ಚಿತ್ರದುರ್ಗ: ತಾಲ್ಲೂಕಿನ ಸಿದ್ದಾಪುರ ಗ್ರಾಮದ ಗೋದಾಮಿನಲ್ಲಿ ಅಡಿಕೆ ವ್ಯಾಪಾರಿಯೊಬ್ಬರು ಬುಧವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಉದ್ಯಮಿ ಉದಯ್ ಶೆಟ್ಟಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಅಡಿಕೆ ವ್ಯಾಪಾರಿ ಶೈಲೇಶ್‌ಕುಮಾರ್ (42) ಆತ್ಮಹತ್ಯೆ ಮಾಡಿಕೊಂಡವರು. ಸ್ಥಳದಲ್ಲಿ ಡೈರಿ ಪತ್ತೆಯಾಗಿದ್ದು ಆತ್ಮಹತ್ಯೆಗೆ ನಗರದ ಕೆಳಗೋಟೆ ಕೈಗಾರಿಕಾ ಪ್ರದೇಶದಲ್ಲಿರುವ ಎಸ್‌ಕೆಎಸ್‌ಟಿ ಟ್ರೇಡರ್ಸ್ ಮಾಲೀಕ ಉದಯ್ ಶೆಟ್ಟಿಯೇ ಕಾರಣ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮೃತನ ಸಹೋದರ ಸಂತೋಷ್ ಕುಮಾರ್ ದೂರು ನೀಡಿದ್ದು ಉದ್ಯಮಿ ವಿರುದ್ಧ ಪ್ರಕರಣ ದಾಖಲಾಗಿದೆ.
ಶೈಲೇಶ್ ಕುಮಾರ್ ಹಾಗೂ ಉದಯ್ ಶೆಟ್ಟಿ ನಡುವೆ ಹಲವು ವರ್ಷಗಳಿಂದ ಹಣಕಾಸಿನ ವ್ಯವಹಾರ ಇತ್ತು. ರೈತರಿಂದ ಚಿಲ್ಲರೆಯಾಗಿ ಅಡಿಕೆ ಖರೀದಿಸಿ ಶೈಲೇಶ್ ಕುಮಾರ್ ಎಸ್‌ಕೆಎಸ್‌ಟಿ ಟ್ರೇಡರ್ಸ್‌ಗೆ ಸರಬರಾಜು ಮಾಡುತ್ತಿದ್ದರು. 2 ತಿಂಗಳ ಹಿಂದೆ ಸರಬರಾಜು ಮಾಡಿದ್ದ ಅಡಿಕೆಗೆ ಉದಯ್ ಶೆಟ್ಟಿ ₹ 6.60 ಕೋಟಿ ಹಣ ಕೊಡಬೇಕಾಗಿತ್ತು. ಹಲವು ಬಾರಿ ಹಣ ಕೇಳಿದರೂ ಉದಯ್ ಶೆಟ್ಟಿ ಹಣ ನೀಡದೇ ಸತಾಯಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬುಧವಾರ ಬೆಳಿಗ್ಗೆ ಕೂಡ ಮೃತ ವ್ಯಕ್ತಿ ಹಣ ಕೇಳಲು ಉದಯ್‌ಶೆಟ್ಟಿ ಬಳಿಗೆ ತೆರಳಿದ್ದರು. ಆದರೆ ಹಣ ನೀಡದೇ ಆತ ಬೈದು ಕಳುಹಿಸಿದ್ದರು. ಇದರಿಂದ ಮನನೊಂದ ಶೈಲೇಶ್ ಶೆಟ್ಟಿ ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿರುವ ಗೋದಾಮಿನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಕ್ಷಮೆ ಕೇಳಿದ ಶೈಲೇಶ್: ಶೈಲೇಶ್ ಕುಮಾರ್ ವಿವಾಹಿತನಾಗಿದ್ದು 6 ವರ್ಷದ ಗಂಡುಮಗುವಿದೆ. 5 ಪುಟಗಳಲ್ಲಿ ಪತ್ರ ಬರೆದಿದ್ದು ಪತ್ನಿ, ಮಗು ಹಾಗೂ ತಂದೆಯನ್ನು ಕ್ಷಮೆ ಕೋರಿದ್ದಾರೆ. ಅತೀವ ಒತ್ತಡವನ್ನು ಸಹಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬರೆದಿದ್ದಾರೆ.
‘ಉದಯ್ ಶೆಟ್ಟಿ ತಲೆಮರೆಸಿಕೊಂಡಿದ್ದು ಹುಡುಕಾಟ ನಡೆಸಲಾಗುತ್ತಿದೆ. ಇಬ್ಬರ ನಡುವೆ ಹಣಕಾಸಿನ ವಹಿವಾಟು ಇತ್ತು ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಹಲವು ದಿಕ್ಕುಗಳಿಂದ ತನಿಖೆ ನಡೆಸಲಾಗುತ್ತಿದೆ’ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.