುದುರೆ ವೀಕ್ಷಿಸಿ ಹೋಗುತ್ತೇನೆ. ಈ ಪ್ರದೇಶದಲ್ಲಿ ಚಿರತೆಗಳು ಹೆಚ್ಚಿದ್ದು, ರಾತ್ರಿ ವೇಳೆ ಕುದುರೆಯ ಮೇಲೆ ದಾಳಿ ನಡೆಸುವ ಸಂಭವ ಇದೆ. ಅಲ್ಲದೇ ಯಾವಾಗಲೂ ಬಿಸಿಲಿನಲ್ಲಿ ನಿಂತಿರುವ ದೃಶ್ಯ ಕಂಡು ಮನಸ್ಸಿಗೆ ಬೇಜಾರಾಗುತ್ತದೆ. ಪಶುಸಂಗೋಪನಾ ಇಲಾಖೆ ಅಥವಾ ಅರಣ್ಯ ಇಲಾಖೆಯವರು ಇದಕ್ಕೊಂದು ಆಶ್ರಯ ಕಲ್ಪಿಸಬೇಕು’ ಎಂದು ಗುಡ್ಡದ ಸಾಂತೇನಹಳ್ಳಿಯ ಶಿಕ್ಷಕ ಎನ್.ಬಸವರಾಜ್ ಮನವಿ ಮಾಡಿದ್ದಾರೆ.

ADVERTISEMENT

‘ಆರೇಳು ತಿಂಗಳ ಹಿಂದೆ ಉತ್ತರ ಕರ್ನಾಟಕದಿಂದ ಕುರಿಗಾಹಿಗಳು ಇಲ್ಲಿಗೆ ಮಂದೆ ಬಿಡಲು ಕುರಿ ಹಿಂಡಿನೊಂದಿಗೆ ಬಂದಿದ್ದರು. ಅವರ ಜತೆಗೆ ಈ ಕುದುರೆಯೂ ಇತ್ತು. ಆಗ ಈ ಕುದುರೆ ಸ್ವಲ್ಪ ಕುಂಟುತ್ತಿತ್ತು. ವಲಸಿಗರಾದ ಕುರಿಗಾಹಿಗಳು ಕುಂಟುವ ಕುದುರೆ ಹೆಚ್ಚು ದೂರ ನಡೆಯಲಾಗುವುದಿಲ್ಲ ಎಂದು ಇಲ್ಲಿಯೇ ಬಿಟ್ಟು ಹೋಗಿದ್ದಾರೆ. ಕೆಲ ತಿಂಗಳುಗಳ ನಂತರ ಕುದುರೆಯ ಕಾಲು ಸರಿಹೋಗಿದ್ದು, ಆರೋಗ್ಯವಾಗಿದೆ. ಕುದುರೆಗೆ ಇದು ಹೊಸ ಜಾಗವಾದ್ದರಿಂದ ಎಲ್ಲಿಗೂ ಹೋಗದೆ ಇಲ್ಲಿಯೇ ನೆಲೆಸಿದೆ’ ಎನ್ನುತ್ತಾರೆ ಬೊಮ್ಮನಕಟ್ಟೆ ಗ್ರಾಮದ ಕರಿಯಾ ನಾಯ್ಕ್.

ಈ ಮಾರ್ಗದಲ್ಲಿ ಪ್ರಯಾಣಿಸುವವರು ವಾಹನ ನಿಲ್ಲಿಸಿ ಕುದುರೆಯೊಂದಿಗೆ ಸೆಲ್ಫಿ ತೆಗೆದುಕೊಂಡು ಹೋಗುತ್ತಾರೆ. ಸಾಧು ಪ್ರಾಣಿಗೆ ಆಶ್ರಯ ಸಿಗಲಿ ಎಂದು ಕುದುರೆಪ್ರಿಯರು ಆಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.