ಚಿತ್ರದುರ್ಗ: ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದ್ದ ಪ್ರಕರಣದ ಕಡತವನ್ನು ಕಳೆದು ಹಾಕಿ ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪದ ಮೇರೆಗೆ ಮುಜರಾಯಿ ತಹಶೀಲ್ದಾರ್ ಬಿ.ಎಸ್.ವೆಂಕಟೇಶ್ ಹಾಗೂ ದ್ವಿತೀಯ ದರ್ಜೆ ಸಹಾಯಕ ಕೆ.ವಿ.ವೀರಭದ್ರಪ್ಪ ಎಂಬುವರ ವಿರುದ್ಧ ನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ಕಚೇರಿಯ ಪತ್ರಾಂಕಿತ ಸಹಾಯಕ ಜಿ.ಸಂತೋಷ್‌ಕುಮಾರ್ ನೀಡಿದ ದೂರು ಆಧರಿಸಿ ಪೊಲೀಸರು ಗುರುವಾರ ದೂರು ದಾಖಲಿಸಿಕೊಂಡಿದ್ದಾರೆ.
ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಮಾರಮ್ಮ ದೇಗುಲಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಸೆ.8ಹಾಗೂ ಸೆ.27ರಂದು ನಿಗದಿಯಾಗಿದ್ದ ವಿಚಾರಣೆಗೆ ತಹಶೀಲ್ದಾರ್ ವೆಂಕಟೇಶ್ ಕಡತದೊಂದಿಗೆ ಹಾಜರಾಗಿರಲಿಲ್ಲ. ಅ.11ರಂದು ನಿಗದಿಯಾಗಿದ್ದ ವಿಚಾರಣೆಯ ಸಂದರ್ಭದಲ್ಲಿ ಕಡತ ಕಳೆದುಕೊಂಡಿರುವ ಮಾಹಿತಿ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನ್ಯಾಯಾಲಯದ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾಗಿ ಕಡತಗಳನ್ನು ಹಾಜರುಪಡಿಸುವುದು ನೌಕರರ ಕರ್ತವ್ಯ. ಸುಪರ್ದಿಯಲ್ಲಿದ್ದ ಕಡತವನ್ನು ಕಳೆದುಹಾಕಿ ಕಕ್ಷಿದಾರರು ಹಾಗೂ ವಕೀಲರಿಗೆ ತೊಂದರೆಯುಂಟು ಮಾಡಿದ್ದಾರೆ. ಕರ್ತವ್ಯಲೋಪ, ನಿರ್ಲಕ್ಷ್ಯ ತೋರಿರುವುದನ್ನು ಸಂಜ್ಞೆಯ ಅಪರಾಧವಾಗಿ ಪರಿಗಣಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.