ಚಿತ್ರದುರ್ಗ: ಬಂಜಾರ ಬುಡಕಟ್ಟು (ಲಂಬಾಣಿ) ಸಂಸ್ಕೃತಿ ಉತ್ಸವ ಹಾಗೂ ಅತಿ ಹಿಂದುಳಿದ ