ADVERTISEMENT

ಚಿತ್ರದುರ್ಗ: ಮಳೆಗೆ ಬಯಲಾದ ಅಂಗನವಾಡಿಗಳ ಬಣ್ಣ...!

ಕೆ.ಪಿ.ಓಂಕಾರಮೂರ್ತಿ
Published 28 ಅಕ್ಟೋಬರ್ 2024, 5:38 IST
Last Updated 28 ಅಕ್ಟೋಬರ್ 2024, 5:38 IST
ಶಿಥಿಲಾವಸ್ಥೆ ತಲುಪಿರುವ ಚಿತ್ರದುರ್ಗದ ವೆಂಕಟೇಶ್ವರ ಬಡಾವಣೆಯ ಅಂಗನವಾಡಿ ಕೇಂದ್ರ
ಶಿಥಿಲಾವಸ್ಥೆ ತಲುಪಿರುವ ಚಿತ್ರದುರ್ಗದ ವೆಂಕಟೇಶ್ವರ ಬಡಾವಣೆಯ ಅಂಗನವಾಡಿ ಕೇಂದ್ರ   

ಚಿತ್ರದುರ್ಗ: ಜಿಲ್ಲೆಯಾದ್ಯಂತ ಕೆಲ ದಿನಗಳಿಂದ ಸುರಿದ ಮಳೆಗೆ ಅಂಗನವಾಡಿ ಕೇಂದ್ರಗಳು ನಲುಗಿವೆ. ಚಾವಣಿಯಿಂದ ಜಿನುಗುವ ನೀರು, ಹಸಿಯಾಗಿರುವ ಗೋಡೆಗಳು, ನೆಲದಲ್ಲಿನ ನೀರಿನ ತಂಪಿಗೆ ಚಿಣ್ಣರು ನಡುಗುವಂತಾಗಿದೆ. ಜಿಲ್ಲೆಯಲ್ಲಿ 117 ಕೇಂದ್ರಗಳಿಗಷ್ಟೇ ಹಾನಿಯಾಗಿದೆ ಎಂಬುದು ಇಲಾಖೆಯ ಲೆಕ್ಕ. 

‘ಸಣ್ಣ ದುರಸ್ತಿ ಕಾರ್ಯ ಬಿಟ್ಟರೆ ಬೇರೆ ಏನೂ ಸಮಸ್ಯೆ ಇಲ್ಲ. ಬಹುತೇಕ ಕಟ್ಟಡಗಳು ಸುಸಜ್ಜಿತವಾಗಿಯೇ ಇವೆ. ಪುಟಾಣಿಗಳು ಕಲಿಯುವ ಜಾಗ ಅಲ್ವಾ’ ಎನ್ನುತ್ತಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಎಲ್ಲವೂ ಸರಿಯಾಗಿಯೇ ಇದೆ ಎಂದು ಪ್ರತಿಪಾದಿಸುತ್ತಿದ್ದರು. ಆದರೆ ಈ ಬಾರಿಯ ಮಳೆರಾಯ ಎಲ್ಲವನ್ನೂ ಬಯಲಾಗಿಸಿದ್ದಾನೆ.

ಸ್ವಂತ ಕಟ್ಟಡ ಹೊಂದಿರುವ ನಗರದ ವೆಂಕಟೇಶ್ವರ ಬಡಾವಣೆಯ ‘ಎ’ ಕೇಂದ್ರ ಮೇಲ್ನೋಟಕ್ಕೆ ಚೆನ್ನಾಗಿದೆ. ಅದರ ಒಳ ಹೊಕ್ಕರೆ ನಿಜ ಬಣ್ಣದ ದರ್ಶನವಾಗುತ್ತದೆ. ಗೋಡೆ ಮೇಲೆ ಇಳಿದಿರುವ ಮಳೆ ನೀರಿನಿಂದ ಸೃಷ್ಟಿಯಾಗಿರುವ ಚಿತ್ತಾರ ಕಣ್ಣಿಗೆ ಕುಕ್ಕುತ್ತದೆ. ಕೈ ಇಟ್ಟರೆ ಎಲ್ಲಿ ವಿದ್ಯುತ್‌ ಸ್ಪರ್ಶಿಸುತ್ತದೆಯೋ ಎಂಬ ಭೀತಿ ಕಾಡುತ್ತದೆ. ಕೇಂದ್ರದ ಚಾವಣಿಗೆ ಅಳವಡಿಸಿರುವ ತಗಡಿನ ಶೀಟುಗಳಂತೂ ಜೋರಾಗಿ ಗಾಳಿ ಬೀಸಿದರೆ ಹಾರಿ ಹೋಗುವಂತಿವೆ. ಇಂತಹ ದುಸ್ಥಿತಿಗಳ ನಡುವೆಯೇ ಪುಟಾಣಿಗಳ ಕಲಿಕೆ ಸಾಗಿದೆ.

