ಭರಮಸಾಗರ: ಅಡಿಕೆ ಕೊಯ್ಲು ಮಾಡುವ ದೋಟಿ ತಯಾರಿಕೆಗೆ ಅಗತ್ಯವಾದ ಬಿದಿರಿನ ಗಳಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದೆ.
ಸಾಮಾನ್ಯವಾಗಿ ಸಾಂಪ್ರದಾಯಿಕ ಬಿದಿರಿನ ಗಳಗಳಿಂದ ದೋಟಿ ಮಾಡಿಕೊಂಡು ಅಡಿಕೆಯನ್ನು ಕಟಾವು ಮಾಡಲಾಗುತ್ತದೆ. ಈ ವೃತ್ತಿಯನ್ನೇ ಮಾಡುತ್ತಿರುವ ಅನುಭವಿ ಕೂಲಿ ಕಾರ್ಮಿಕರು ಭರಮಸಾಗರ ಒಂದರಲ್ಲಿಯೇ ಸುಮಾರು 50ಕ್ಕೂ ಹೆಚ್ಚು ಮಂದಿ ಇದ್ದಾರೆ.
ಬಿದಿರಿನ ದೋಟಿಯೊಂದಿಗೆ ಅಡಿಕೆ ಮರ ಹತ್ತಿ ಗೊನೆ ಕಟಾವು ಮಾಡುವ ಇವರು ದಿನವೊಂದಕ್ಕೆ ₹ 1,000ದಿಂದ ₹ 1,500ರವರೆಗೆ ಸಂಭಾವನೆ ಪಡೆಯುತ್ತಾರೆ. ಇವರು ಉಪಯೋಗಿಸುವ ಬಿದಿರಿನ ದೋಟಿ 20ರಿಂದ 40 ಅಡಿಗಳಷ್ಟು ಉದ್ದ ಇರುತ್ತದೆ. ಇದರ ತುದಿಗೆ ಹರಿತವಾದ ಕುಡುಗೋಲು ಕಟ್ಟಿರುತ್ತಾರೆ ಇದರಿಂದ ಕೋಯ್ಲಿನ ಕೆಲಸ ಸುಗಮವಾಗಿ ಸಾಗುತ್ತದೆ. ಕೊಯ್ಲಿನ ನಂತರ ಈ ಗಳಗಳನ್ನು ಮಳೆ–ಗಾಳಿಯಿಂದ ರಕ್ಷಿಸುತ್ತಾರೆ.
ಕಳೆದ ವರ್ಷಗಳಲ್ಲಿ ಆಕಾಶಕ್ಕೆ ಚಾಚಿದಂತಿರುವ ಈ ಬಿದಿರಿನ ಗಳವನ್ನು ದೂರದ ಸ್ಥಳಗಳಿಂದ ಹುಡುಕಿ ಸಾಗಿಸುವುದು ಕಷ್ಟವಾಗಿತ್ತು. ಈಗ ಬಿದಿರು ಬೆಳೆಗಾರರಿಂದ ನೇರವಾಗಿ ಖರೀದಿಸಿ ಲೋಡ್‌ಗಟ್ಟಲೆ ತಂದು ಮಾರಾಟ ಮಾಡುತ್ತಿದ್ದಾರೆ. ಇದು ಅಡಿಕೆ ಕೊಯ್ಲು ಮಾಡುವವರಿಗೆ ವರದಾನವಾಗಿದೆ. ಬಿದಿರಿನ ಗಳಗಳು ವಿವಿಧ ಅಳತೆಗಳಲ್ಲಿ ದೊರೆಯುತ್ತಿವೆ. ಇವುಗಳಿಗೆ ದರ ನಿಗದಿಪಡಿಸಿದ್ದರೂ ಚೌಕಾಸಿ ಮಾಡಿ ಖರೀದಿಸುವ ಜನರೇ ಹೆಚ್ಚಾಗಿದ್ದಾರೆ.
ಭೀಮಾ ಮತ್ತು ಶಮಾ ಎಂಬ ತಳಿಯ 20ರಿಂದ 42 ಅಡಿ ಎತ್ತರದ ಗಟ್ಟಿಮುಟ್ಟಾದ ಬಿದಿರಿನ ಗಳಗಳನ್ನು ಕಡೂರು, ಕೊಡಗು ಹಾಗೂ ಹೆಚ್ಚು ಬಿದಿರು ಬೆಳೆಯುವ ಸ್ಥಳಗಳಿಂದ ತರಲಾಗಿದೆ. ಭೀಮಸಮುದ್ರ ಮತ್ತು ಭರಮಸಾಗರ ಭಾಗದಲ್ಲಿಯ ಕೃಷಿಕರು, ಗುತ್ತಿಗೆದಾರರು, ಕೊಯ್ಲು ಮಾಡುವ ಕಾರ್ಮಿಕರು ತೋಟದ ಗಿಡಗಳ ಎತ್ತರಕ್ಕೆ ಸರಿಯಾಗಿ ಹಾಗೂ ಕೊಯ್ಲು ಮಾಡುವವರ ಕೈ ಹಿಡಿತಕ್ಕೆ ತಕ್ಕಂತೆ ಪರೀಕ್ಷಿಸಿ ಖರೀದಿಸುತ್ತಿದ್ದಾರೆ.
‘20 ಅಡಿ ಎತ್ತರದ ಒಂದು ಜೋಡಿ ಬಿದಿರಿನ ಗಳಗಳ ಬೆಲೆ ₹ 600ರಿಂದ ₹ 800 ಇದ್ದರೆ 42 ಅಡಿ ಎತ್ತರದ ಒಂದು ಗಳಕ್ಕೆ ₹ 1,400 ಇದೆ. ಇದರಿಂದ ಹೆಚ್ಚಿನ ಲಾಭ ನಿರೀಕ್ಷಿಸುವಂತಿಲ್ಲ. ಆದರೂ ಬೇಡಿಕೆಗನುಗುಣವಾಗಿ ತರುತ್ತಿದ್ದೇವೆ. ಎರಡು ವಾರಗಳಲ್ಲಿಯೇ 2 ಲೋಡ್ ಬಿದಿರಿನ ಗಳಗಳು ಖರ್ಚಾಗಿವೆ. ಒಬ್ಬೊಬ್ಬರು 2ರಿಂದ 4 ಜೊತೆ ಖರೀದಿಸುತ್ತಿದ್ದಾರೆ’ ಎನ್ನುತ್ತಾರೆ ಕಡೂರಿನ ವ್ಯಾಪಾರಿ ಗಿರೀಶ್.
ಅಡಿಕೆ ವ್ಯಾಪಾರ ಎಂದ ತಕ್ಷಣ ಮೊದಲ ಕೆಲಸ ಅಡಿಕೆ ಕೊಯ್ಲು. ಇದು ಸುಗಮವಾಗಿ ಆದರೆ ಮಿಕ್ಕೆಲ್ಲ ಕೆಲಸಗಳು ಸುಲಭ. ಇದರ ಕೊಯ್ಲಿನ ಸಾಧನ ಸಿದ್ಧಪಡಿಸುವಲ್ಲಿ ಸಾಕಷ್ಟು ಪರಿವರ್ತನೆಗಳಾಗಿವೆ. ಅದರಲ್ಲಿ ಸಾಂಪ್ರದಾಯಿಕ ಬಿದಿರಿನ ಗಳ ಒಂದಾದರೆ ನಂತರ ಸುಧಾರಿತ ಅಲ್ಯುಮಿನಿಯಂನಿಂದ ತಯಾರಿಸಿದ ದೋಟಿ (ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಪ್ರಚಲಿತವಿದೆ) ಅಡಿಕೆ ಮರ ಹತ್ತುವ ಯಂತ್ರ ಮುಂತಾಗಿ ಇವೆಲ್ಲವೂ ಇಲ್ಲಿ ಪರಿಣಾಮಕಾರಿಯಾಗಿಲ್ಲ. ಕೇವಲ ಸಾಂಪ್ರದಾಯಿಕ ಬಿದುರಿನ ದೋಟಿಯನ್ನು
ಆಶ್ರಯಿಸಲಾಗಿದೆ.
ಪ್ರತಿ ವರ್ಷ ಹೊಸದು ಖರೀದಿಸಬೇಕಾಗುತ್ತದೆ
ನಾನು ಹಿಂದಿನಿಂದಲೂ ಅಡಿಕೆ ಕೊಯ್ಲು ಕೆಲಸ ಮಾಡುತ್ತಿರುವೆ. ವರ್ಷದಲ್ಲಿ 5 ತಿಂಗಳು ಪೂರ್ತಿ ಬಿದಿರಿನ ಗಳಗಳೊಂದಿಗೆ ನಮ್ಮ ಜೀವನ ಸಾಗುತ್ತದೆ. ಮುಂದಿನ ವರ್ಷ ಬರುವುದರೊಳಗೆ ಅವು ಬೆಂಡಾಗಿರುತ್ತವೆ. ಇಲ್ಲವೇ ಬಿರುಕು ಬಿಟ್ಟು ಹಿಡಿಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಹೊಸ ಗಳವನ್ನು ಖರೀದಿಸಬೇಕಾಗುತ್ತದೆ.
– ಶೇಖರಪ್ಪ, ಅಡಿಕೆ ಕೊಯ್ಲು ಮಾಡುವ ಕಾರ್ಮಿಕ
ನನ್ನ ತಂದೆಯವರ ಕಾಲದಿಂದಲೂ ಅಡಿಕೆ ವ್ಯಾಪಾರ ನಮ್ಮ ವೃತ್ತಿ. ಗುತ್ತಿಗೆ ಮಾಡಿಕೊಂಡು ಕೊಯ್ಲು ಮಾಡುವವರಿಗೆ ಹೊಸ ಬಿದಿರಿನ ಗಳವನ್ನು ಖರೀದಿಸುತ್ತಿದ್ದೇವೆ.
- ರಾಜು, ಅಡಿಕೆ ಗುತ್ತಿಗೆದಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.