ADVERTISEMENT

ಮೊಳಕಾಲ್ಮುರು: ಅಂತರರಾಜ್ಯ ವಾಹನ ಕಳ್ಳರ ಬಂಧನ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 13:06 IST
Last Updated 23 ಸೆಪ್ಟೆಂಬರ್ 2024, 13:06 IST
ಮೊಳಕಾಲ್ಮುರು ಪೊಲೀಸರು ವಶಕ್ಕೆ ಪಡೆದಿರುವ ಕಳವು ಮಾಡಿದ್ದ ವಾಹನಗಳು
ಮೊಳಕಾಲ್ಮುರು ಪೊಲೀಸರು ವಶಕ್ಕೆ ಪಡೆದಿರುವ ಕಳವು ಮಾಡಿದ್ದ ವಾಹನಗಳು   

ಮೊಳಕಾಲ್ಮುರು: ಸ್ಥಳೀಯ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಅಂತರರಾಜ್ಯ ವಾಹನ ಕಳ್ಳರನ್ನು ಬಂಧಿಸಿರುವ ಘಟನೆ ಭಾನುವಾರ ನಡೆದಿದೆ. 

ಪಟ್ಟಣದ ಕೋನಸಾಗರ ರಸ್ತೆಯೊಂದರ ಖಾಲಿ ನಿವೇಶನದಲ್ಲಿ ನಿಲ್ಲಿಸಿದ್ದ ₹ 12 ಲಕ್ಷ ಬೆಲೆಬಾಳುವ ಟಿಪ್ಪರ್‌ವೊಂದನ್ನು ಸೆ.12 ರಂದು ಕಳವು ಮಾಡಲಾಗಿತ್ತು. ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿ, ಟಿಪ್ಪರ್‌ ವಶಪಡಿಸಿಕೊಂಡಿದ್ದಾರೆ. 

ಬಂಧಿತರನ್ನು ನೆರೆಯ ಅನಂತಪುರ ಜಿಲ್ಲೆಯ ಉರುವಕೊಂಡದ ಸಹೋದರರಾದ ವಿ.ಮಹೇಶ್‌ ಮತ್ತು ವಿ.ಪ್ರಭಾಕರ್‌ ಎಂದು ಗುರುತಿಸಲಾಗಿದೆ.

ADVERTISEMENT

ಬಂಧಿತರಿಂದ ಬಳ್ಳಾರಿ ಜಿಲ್ಲೆ ತೋರಣಗಲ್ಲು ಮತ್ತು ಕೊಪ್ಪಳದಲ್ಲಿ ಕಳವು ಮಾಡಿದ್ದ ಎರಡು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಬಂಧಿತರು ದಾವಣಗೆರೆ, ಹಾವೇರಿ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಮತ್ತು ನೆರೆಯ ಅಂಧ್ರಪ್ರದೇಶ ವ್ಯಾಪ್ತಿಯಲ್ಲಿ ಹತ್ತಾರು ಲಾರಿ, ಬೈಕ್‌, ಕಾರುಗಳನ್ನು ಕಳವು ಮಾಡಿರುವ ಘಟನೆಯಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಬಳ್ಳಾರಿಯ ಕೌಲ್‌ಬಜಾರ್‌ ಠಾಣೆಯ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಈ ಇಬ್ಬರು ಜೈಲು ಸೇರಿದ್ದರು. ಈಚೆಗೆ ಬಿಡುಗಡೆಯಾಗಿದ್ದು, ಮತ್ತೆ ಕಳ್ಳತನ ಆರಂಭಿಸಿದ್ದಾರೆ ಎಂದು ಭಾನುವಾರ ಡಿವೈಎಸ್‌ಪಿ ರಾಜಣ್ಣ ಮಾಹಿತಿ ನೀಡಿದರು. 

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಂಜಿತ್‌ ಕುಮಾರ್‌ ಬಂಗಾರು ಮತ್ತು ಹೆಚ್ಚುವರಿ ಎಸ್‌ಪಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಸಿಪಿಐ ವಸಂತ್‌ ವಿ. ಆಸೋದೆ, ಪಿಎಸ್‌ಐಗಳಾದ ಜಿ.ಪಾಂಡುರಂಗಪ್ಪ ಮತ್ತು ಈರೇಶ್‌ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಸಿಬ್ಬಂದಿ ರಮೇಶ, ವೀರಣ್ಣ, ಸುಧೀರ್‌, ಹರೀಶ್‌, ಮಂಜುನಾಥ್‌, ನಂದಪ್ಪ, ಶಶಿಕುಮಾರ್‌ ಇದ್ದರು. 

ಎಸ್‌ಪಿ ಶ್ಲಾಘಿಸಿ ಬಹುಮಾನ ಘೋಷಿಸಿದ್ದಾರೆ ಎಂದು ಡಿವೈಎಸ್‌ಪಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.