ಚಿತ್ರದುರ್ಗ: ನಗರದ ಕಬೀರಾನಂದಾಶ್ರಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಶಿವನಾಮ ಸಪ್ತಾಹದ ಅಂಗವಾಗಿ ಮಹಾ ಶಿವರಾತ್ರಿ ಮಹೋತ್ಸವ ಭಕ್ತಿ, ಭಾವಪೂರ್ಣವಾಗಿ ನಡೆಯಲಿದೆ. 93ನೇ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠವನ್ನು ಸಿಂಗಾರಗೊಳಿಸಲಾಗುತ್ತಿದ್ದು ಅಂತಿಮ ಹಂತದ ಸಿದ್ಧತೆಗಳು ಭರದಿಂದ ಸಾಗಿವೆ.
ಕೋಟೆನಾಡಲ್ಲಿ ಮಾನವ ಕಲ್ಯಾಣಕ್ಕಾಗಿ ಸ್ಥಾಪಿತವಾದ ಅದ್ವೈತ ಜಾತ್ಯತೀತ ಸಂಪ್ರದಾಯದ ಮಠವೇ ಸದ್ಗುರು ಕಬೀರಾನಂದಾಶ್ರಮ. ಪರಂಪರೆಯಂತೆ ಪ್ರತಿ ವರ್ಷ ಶಿವನಾಮ ಸಪ್ತಾಹವನ್ನು ಮಹಾ ಶಿವರಾತ್ರಿ ಸಮಯದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ ಎಂದು ಮಹೋತ್ಸವದ ಅಧ್ಯಕ್ಷ ಜಿ.ಎಸ್. ಅನಿತ್ ಕುಮಾರ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಮಠದ ಆವರಣದಲ್ಲಿ ಫೆ.14ರಿಂದ 19ರವರೆಗೆ ಮಹೋತ್ಸವ ನಡೆಯಲಿದೆ. ನಿತ್ಯ ಸಂಜೆ 6.30ಕ್ಕೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗಲಿದೆ. 14ರಂದು ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಗುರು ಸದನ ಹಾಗೂ ಬೀದರ್ ಚಿದಂಬರ ಆಶ್ರಮದ ಶಿವಕುಮಾರ ಸ್ವಾಮೀಜಿ ಸಭಾ ಮಂಟಪ ಉದ್ಘಾಟಿಸಲಿದ್ದಾರೆ. ಕೆ.ಆರ್. ನಗರದ ಕನಕಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ಕುಂಬಳಗೋಡು ಮಠದ ಪ್ರಕಾಶನಾಥ ಸ್ವಾಮೀಜಿ, ಶಿರೋಳ್‌ನ ಶಂಕರರೂಢ ಸ್ವಾಮೀಜಿ, ಬೀದರ್‌ನ ಗಣಪತಿ ಮಹಾರಾಜ್ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ’ ಎಂದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಕೆ.ಎಸ್. ನವೀನ್, ವಾಗ್ಮಿ ಹಾರಿಕಾ ಮಂಜುನಾಥ್, ಬಿಜೆಪಿ ಯುವ ಮುಖಂಡ ಜಿ.ಎಚ್. ಸಿದ್ಧಾರ್ಥ ಗುಂಡಾರ್ಪಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ.ಮುರುಳಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
15ರಂದು ಗೋಸಾಯಿ ಮಠದ ಮಂಜುನಾಥ ಭಾರತೀ ಸ್ವಾಮೀಜಿ, ಆದಿಚುಂಚನಗಿರಿ ಮಠದ ಶಂಭುನಾಥ ಸ್ವಾಮೀಜಿ, ಬಾದಾಮಿಯ ಕೈಲಾಸನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಯುವ ವಾಗ್ಮಿ ಚೈತ್ರಾ ಕುಂದಾಪುರ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಟಿ. ಬದರೀನಾಥ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
16ರಂದು ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಸದ್ಗುರು ನರಹರಿ ಪೀಠದ ರಾಜಾರಾಮ ಸ್ವಾಮೀಜಿ, ಸೊಲ್ಲಾಪುರದ ರಾಮಚಂದ್ರಣ್ಣ ಮೇತ್ರೆ, ಗುರುನಾಥ ಮಹಾರಾಜ್, ಮಾಧವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಸಂಸದ ಜನಾರ್ಧನ ಸ್ವಾಮಿ, ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಪ್ರಾಂತ್ಯ ಸಹ ಸಂಪರ್ಕ ಪ್ರಮುಖ್ ಯಾದವ ಕೃಷ್ಣ ಅತಿಥಿಗಳಾಗಿ ಭಾಗವಹಿಸುವರು ಎಂದು ಹೇಳಿದರು.
17ರಂದು ಹರಿಹರದ ವಚನಾನಂದ ಸ್ವಾಮೀಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ, ಬಸವ ಮರುಳಸಿದ್ದ ಸ್ವಾಮೀಜಿ, ಶಂಕರಾನಂದ ಸ್ವಾಮೀಜಿ, ಯೋಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಸಂಸದ ಜಿ.ಎಂ. ಸಿದ್ದೇಶ್ವರ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಸಾರಿಗೆ ಸಚಿವ ಶ್ರೀರಾಮುಲು, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಲಿದ್ದಾರೆ ಎಂದರು.