ADVERTISEMENT

ಸರ್ಕಾರದ ನಿಯಮದ ಪ್ರಕಾರ ಒಂದು ಅಂಗನವಾಡಿ ಕೇಂದ್ರ 30X40 ಅಡಿ ವಿಸ್ತೀರ್ಣದ ಜಾಗದಲ್ಲಿರಬೇಕು. ಆದರೆ ಈಗಿರುವ ಕೇಂದ್ರಗಳು ಕಲಿಕಾ ವಾತಾವರಣಕ್ಕೆ ಪೂರಕವಾಗಿಲ್ಲ. ಪ್ರತಿ 800 ಜನಸಂಖ್ಯೆಗೆ ಒಂದು ಅಂಗನವಾಡಿ ಕೇಂದ್ರ ತೆರೆಯಬೇಕೆಂಬ ನಿಯಮ ಇದೆ. ಜಿಲ್ಲೆಯಲ್ಲಿ 2,428 ಅಂಗನವಾಡಿ ಕೇಂದ್ರಗಳಿವೆ. 3 ವರ್ಷದಿಂದ 6 ವರ್ಷದೊಳಗಿನ 39,878 ಮಕ್ಕಳು ಇವುಗಳಲ್ಲಿ ದಾಖಲಾಗಿದ್ದಾರೆ.

ನಗರದ ಮಾರುತಿ ನಗರ, ಕಾಮನಬಾವಿ, ವೆಂಕಟೇಶ್ವರ ಬಡಾವಣೆ, ಹೊಳಲ್ಕೆರೆ ರಸ್ತೆ, ಬುರುಜನಹಟ್ಟಿ ಸೇರಿದಂತೆ ಬಹುತೇಕ ಕಡೆಯ ಅಂಗನವಾಡಿ ಕೇಂದ್ರಗಳು ಶಿಥಿಲಾವಸ್ಥೆಯ ಚಿಕ್ಕ ಕೊಠಡಿಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮಳೆಗಾಲದಲ್ಲಿ ಸೋರುವುದು ಮಾಮೂಲಿಯಾಗಿದೆ.

ನಾಯಕನಹಟ್ಟಿ ಪಟ್ಟಣದ ಅಂಗನವಾಡಿ ಕೇಂದ್ರದ ಚಾವಣಿಯ ಸಿಮೆಂಟ್ ಬಿದ್ದಿರುವುದು

ಇಂತಹ ಕೇಂದ್ರಗಳಲ್ಲಿ ಆಹಾರಧಾನ್ಯ, ಪುಸ್ತಕ, ದಾಖಲೆಗಳನ್ನು ಸಂರಕ್ಷಿಸುವುದು ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರಿಗೆ ಸವಾಲಾಗಿದೆ. ಒಂದು ಮೂಲೆಯಲ್ಲಿ ಮಕ್ಕಳಿಗೆ ಆಹಾರ ತಯಾರಿಸಲಾಗುತ್ತದೆ. ಮತ್ತೊಂದು ಮೂಲೆಯಲ್ಲಿ ಆಹಾರ ಸಾಮಗ್ರಿಗಳ ದಾಸ್ತಾನು ಇರುತ್ತದೆ. ಇನ್ನುಳಿದ ಸ್ಥಳದಲ್ಲಿ ಮಕ್ಕಳನ್ನು ಕೂರಿಸಿ ಕಲಿಕೆ ಪ್ರಕ್ರಿಯೆಯಲ್ಲಿ ತೊಡಗಿಸುವ ಸ್ಥಿತಿ ಇದೆ.

ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡ, ಕಟ್ಟಡಕ್ಕೆ ಕಾಂಪೌಂಡ್‍ ವ್ಯವಸ್ಥೆ, ಶುದ್ಧ ಕುಡಿಯುವ ನೀರು, ವಿದ್ಯುತ್‍ ಸಂಪರ್ಕ, ಸುಸಜ್ಜಿತವಾದ ಅಡುಗೆ ಕೋಣೆ, ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ವಿಪರ್ಯಾಸದ ಸಂಗತಿ. ಕಲುಷಿತ ವಾತಾವರಣ, ನಾಮಕಾವಸ್ಥೆ ಕಿಟಕಿ, ಶುದ್ಧ ಗಾಳಿ ಬೆಳಕು ಇಲ್ಲದ ಉಸಿರುಗಟ್ಟಿಸುವ ಪರಿಸರದಲ್ಲಿ ಚಿಣ್ಣರು ಬಾಲ್ಯ ಕಳೆಯುವಂತಾಗಿದೆ. 

ಮಳೆಯಿಂದಾಗಿ ಜಿಲ್ಲೆಯಲ್ಲಿ 117 ಅಂಗನವಾಡಿ ಕೇಂದ್ರಗಳು ಹಾಳಾಗಿವೆ. ದುರಸ್ತಿ ಕಾರ್ಯಕ್ಕೆ ಈಗಾಗಲೇ ₹ 2.67 ಕೋಟಿ ಮೊತ್ತಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದೆ
ಭಾರತಿ ಆರ್‌. ಬಣಕಾರ್ ಉಪ ನಿರ್ದೇಶಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಹಿರಿಯೂರು ತಾಲ್ಲೂಕಿನಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಜತೆ ಚರ್ಚಿಸಲಾಗಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ
ರಾಘವೇಂದ್ರ ಸಿಡಿಪಿಒ
ನಾವು ದಿನಗೂಲಿ ಮಾಡಿ ಸಂಸಾರ ನಡೆಸುತ್ತಿದ್ದೇವೆ. ಖಾಸಗಿ ಶಾಲೆಗೆ ಕಳಿಸುವ ಆರ್ಥಿಕ ಶಕ್ತಿಯಿಲ್ಲ. ಅನಿವಾರ್ಯವಾಗಿ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಿ ನಾವು ಕೂಲಿ ಕೆಲಸಕ್ಕೆ ಹೋಗುತ್ತಿದ್ದೇವೆ
ಅರುಣ ಚಿಕ್ಕಜಾಜೂರು

ದನದ ಕೊಟ್ಟಿಗೆಯಲ್ಲೇ ಚಿಣ್ಣರ ಕಲಿಕೆ..

– ವಿ. ವೀರಣ್ಣ

ಧರ್ಮಪುರ: ಮಕ್ಕಳು ಆಡಿ ನೋಡಿ ಕಲಿಯಬೇಕಾದ ಅಂಗನವಾಡಿ ಕೇಂದ್ರಗಳು ಮೂಲಸೌಕರ್ಯಗಳಿಂದ ವಂಚಿತವಾಗಿವೆ. ದಿನದಿಂದ ದಿನಕ್ಕೆ ಅಸ್ತಿತ್ವ ಕಳೆದುಕೊಳ್ಳುತ್ತಿವೆಯೇ ಎಂಬ ಆತಂಕ ಆವರಿಸುತ್ತಿದೆ. ಸ್ವಂತ ಕಟ್ಟಡವಿಲ್ಲದೆ ಬಾಡಿಗೆ ವಾಸದ ಮನೆ ದನದ ಕೊಟ್ಟಿಗೆಯಲ್ಲೇ ಚಿಣ್ಣರು ಕಲಿಕೆ ಮುಂದುವರಿಸುವಂತಾಗಿದೆ.

