ADVERTISEMENT

ಗರ್ಭಗುಡಿ, ಸುಕನಾಸಿಗೆ ಪ್ರವೇಶ ಇಲ್ಲ: ಬಾಗೂರು ದೇಗುಲದ ಅರ್ಚಕರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2024, 16:11 IST
Last Updated 3 ಫೆಬ್ರುವರಿ 2024, 16:11 IST
   

ಚಿತ್ರದುರ್ಗ: ಅರ್ಚಕರು, ಕುಟುಂಬದ ಸದಸ್ಯರು ಹಾಗೂ ಬ್ರಾಹ್ಮಣರನ್ನು ಹೊರತುಪಡಿಸಿ ದೇಗುಲದ ಗರ್ಭಗುಡಿ ಮತ್ತು ಸುಕನಾಸಿಗೆ ಅನ್ಯರಿಗೆ ಪ್ರವೇಶವಿಲ್ಲ. ಗರ್ಭಗುಡಿ ಪ್ರವೇಶಿಸುವುದಾಗಿ ಮಠಾಧೀಶರು ಸೇರಿ ಯಾರೊಬ್ಬರೂ ಈವರೆಗೆ ಕೋರಿಕೊಂಡಿಲ್ಲ ಎಂದು ಹೊಸದುರ್ಗ ತಾಲ್ಲೂಕಿನ ಬಾಗೂರು ಚನ್ನಕೇಶವ ದೇಗುಲದ ಅರ್ಚಕ ಶ್ರೀನಿವಾಸ್ ಅಯ್ಯಂಗಾರ್‌ ಸ್ಪಷ್ಟಪಡಿಸಿದ್ದಾರೆ.

‘ದೇವರ ವಿಗ್ರಹದ ಪ್ರತಿಷ್ಠಾಪನೆಯ ಬಳಿಕ ಅರ್ಚಕರು ಹಾಗೂ ಸಂಬಂಧಿಸಿದವರನ್ನು ಹೊರತುಪಡಿಸಿ ಯಾರೊಬ್ಬರಿಗೂ ಗರ್ಭಗುಡಿ ಪ್ರವೇಶವಿಲ್ಲ. ದೇವರ ಉತ್ಸವಮೂರ್ತಿ ಕೂರಿಸುವ ಸುಕನಾಸಿಗೆ ಬ್ರಾಹ್ಮಣರು ಅಥವಾ ಅರ್ಚಕರ ಕುಟುಂಬದ ಸದಸ್ಯರಿಗೆ ಮಾತ್ರ ಅವಕಾಶವಿದೆ. ಸ್ತ್ರೀಯರಿಗೆ ಸುಕನಾಸಿ ಪ್ರವೇಶವಿದೆಯೇ ಹೊರತು ಗರ್ಭಗುಡಿಗೆ ಅಲ್ಲ’ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.

‘ಮಠಾಧೀಶರು ಆರು ವರ್ಷಗಳಿಂದ ದೇಗುಲಕ್ಕೆ ಬರುತ್ತಿದ್ದಾರೆ. ಗರ್ಭಗುಡಿಯ ಹೊರಗೆ ಕೈಮುಗಿದು ತೆರಳುತ್ತಾರೆ. ಒಳಗೆ ಬರುವ ಇಂಗಿತವನ್ನು ಯಾವತ್ತೂ ವ್ಯಕ್ತಪಡಿಸಿಲ್ಲ. ಜಾತಿಯ ಕಾರಣಕ್ಕೆ ಗರ್ಭಗುಡಿಗೆ ಬಿಡಲಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. 80 ಹಳ್ಳಿಗಳಿಗೆ ಸಂಬಂಧಿಸಿದ ಈ ದೇಗುಲದ ಗರ್ಭಗುಡಿಗೆ ಯಾರೊಬ್ಬರೂ ಈವರೆಗೆ ಬಂದಿಲ್ಲ. ಜಾತಿ ಕಾರಣಕ್ಕೆ ಬೇಧ ಭಾವ ಮಾಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ADVERTISEMENT

‘ದೇವರಿಗೆ ಅಭಿಷೇಕ, ಅಲಂಕಾರ, ಪೂಜೆ ಹಾಗೂ ಮಹಾಮಂಗಳಾರತಿ ಮುಗಿದ ಬಳಿಕ ಯಾವುದೇ ಕಾರಣಕ್ಕೂ ದೇಗುಲ ಸ್ವಚ್ಛತೆ ಮಾಡುವುದಿಲ್ಲ. ವೈಕುಂಠ ಏಕಾದಶಿ, ದಸರಾ ಮಹೋತ್ಸವ ಹಾಗೂ ರಥೋತ್ಸವದ ಸಂದರ್ಭದಲ್ಲಿ ದೇಗುಲ ಸ್ವಚ್ಛತೆ ಮಾಡಲಾಗುತ್ತದೆ. ಗ್ರಾಮದಲ್ಲಿ ಸಾವು ಸಂಭವಿಸಿದಾಗ ಮಾತ್ರ ಪ್ರೋಕ್ಷಣೆ ಮಾಡಿ ದೇಗುಲ ಶುದ್ಧೀಕರಿಸಲಾಗುತ್ತದೆ. ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಎಷ್ಟು ವರ್ಷಗಳ ಹಿಂದಿನ ಘಟನೆ ಬಗ್ಗೆ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ’ ಎಂದರು.

‘ಜಾತಿ ಕಾರಣಕ್ಕೆ ಹೊರಗಿಡುವುದು ಸರಿಯೇ?’

ಜಾತಿಯ ಕಾರಣಕ್ಕೆ ಭಕ್ತರನ್ನು ದೇಗುಲ, ಗರ್ಭಗುಡಿಯ ಹೊರಗೆ ನಿಲ್ಲಿಸುವುದು ಎಷ್ಟು ಸರಿ ಎಂದು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಪ್ರಶ್ನಿಸಿದ್ದಾರೆ.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿವಾದ ಸೃಷ್ಟಿಸುವ ಉದ್ದೇಶದಿಂದ ಈ ಮಾತು ಹೇಳುತ್ತಿಲ್ಲ. ವೈಕುಂಠ ಏಕಾದಶಿ ಸಂದರ್ಭದಲ್ಲಿ ಮಠಾಧೀಶರನ್ನೂ ದ್ವಾರಬಾಗಿಲು ಹೊರಗೆ ನಿಲ್ಲಿಸಲಾಗಿತ್ತು. ಸಂವಿಧಾನ ಬದ್ಧ ಭಾರತದಲ್ಲಿ ನಾವಿದ್ದು, ಯಾವುದೇ ದೇಗುಲ, ಮಠಗಳಲ್ಲಿ ಅಸ್ಪೃಶ್ಯತೆ ಆಚರಣೆ ಬೇಡ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.