18ರಂದು ಸಂಜೆ 7 ಗಂಟೆಗೆ ನಡೆಯುವ ಕಾರ್ಯಕ್ರಮದ ಸಾನ್ನಿಧ್ಯವನ್ನು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಶಿವಪ್ರಕಾಶಾನಂದ ಸ್ವಾಮೀಜಿ, ಶಿವರಾಮ ಕೃಷ್ಣಾನಂದ ಭಾರತಿ ಸ್ವಾಮೀಜಿ, ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ, ಜ್ಯೋತಿರ್ಲಿಂಗಾನಂದ ಸ್ವಾಮೀಜಿ ವಹಿಸಲಿದ್ದಾರೆ. ಶಾಸಕರಾದ ಎಂ. ಚಂದ್ರಪ್ಪ, ರಘುಮೂರ್ತಿ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ’ ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
19ರಂದು ಸಪ್ತಾಹ ಸಮ್ತಾಪಿಗೊಳ್ಳಲಿದೆ. ಸಂಜೆ 5 ಗಂಟೆಗೆ ಸನ್ಯಾಸಿ ವಿಧಿಯಂತೆ ಕೌದಿ ಪೂಜೆ ಕಾರ್ಯಕ್ರಮ ನಡೆಯಲಿದೆ ಎಂದರು.
ಕಬೀರಾನಂದ ಮಠದ ಶಿವಲಿಂಗಾನಂದ ಸ್ವಾಮೀಜಿ, ಬಿಜೆಪಿ ಬಳ್ಳಾರಿ ವಿಭಾಗ ಪ್ರಭಾರ ಸಿದ್ದೇಶ್ ಯಾದವ್, ಕಾರ್ಯದರ್ಶಿ ಪ್ರಶಾಂತ್, ವಿಎಚ್‌ಪಿ ದಕ್ಷಿಣ ಪ್ರಾಂತ ಧರ್ಮಚಾರ್ಯ ಸಂಪರ್ಕ ಪ್ರಮುಖ್ ಎನ್. ಓಂಕಾರ್ ಇದ್ದರು.
ನಿತ್ಯ ಸಾಂಸ್ಕೃತಿಕ ಸಿಂಚನ
ಮಹೋತ್ಸವದ ಅಂಗವಾಗಿ ನಿತ್ಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಲಾಸಿಕ ಫೌಂಡೇಶನ್‌ನ ಶ್ವೇತಾಭಟ್ ತಂಡದಿಂದ ಭರತನಾಟ್ಯ, ಸಾಯಿಕೀರ್ತಿ ನಾಥ್‌ಜೀ ಅವರಿಂದ ಭಕ್ತಿ ಸಂಗೀತ, ಸರಿಗಮಪ ಖ್ಯಾತಿಯ ಜಿ. ಮೆಹಬೂಬ, ದೀಕ್ಷಾ ತಂಡದಿಂದ ಸಂಗೀತ ಸಂಜೆ, ಕಾಮಿಡಿ ಕಿಲಾಡಿ ತಂಡದಿಂದ ಹಾಸ್ಯ ಸಂಜೆ, ಅಂಜನಾ ನೃತ್ಯ ಕಲಾ ಕೇಂದ್ರದ ನಂದಿನಿ ಶಿವಪ್ರಕಾಶ್ ತಂಡದಿಂದ ನೃತ್ಯ ವೈವಿಧ್ಯ, ಕೋಮಲ ಗಾಂಧಾರಿ ನಾಟಕ ಪ್ರದರ್ಶನ ನಡೆಯಲಿದೆ.
ಜನಪದ ಉತ್ಸವ
ಫೆ.18 ರಂದು ಮಧ್ಯಾಹ್ನ 2 ಗಂಟೆಗೆ ನಗರದ ರಾಜ ಬೀದಿಗಳಲ್ಲಿ ಶಿವಲಿಂಗಾನಂದ ಸ್ವಾಮೀಜಿ ಅವರ ‘ಪಲ್ಲಕ್ಕಿ ಉತ್ಸವ ಹಾಗೂ ಜನಪದ ಉತ್ಸವ’ ನಡೆಯಲಿದೆ. ಉತ್ಸವವನ್ನು ಬಿಜೆಪಿ ಯುವ ಮುಖಂಡ ಜಿ.ಎಸ್. ಅನಿತ್ ಕುಮಾರ್ ಉದ್ಘಾಟಿಸಲಿದ್ದಾರೆ.
ಕೀಲುಕುದುರೆ, ತಮಟೆ, ಜಾಂಚ್ ನೃತ್ಯ, ಕಿನ್ನರಿಜೋಗಿ, ಲಂಬಾಣಿ ನೃತ್ಯ, ಖಾಸಬೇಡರಪಡೆ, ಡೊಳ್ಳು ಕುಣಿತ ಸೇರಿ ಇನ್ನಿತರ ಕಲಾ ತಂಡಗಳು ಭಾಗವಹಿಸಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.