ಗರ್ಭಿಣಿಯರು ಬಾಣಂತಿಯರು ಅಂಗನವಾಡಿ ಕಾರ್ಯಕರ್ತೆಯರು ಸಹಾಯಕಿಯರು 6 ವರ್ಷದೊಳಗಿನ ಮಕ್ಕಳು ಸೇರಿದಂತೆ ಹಿರಿಯೂರು ತಾಲ್ಲೂಕಿನಲ್ಲಿ 19886 ಫಲಾನುಭವಿಗಳಿದ್ದಾರೆ. 459 ಅಂಗನವಾಡಿ ಕೇಂದ್ರಗಳಿದ್ದು ಇದರಲ್ಲಿ 344 ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. 66 ಕೇಂದ್ರಗಳಿಗೆ ಸಮುದಾಯ ಭವನ ಶಾಲೆ ಮಹಿಳಾ ಮಂಡಳಿ ಯುವಕ ಮಂಡಳಿ ಆಸರೆಯಾಗಿವೆ.

49 ಕೇಂದ್ರಗಳು ಬಾಡಿಗೆ ಮನೆಗಳನ್ನು ಆಶ್ರಯಿಸಿವೆ. ಚಿಕ್ಕ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಇರಬೇಕು. ಆದರೆ ಕೆಲವೊಂದು ಕಡೆ ಮಕ್ಕಳು ಉಸಿರು ಹಿಡಿದು ಕುಳಿತು ಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಸೋರುವ ಕೊಠಡಿಗಳು ಕಸದ ರಾಶಿ ದುರ್ವಾಸನೆ ಬೀರುವ ಚರಂಡಿಗಳಿಂದಾಗಿ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಉಂಟಾಗುವ ಅಪಾಯವಿದೆ.  ‌

ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯಗಳಿಲ್ಲ. ಇದ್ದರೂ ನಿರ್ವಹಣೆ ಇಲ್ಲದೆ ಬಾಗಿಲು ಮುಚ್ಚಿವೆ. ಆಹಾರ ತಯಾರಿಕೆಗೆ ಪ್ರತ್ಯೇಕ ಕೊಠಡಿಗಳಿಲ್ಲ. ಇತ್ತೀಚಿನ ವರ್ಷಗಳಲ್ಲಿ ಫಲಾನುಭವಿಗಳಿಗೆ ವಿತರಣೆಯಾಗುತ್ತಿರುವ ಪೌಷ್ಟಿಕ ಆಹಾರ ಗುಣಮಟ್ಟದಿಂದ ಕೂಡಿಲ್ಲ.

ಟೆಂಡರ್‌ ಪಡೆದವರು ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿದ್ದಾರೆ. ಇದರಿಂದ ಗಲಾಟೆ ಸಾಮಾನ್ಯವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಕಾರ್ಯಕರ್ತೆಯೊಬ್ಬರು ಹೇಳಿದರು. ಆರಂಭದ ವರ್ಷಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸಂಖ್ಯೆ ಬಹಳಷ್ಟಿತ್ತು. ಆದರೆ ಕ್ರಮೇಣ ಇದು ಇಳಿಕೆಯಾಗಿದೆ. ಕೇಂದ್ರಗಳಿಗೆ ಮೂಲಸೌಲಭ್ಯ ಕಲ್ಪಿಸುವ ಮೂಲಕ ಆರಂಭದ ದಿನಗಳ ವೈಭವ ಮತ್ತೆ ಮರುಕಳಿಸುವಂತೆ ಮಾಡಬೇಕಿದೆ. ಪೂರ್ವ ಪ್ರಾಥಮಿಕ ಶಾಲೆಗಳನ್ನು ಇಲ್ಲಿಯೇ ಪ್ರಾರಂಭಿಸಿ ಶೈಕ್ಷಣಿಕ ಅರ್ಹತೆ ಮೇಲೆ ಅವರನ್ನು ಶಿಕ್ಷಕಿಯರಾಗಿ ಬಡ್ತಿ ನೀಡಬೇಕು ಎಂದು ಪಾಲಕರಾದ ಗಂಗಮ್ಮ ಒತ್ತಾಯಿಸಿದರು.

