ADVERTISEMENT

ಚಿತ್ರದುರ್ಗ | ಆದಿ ಕರ್ನಾಟಕ ಹಾಸ್ಟೆಲ್‌ ಆಸ್ತಿ ಕಬಳಿಸಲು ಯತ್ನ: ಆರೋಪ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 15:49 IST
Last Updated 14 ನವೆಂಬರ್ 2024, 15:49 IST

ಚಿತ್ರದುರ್ಗ: ‘ಆದಿ ಕರ್ನಾಟಕ ಮಕ್ಕಳ ವಸತಿ ನಿಲಯಕ್ಕಾಗಿ ಮೀಸಲಿಟ್ಟಿದ್ದ ನಗರದ ಬಿ.ಡಿ.ರಸ್ತೆಯಲ್ಲಿರುವ 408 X 216 ಅಡಿ ವಿಸ್ತೀರ್ಣದ ಭೂಮಿ ಕಬಳಿಸಲು ಖಾಸಗಿ ಸಂಸ್ಥೆಯೊಂದರ ಪದಾಧಿಕಾರಿಗಳು ಷಡ್ಯಂತ್ರ ರೂಪಿಸುತ್ತಿದ್ದಾರೆ. ಜಿಲ್ಲಾಡಳಿತ ಈ ಭೂಮಿ ಉಳಿಸಲು ಮುಂದಾಗಬೇಕು’ ಎಂದು ಮಾದಿಗ ಸಮುದಾಯದ ಮುಖಂಡ ಆರ್‌.ಮೈಲೇಶ್‌ ಒತ್ತಾಯಿಸಿದರು.

‘ಆದಿ ಕರ್ನಾಟಕ ಮಾತ್ರವಲ್ಲದೇ ಎಸ್‌ಸಿ, ಎಸ್‌ಟಿ, ಹಿಂದುಳಿದ ವರ್ಗಗಳ ಮಕ್ಕಳ ಹಾಸ್ಟೆಲ್‌ ನಿರ್ಮಿಸಲು ನಗರಸಭೆ 1955ರಲ್ಲೇ ಮಂಜೂರು ಮಾಡಿತ್ತು. ಆಸ್ತಿಯು 2010ರವರೆಗೂ ಆದಿ ಕರ್ನಾಟಕದ ಹಾಸ್ಟೆಲ್‌ ಹೆಸರಿನಲ್ಲೇ ಮುಂದುವರಿದಿತ್ತು. ಆದರೆ ಕೆಲವರು ಖಾಸಗಿ ಸಂಘಟನೆ ಮಾಡಿಕೊಂಡು ಆಸ್ತಿಯನ್ನು ಸಂಸ್ಥೆಯ ಹೆಸರಿಗೆ ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವುದು ಖಂಡನೀಯ’ ಎಂದು ಗುರುವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಖಾಸಗಿ ಸಂಸ್ಥೆಯ ಪದಾಧಿಕಾರಿಗಳೆಲ್ಲರೂ ಬೆಂಗಳೂರು ಮೂಲದವರೇ ಆಗಿದ್ದಾರೆ. ಬೆಂಗಳೂರಿನಿಂದ ಬಂದು ನಗರದ ಬಡವರ ಆಸ್ತಿ ಕಬಳಿಸಲು ಯತ್ನಿಸುತ್ತಿದ್ದಾರೆ. ಎಲ್ಲರೂ ರಾಜಕೀಯ ಹಾಗೂ ಆರ್ಥಿಕವಾಗಿ ಪ್ರಬಲರಾಗಿದ್ದು ಅವರ ಪ್ರಭಾವಕ್ಕೆ ಅಧಿಕಾರಿಗಳು ಮಣಿದು ಅಕ್ರಮವಾಗಿ ಮಂಜೂರಾತಿ ಮಾಡಿಕೊಟ್ಟಿದ್ದಾರೆ’ ಎಂದರು.

ADVERTISEMENT

‘ನಮ್ಮ ಹೋರಾಟದ ಫಲವಾಗಿ ನಗರಸಭೆ 2024, ಮೇ 20ರಂದು ಆದಿ ಕರ್ನಾಟಕ ಹಾಸ್ಟೆಲ್‌ ಹೆಸರಿಗೆ ಮರು ಖಾತೆ ಮಾಡಿದೆ. ಆದರೂ ಖಾಸಗಿ ವ್ಯಕ್ತಿಗಳು ಅಧಿಕಾರಿಗಳಿಗೆ ಪ್ರಭಾವ ಬೀರಿ ಮತ್ತೆ ಅಕ್ರಮವಾಗಿ ಖಾತೆ ಮಾಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಅಧಿಕಾರಿಗಳು ಅವರ ಪ್ರಭಾವಕ್ಕೆ ಮಣಿಯದೇ ಬಡ ಮಕ್ಕಳ ಹಾಸ್ಟೆಲ್‌ ಆಸ್ತಿ ಉಳಿಸಬೇಕು’ ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಯಲ್ಲಪ್ಪ, ಟಿ.ರಾಮಮೂರ್ತಿ, ರಾಮಲಿಂಗಪ್ಪ, ಲಿಂಗರಾಜು, ತಿಪ್ಪೇಸ್ವಾಮಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.