ADVERTISEMENT

ಹೊಸದುರ್ಗ ಪುರಸಭೆಗೆ ಮತ್ತೆ ಪ್ರಶಸ್ತಿ ಗರಿ

6800 ಮನೆಗಳು, 35 ಸಾವಿರ ಜನಸಂಖ್ಯೆ ಇರುವ ಪಟ್ಟಣ; ಸಮರ್ಪಕ ಸ್ವಚ್ಛತೆಯ ಪಾಲನೆ

ಎಸ್.ಸುರೇಶ್ ನೀರಗುಂದ
Published 13 ನವೆಂಬರ್ 2021, 5:04 IST
Last Updated 13 ನವೆಂಬರ್ 2021, 5:04 IST
ಹೊಸದುರ್ಗ ಪುರಸಭೆ ಕಾರ್ಯಾಲಯ
ಹೊಸದುರ್ಗ ಪುರಸಭೆ ಕಾರ್ಯಾಲಯ   

ಹೊಸದುರ್ಗ: ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಸಮರ್ಪಕ ಸ್ವಚ್ಛತೆಯ ಪಾಲನೆಗೆ ಕೇಂದ್ರ ಸರ್ಕಾರ ಕೊಡುವ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿಗೆ ಈ ಬಾರಿ ಪಟ್ಟಣದ ಪುರಸಭೆ ಆಯ್ಕೆಯಾಗಿದೆ.

23 ವಾರ್ಡ್‌ಗಳು, 6800 ಮನೆ ಹಾಗೂ 35,000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಪುರಸಭೆ ಇದಾಗಿದೆ. ಈ ಪುರಸಭೆಯು 2019ನೇ ಸಾಲಿನ ‘ಸ್ವಚ್ಛ ಸರ್ವೇಕ್ಷಣ’ ಪಟ್ಟಿಯಲ್ಲಿ ದಕ್ಷಿಣ ಭಾರತದ ಮೊದಲ ಮೂರು ‘ಸ್ವಚ್ಛ ಪಟ್ಟಣ’ಗಳ ಪೈಕಿ 2ನೇ ಸ್ಥಾನ ಪಡೆದಿತ್ತು. ಈಗ ಮತ್ತೆ 2ನೇ ಬಾರಿಗೆ ಸ್ವಚ್ಛ ಸರ್ವೇಕ್ಷಣೆ–2021ರ ಪ್ರಶಸ್ತಿಗೂ ಪಾತ್ರವಾಗಿದ್ದು, ಪುರಸಭೆಯ ಆಡಳಿತಕ್ಕೆ ಸಂತಸವನ್ನುಂಟು ಮಾಡಿದೆ.

ಪ್ರತಿದಿನವೂ ಪಟ್ಟಣದ ಸ್ವಚ್ಛತೆಯ ಪಾಲನೆಗೆ 60 ಮಂದಿ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ. ಸೆನೆಟ್ರಿ ಸೂಪರ್‌ ವೈಸರ್‌, ಮನೆ, ಮನೆ ಕಸ ಸಂಗ್ರಹಣೆಗೆ 10 ಆಟೊ ಟಿಪ್ಪರ್‌, 6 ಟ್ರ್ಯಾಕ್ಟರ್‌, ತಲಾ ಒಂದು ಜೆಸಿಬಿ ಹಾಗೂ ಸಕ್ಕಿಂಗ್‌ ಮಿಷನ್‌ ಇದೆ. ಪಟ್ಟಣದ ಪ್ರತಿ ಮನೆಯ ಹಸಿ ಹಾಗೂ ಒಣಕಸ ಸಂಗ್ರಹಿಸಲು ಹಸಿರು ಮತ್ತು ನೀಲಿ ಬಣ್ಣದ ಬಕೆಟ್‌ ವಿತರಿಸಲಾಗಿದೆ. ಪ್ರತಿದಿನ ಮನೆ ಬಾಗಿಲಿಗೆ ಹೋಗಿ ಕಸ ಸಂಗ್ರಹಿಸಲಾಗುತ್ತಿದೆ. ವಾಣಿಜ್ಯ ಮಳಿಗೆಗಳಿಗೆ ನಿರ್ದಿಷ್ಟವಾಗಿ ತೆರಿಗೆ ವಿಧಿಸಿ ಬೆಳಿಗ್ಗೆ ಹಾಗೂ ಸಂಜೆಯಂತೆ ದಿನಕ್ಕೆ ಎರಡು ಬಾರಿ ಕಸವನ್ನು ಸಂಗ್ರಹಿಸಲಾಗುತ್ತದೆ.