ಮಕ್ಕಳ ಸುರಕ್ಷತೆ ತೀರಾ ವಿರಳ

–ಜೆ. ತಿಮ್ಮಪ್ಪ

ಚಿಕ್ಕಜಾಜೂರು: ಚಿಣ್ಣರ ಉಜ್ವಲ ಭವಿಷ್ಯಕ್ಕೆ ಅಡಿಪಾಯ ಹಾಕಬೇಕಿರುವ ಅಂಗನವಾಡಿ ಕೇಂದ್ರಗಳು ಇದೀಗ ಸಮಸ್ಯೆಯ ತಾಣಗಳಾಗಿವೆ. ಬಿ. ದುರ್ಗ ಹೋಬಳಿ ಹಾಗೂ ಚಿಕ್ಕಜಾಜೂರು ವ್ಯಾಪ್ತಿಯ ಮಲ್ಲಾಡಿಹಳ್ಳಿ ಚಿತ್ರಹಳ್ಳಿ ವ್ಯಾಪ್ತಿಯಲ್ಲಿ 130ಕ್ಕೂ ಹೆಚ್ಚು ಅಂಗನವಾಡಿಗಳಿವೆ.

ಇವುಗಳಲ್ಲಿ ಶೇ 30ಕ್ಕೂ ಹೆಚ್ಚು ಕೇಂದ್ರಗಳಿಗೆ ಸ್ವಂತ ಕಟ್ಟಡ ಇಲ್ಲದಿರುವುದು ದುರಂತ. ಬಹುತೇಕ ಕಡೆ ಬಾಡಿಗೆ ಮನೆ ಶೆಡ್‌ ಸಣ್ಣ ಹೆಂಚಿನ ಅಥವಾ ತಗಡಿನ ಶೀಟುಗಳ ಮನೆಗಳಲ್ಲಿ ಮಕ್ಕಳ ಕಲಿಕೆ ಸಾಗಿದೆ. ಮಳೆಗಾಲ ಮತ್ತು ಬೇಸಿಗೆಯಲ್ಲಿ ಮಕ್ಕಳಿಗೆ ಸುರಕ್ಷತೆ ಇಲ್ಲ. ಬೆಳಿಗ್ಗೆ 10 ರಿಂದ ಸಂಜೆ 4ರವರೆಗೆ ಸಣ್ಣ ಕೊಠಡಿಗಳಲ್ಲೇ ಮಕ್ಕಳನ್ನು ಕೂಡಿ ಹಾಕುವ ಸ್ಥಿತಿ ಇದೆ. ಮಕ್ಕಳಿಗೆ ಆಟದ ಮೈದಾನದ ವ್ಯವಸ್ಥೆ ಇಲ್ಲದಿರುವುದು ಬಹುತೇಕ ಪಾಲಕರ ಬೇಸರಕ್ಕೆ ಕಾರಣವಾಗಿದೆ.

ಕಟ್ಟಡ ನಿರ್ಮಾಣಕ್ಕೆ ಅನುದಾನ ಬಂದರೂ ಗ್ರಾಮ ಪಂಚಾಯಿತಿಯವರು ನಿವೇಶನ ಕೊಡುತ್ತಿಲ್ಲ ಎಂಬ ಆರೋಪಗಳೂ ಕೇಳಿ ಬಂದಿವೆ. ‘ನಾವು ಕಮ್ಮಾರಿಕೆ ವೃತ್ತಿ ಮಾಡಿ ಜೀವನ ನಡೆಸುತ್ತಿದ್ದೇವೆ. ಎಳವೆಯಲ್ಲಿಯೇ ಶಾಲಾ ವಾತಾವರಣ ಸಿಗಲಿ ಎಂಬ ಕಾರಣಕ್ಕೆ ಮಗುವನ್ನು ಅಂಗನವಾಡಿ ಕೇಂದ್ರಕ್ಕೆ ಕಳುಹಿಸಿ ನಾವು ಕೆಲಸಕ್ಕೆ ಹೋಗುತ್ತೇವೆ. ಆದರೆ ಅಲ್ಲಿ ಸಹ ಸರಿಯಾದ ವಾತಾವರಣವಿಲ್ಲ’ ಎಂದು ಪಾಲಕರಾದ ನಾಗರತ್ನಾ ಬೇಸರಿಸಿದರು.

