ನಾಯಕನಹಟ್ಟಿ: ಕಲಿತ ಶಾಲಾ ಕಟ್ಟಡದ ದುಸ್ಥಿತಿ ಕಂಡ ಹಳೇ ವಿದ್ಯಾರ್ಥಿಗಳು ಸಂಘಟಿತರಾದರು. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಪಡೆದು ವಿವಿಧೆಡೆ ವಿವಿಧ ಹುದ್ದೆಗಳಲ್ಲಿರುವ ಎಲ್ಲರೂ ತಮ್ಮ ಕೈಲಾದ ಸಹಾಯ ಮಾಡಿದರು. ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಶಾಲೆಗೆ ಆಡಳಿತ ಮಂಡಳಿ ಪದಾಧಿಕಾರಿಗಳು, ಹಳೇ ವಿದ್ಯಾರ್ಥಿಗಳು ಹೊಸ ರೂಪ ನೀಡಿದರು.
ಹೋಬಳಿಯ ಮುಷ್ಠಲಗುಮ್ಮಿ ಗ್ರಾಮದ ವೀರಭದ್ರೇಶ್ವರ ಶಾಲೆಯ ಯಶೋಗಾಥೆ ಇದು. ಅರವತ್ತರ ದಶಕದಲ್ಲಿ ಶಿಕ್ಷಣ ಗಗನ ಕುಸಮವಾಗಿದ್ದ ಹೊತ್ತಿನಲ್ಲಿ ವಿಜಯನಗರ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಯ ಗಡಿಭಾಗದ ಮಕ್ಕಳಿಗೆ ಮುಷ್ಠಲಗುಮ್ಮಿ ಗ್ರಾಮದ ವೀರಭದ್ರೇಶ್ವರ ಶಾಲೆ ಗುಣಮಟ್ಟದ ಶಿಕ್ಷಣ ನೀಡಿದೆ. ಗ್ರಾಮದ ಕೋಣನ ವಂಶಸ್ಥರಾದ ದೊಡ್ಡವೀರಭದ್ರಪ್ಪ ಮತ್ತು ಅವರ ನಾಲ್ಕು ಜನ ಸಹೋದರರು 1964-65ರಲ್ಲಿ ತಮ್ಮ ಖರ್ಚಿನಲ್ಲಿ ಸ್ವಂತ ಮನೆಯನ್ನೇ ಶಾಲೆಯನ್ನಾಗಿ ಪರಿವರ್ತಿಸಿ ವಿದ್ಯಾದಾನ ಮಾಡಲು ಮುಂದಾದರು.
ಶಿಕ್ಷಣ ನೀಡಬೇಕೆನ್ನುವ ಅದಮ್ಯ ಆಸೆ ಕಂಡು ಅಂದಿನ ಮೈಸೂರು ರಾಜ್ಯದ ಶಿಕ್ಷಣ ಸಚಿವರಾಗಿದ್ದ ಬದ್ರಿನಾರಾಯಣ ಅವರು ಮುಷ್ಠಲಗುಮ್ಮಿ ಗ್ರಾಮಕ್ಕೆ ಬಂದು ಶಾಲೆಯನ್ನು ಉದ್ಘಾಟಿಸಿದ್ದರು. ಮೊದಲ ವರ್ಷ ಮುಷ್ಠಲಗುಮ್ಮಿ ಗ್ರಾಮ ಸೇರಿದಂತೆ ಸುತ್ತಮುತ್ತಲ 10ಹಳ್ಳಿಗಳ 28 ಮಕ್ಕಳಿಂದ ಶಾಲೆ ಆರಂಭವಾಯಿತು. ಮಕ್ಕಳಿಗೆ ನಿತ್ಯ ತಮ್ಮ ಊರುಗಳಿಗೆ ತೆರಳಲು ಸೂಕ್ತ ಸಾರಿಗೆ ವ್ಯವಸ್ಥೆಯಿಲ್ಲ ಎಂದು ತಿಳಿದು ಉಚಿತವಾಗಿ ವಸತಿ ವ್ಯವಸ್ಥೆಯನ್ನು ಸಂಸ್ಥೆಯ ಸಂಸ್ಥಾಪಕರು ನೀಡಿದ್ದರು.
ಸರ್ಕಾರದ ಯಾವುದೇ ಅನುದಾನವಿಲ್ಲದೆ ಸ್ವಂತ ಖರ್ಚಿನಲ್ಲಿ ಬಡ ವಿದ್ಯಾರ್ಥಿಗಳಿಗೆ ಅನ್ನ, ಅಕ್ಷರ, ಆಶ್ರಯ ನೀಡಲಾಯಿತು. 1970ರಲ್ಲಿ ಶಾಲೆ ಸರ್ಕಾರಿ ಅನುದಾನಕ್ಕೆ ಒಳಪಟ್ಟಿತು. ಗ್ರಾಮದ ಮುಖ್ಯರಸ್ತೆಯಲ್ಲಿದ್ದ ನಾಲ್ಕುವರೆ ಎಕರೆ ಭೂಮಿ ಖರೀದಿಸಿ ಮೂರು ಕೊಠಡಿ, ಒಂದು ಕಚೇರಿ ನಿರ್ಮಾಣ ಮಾಡಲಾಯಿತು.