ADVERTISEMENT

ಮನೆ ಹಾಗೂ ವಾಣಿಜ್ಯ ಮಳಿಗೆಗಳಿಂದ ಸಂಗ್ರಹಿಸಿದ ಕಸವನ್ನು ಘನತ್ಯಾಜ್ಯ ವಿಲೇವಾರಿ ಘಟಕದ ಬಳಿ ಹಸಿ ಹಾಗೂ ಒಣಕಸವಾಗಿ ಬೇರ್ಪಡಿಸಲಾಗುತ್ತದೆ. ಹಸಿ ಕಸವನ್ನು ಗೊಬ್ಬರ ಮಾಡಿ ರೈತರಿಗೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ. ಪ್ಲಾಸ್ಟಿಕ್‌ ತ್ಯಾಜ್ಯವನ್ನು ಪೌರಾಡಳಿತದ ನಿರ್ದೇಶನದ ಮೇರೆಗೆ ಸಿಮೆಂಟ್‌ ಕಾರ್ಖಾನೆಗೆ ನೀಡಲಾಗುತ್ತಿದೆ. ಗುಜರಿ ಸಾಮಗ್ರಿಗಳನ್ನು ಹರಾಜು ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಿಂದ ವಾರ್ಷಿಕವಾಗಿ ಪುರಸಭೆಗೆ ₹ 2 ಲಕ್ಷ ಆದಾಯ ಬರುತ್ತಿದೆ. ಈ ಹಣವನ್ನು ಪೌರಕಾರ್ಮಿಕರ ಕಲ್ಯಾಣ ಕಾರ್ಯಕ್ಕೆ ಬಳಸಲಾಗುತ್ತಿದೆ.

ಸುಮಾರು 5 ಎಕರೆ ವಿಸ್ತೀರ್ಣದಲ್ಲಿ ಇರುವ ಘನತ್ಯಾಜ್ಯ ವಿಲೇವಾರಿ ಘಟಕ ಸಮರ್ಪಕವಾಗಿ ನಿರ್ವಹಣೆ ಆಗುತ್ತಿದೆ. ಇದು ಜಿಲ್ಲೆಗೆ ಮಾದರಿಯಾಗಿದೆ. ಇಲ್ಲಿ ವೈಜ್ಞಾನಿಕವಾಗಿ ಕಸವಿಂಗಡಣೆ ಮಾಡುವ ಕೆಲಸ ನಿರಂತರವಾಗಿ ನಡೆಯುತ್ತಿರುತ್ತದೆ. ಬೀದಿ, ಚರಂಡಿ, ಶೌಚಾಲಯ ಸ್ವಚ್ಛತೆಗೂ ವಿಶೇಷ ಒತ್ತು ನೀಡಲಾಗುತ್ತಿದೆ. 4 ಬಾರಿ ಬಯಲು ಶೌಚಮುಕ್ತ ಪಟ್ಟಣ ಎಂಬ ಹೆಗ್ಗಳಿಕೆಗೂ ಪುರಸಭೆ ಭಾಜನವಾಗಿದೆ.

‘ಪುರಸಭೆಯ ಈ ಎಲ್ಲಾ ಕಾರ್ಯ ಚಟುವಟಿಕೆಯನ್ನು ಕೇಂದ್ರ ಸ್ವಚ್ಛ ಸರ್ವೇಕ್ಷಣ ತಂಡ 4 ಜನರು ಪ್ರತ್ಯಕ್ಷವಾಗಿ ಪರಿಶೀಲಿಸಿದ್ದಾರೆ. ಸಾರ್ವಜನಿಕರಿಂದಲೂ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರು ಸ್ವಚ್ಛತೆ ಪಾಲನೆಗೆ ಕೈಜೋಡಿಸಿದ್ದರಿಂದ ಸ್ವಚ್ಛ ಸರ್ವೇಕ್ಷಣ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ನರಸಿಂಹಮೂರ್ತಿ ಸಂತಸ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.