ಸೋರುವ ಕಟ್ಟಡಗಳು..ಮೂಲಸೌಕರ್ಯ ಮರೀಚಿಕೆ

–ವಿ. ಧನಂಜಯ

ನಾಯಕನಹಟ್ಟಿ: ಚಿಕ್ಕಮಕ್ಕಳ ಪೋಷಣೆ ಮತ್ತು ಆರೈಕೆಗೆ ಉತ್ತೇಜನ ನೀಡುವ ಅಂಗನವಾಡಿ ಕೇಂದ್ರಗಳು ಸಾಧಾರಣ ಮಳೆಗೂ ಸೋರುತ್ತಿವೆ. ಬಹುತೇಕ ಕಟ್ಟಡಗಳಲ್ಲಿ ಮೂಲಸೌಕರ್ಯ ಮರೀಚಿಕೆಯಾಗಿವೆ. 

ಅಂಗನವಾಡಿಗಳು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡುವ ಪ್ರಮುಖ ಕೇಂದ್ರಗಳು. ಗರ್ಭಿಣಿಯರು ಬಾಣಂತಿಯರು ಚಿಕ್ಕಮಕ್ಕಳ ಪೋಷಣೆ ಪೌಷ್ಟಿಕ ಆಹಾರ ವಿತರಣೆಯಲ್ಲಿ ಪ್ರಮುಖ ಪಾತ್ರವಹಿಸಿವೆ. ಆದರೆ ಹೋಬಳಿಯ ಹಲವು ಕೇಂದ್ರಗಳಿಗೆ ಕಾಂಪೌಂಡ್‌ ಶುದ್ಧ ಕುಡಿಯುವ ನೀರು ವಿದ್ಯುತ್‌ ಸಂಪರ್ಕ ಸುಸಜ್ಜಿತ ಅಡುಗೆ ಕೋಣೆ ಶೌಚಾಲಯದ ವ್ಯವಸ್ಥೆ ಇಲ್ಲ.

ಹೋಬಳಿಯಲ್ಲಿ 49 ಅಂಗನವಾಡಿಗಳಿವೆ. ಪಟ್ಟಣದ ಆಸ್ಪತ್ರೆ ಮುಂಭಾಗದ ಕೇಂದ್ರ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ತೇರುಬೀದಿಯಲ್ಲಿರುವ 4 ನೆಲಗೇತನಹಟ್ಟಿ ಗ್ರಾಮದ ‘ಬಿ’ ಮತ್ತು ‘ಸಿ’ ಕೇಂದ್ರ ಕಾರ್ತಿಕೇಯನಹಟ್ಟಿ ಮನುಮೈನಹಟ್ಟಿ ಗ್ರಾಮದ ಕೇಂದ್ರಗಳು ಹಲವು ವರ್ಷಗಳಿಂದ ಸೋರುತ್ತಿವೆ. ಆಹಾರ ಧಾನ್ಯ ಪುಸ್ತಕ ದಾಖಲೆಗಳು ಮಳೆ ನೀರಿನಲ್ಲಿ ತೊಯ್ದು ಹಾಳಾಗುತ್ತಿವೆ. ಇವುಗಳ ದುರಸ್ತಿಗೆ ಮತ್ತು ನೂತನ ಕಟ್ಟಡಗಳ ನಿರ್ಮಾಣಕ್ಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕು ಎಂಬುದು ಪಾಲಕರ ಒತ್ತಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.