ಇಂದು 174 ಜನ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ಯಿದ್ವಾರೆ. 3ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿತು ನೆಲೆ ಕಂಡುಕೊಂಡಿದ್ದಾರೆ. ಇತ್ತೀಚಿನ ಕೆಲ ವರ್ಷಗಳ ಹಿಂದೆ ಶಾಲಾ ಕಟ್ಟಡವು ದುಸ್ಥಿತಿಗೆ ತಲುಪಿತ್ತು. ಇದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದರು. ಇದರಿಂದ ಎಚ್ಚೆತ್ತುಕೊಂಡ ಶಾಲಾ ಆಡಳಿತ ಮಂಡಳಿಯು ನೂತನವಾಗಿ 2 ಕೊಠಡಿ ನಿರ್ಮಿಸಲು ಮುಂದಾಯಿತು.
ಇದೇವೇಳೇ ಶಾಲೆಯ ನಿವೃತ್ತ ಶಿಕ್ಷಕರು, ಹಳೇ ವಿದ್ಯಾರ್ಥಿಗಳು, ಹಾಲಿ ಶಿಕ್ಷಕರು ಸಂಘಟಿತರಾಗಿ 2022ರಲ್ಲಿ 21ಜನರನ್ನೊಳಗೊಂಡ ವೀರಭದ್ರೇಶ್ವರ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಸಂಘ ನೋಂದಾಯಿಸಲಾಯಿತು. ಶಾಲೆಯ ಸುಮಾರು 450ಕ್ಕೂ ಹೆಚ್ಚು ಹಳೇವಿದ್ಯಾರ್ಥಿಗಳ ಸಂಪರ್ಕ ಸಾಧಿಸಿ ಅವರಿಂದ ₹ 30 ಲಕ್ಷ ದೇಣಿಗೆ ಸಂಗ್ರಹಿಸಲಾಯಿತು.
ಶಾಲಾ ಆಡಳಿತ ಮಂಡಳಿಯ 2 ಕೊಠಡಿಗಳ ಜತೆಗೆ ಇನ್ನೂ 2 ಕೊಠಡಿಗಳು, ಸಂಘಕ್ಕೆ ಕಚೇರಿ ನಿರ್ಮಿಸಲಾಯಿತು. ₹ 4 ಲಕ್ಷ ವೆಚ್ಚದ ಪೀಠೋಪಕರಣಗಳು, ₹ 30ಸಾವಿರ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕದ ವ್ಯವಸ್ಥೆ ಮಾಡಲಾಯಿತು. ಜತೆಗೆ 1999ನೇ ಬ್ಯಾಚ್ ವಿದ್ಯಾಥಿಗಳು ಒಂದು ಸ್ಮಾರ್ಟ್‌ಕ್ಲಾಸ್ ವ್ಯವಸ್ಥೆ ನೀಡಿದ್ದಾರೆ. ಇದನ್ನು ಕಂಡ ಆಡಳಿತ ಮಂಡಳಿಯು ಹೆಚ್ಚುವರಿಯಾಗಿ ಸಭಾಂಗಣ ನಿರ್ಮಿಸಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತವರಣ ಸೃಷ್ಟಿಸಲಾಗಿದೆ.
ಅಪ್ಪಟ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಸಂಸ್ಥೆಯ ಮೂಲ ಉದ್ದೇಶ. ಸಂಸ್ಥೆಯ ನಾವಿನ್ಯತೆ ಮತ್ತು ಅಭಿವೃದ್ಧಿಗೆ ಹೆಗಲುಕೊಟ್ಟಿರುವ ಹಳೇ ವಿದ್ಯಾರ್ಥಿಗಳ ಸಂಘದ ಬದ್ಧತೆಗೆ ಬೆಲೆಕಟ್ಟಲಾಗದು–ಎನ್.ಸತೀಶ್‌ಬಾಬು. ಸಂಸ್ಥೆಯ ಕಾರ್ಯದರ್ಶಿ
ನಮ್ಮ ಶಾಲೆ-ನಮ್ಮ ಹೆಮ್ಮೆ ಎಂಬ ಧ್ಯೆಯವಾಕ್ಯದ ಮೂಲಕ ಶಿಕ್ಷಣದ ಮಹತ್ವ ಅರಿತು ಹಳೇ ವಿದ್ಯಾರ್ಥಿಗಳು ಉದಾರವಾಗಿ ದೇಣಿಗೆ ನೀಡಿ ಸೇವಾ ಮನೋಭಾವವನ್ನು ಮರೆದಿದ್ದಾರೆ–ಬಿ.ಎಂ.ತಿಪ್ಪೇರುದ್ರಸ್ವಾಮಿ, ಗೌರವಾಧ್ಯಕ್ಷರು ವೀರಭದ್ರೇಶ್ವರ ಹಳೇ ವಿದ್ಯಾರ್ಥಿಗಳ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.