ADVERTISEMENT

ಚಿತ್ರದುರ್ಗ | ಹೆಚ್ಚಾಗುತ್ತಿದೆ ಆಂಟಿ ಬಯಾಟಿಕ್‌ ದುರ್ಬಳಕೆ: ಆತಂಕ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2024, 15:52 IST
Last Updated 25 ನವೆಂಬರ್ 2024, 15:52 IST
ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಆಂಟಿ ಮೈಕ್ರೊಬಿಯಲ್‌ ಜಾಗೃತಿ ಸಪ್ತಾಹವನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್‌.ಪಿ.ರವೀಂದ್ರ ಉದ್ಘಾಟಿಸಿದರು
ಚಿತ್ರದುರ್ಗದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಆಂಟಿ ಮೈಕ್ರೊಬಿಯಲ್‌ ಜಾಗೃತಿ ಸಪ್ತಾಹವನ್ನು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್‌.ಪಿ.ರವೀಂದ್ರ ಉದ್ಘಾಟಿಸಿದರು   

ಚಿತ್ರದುರ್ಗ: ಆಂಟಿ ಬಯಾಟಿಕ್‌ ಬಳಸುವಾಗ ಎಚ್ಚರವಿರಬೇಕು. ಇಲ್ಲವಾದರೆ, ಭವಿಷ್ಯದಲ್ಲಿ ಸಣ್ಣ ಕಾಯಿಲೆಗಳಿಗೂ ಚಿಕಿತ್ಸೆ ನೀಡಲು, ಗುಣಪಡಿಸಲು ವೈದ್ಯರಿಗೆ ದೊಡ್ಡ ಸವಾಲಾಗಬಹುದು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್‌.ಪಿ.ರವೀಂದ್ರ ಎಚ್ಚರಿಸಿದರು.

ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಆಂಟಿ ಮೈಕ್ರೊಬಿಯಲ್‌ ಜಾಗೃತಿ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು.

‘ರೋಗಿಗಳು ಆಸ್ಪತ್ರೆಗೆ ಬಂದ ತಕ್ಷಣ ಕಾಯಿಲೆ ವಾಸಿಯಾಗಬೇಕು ಎಂಬ ಮನಸ್ಥಿತಿ ಬಿಡಬೇಕು’ ಎಂದರು.

ADVERTISEMENT

‘ಆಂಟಿ ಬಯಾಟಿಕ್‌ ಬಳಕೆಗಿಂತ ದುರ್ಬಳಕೆ ಹೆಚ್ಚಾಗುತ್ತಿದೆ. ಔಷಧಗಳ ಅತಿಯಾದ ಬಳಕೆ ಹಾಗೂ ವೈದ್ಯರ ಸಲಹೆ ಇಲ್ಲದೆ ರೋಗಿಗಳು ತೆಗೆದುಕೊಳ್ಳುತ್ತಿರುವ ಪರಿಣಾಮ ಮನುಷ್ಯನ ಪ್ರಾಣಕ್ಕೆ ಕುತ್ತು ಬಂದಿದೆ. ಇದರ ಬಗ್ಗೆ ಜನರಿಗೆ ಅರಿವು ಮೂಡಿಸುವ ಉದ್ದೇಶದಿಂದ ಸಪ್ತಾಹ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

‘ಆಂಟಿ ಮೈಕ್ರೊಬಿಯಲ್ ಪ್ರತಿರೋಧ ತಡೆಗಟ್ಟುವುದು ಎಲ್ಲರ ಜವಾಬ್ದಾರಿಯಾಗಿದೆ. ವೈದ್ಯರ ಔಷಧ ಚೀಟಿ ಇಲ್ಲದೆ ಆಂಟಿ ಬಯೋಟಿಕ್ ಖರೀದಿಸಬಾರದು. ವೈದ್ಯರು ನೀಡಿದ ಮದ್ದು ಪೂರ್ಣ ತೆಗೆದುಕೊಳ್ಳಬೇಕು’ ಎಂದರು.

‘ದೇಹಕ್ಕೆ ಯಾವ ರೀತಿಯ ಔಷಧ ನೀಡಿದರೆ ಸೂಕ್ತ ಎಂಬುದರ ಬಗ್ಗೆ ವೈದ್ಯರು ಹೆಚ್ಚಿನ ಕಾಳಜಿ ವಹಿಸಬೇಕು. ನ. 27ರಂದು ಗಾಂಧಿವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಜಾಗೃತಿ ಜಾಥಾ ನಡೆಸಲಾಗುತ್ತದೆ’ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವ ಕುಮಾರ ಸ್ವಾಮೀಜಿ ತಿಳಿಸಿದರು.

ಡೀನ್‌ ಡಾ.ಜಿ.ಪ್ರಶಾಂತ್‌, ವೈದ್ಯಕೀಯ ಅಧೀಕ್ಷಕರಾದ ಡಾ.ರಾಜೇಶ್‌, ಡಾ.ನಾಗೇಂದ್ರಗೌಡ, ಡಾ.ಸುಧೀಂದ್ರ ಡಾ.ಶೋಭಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.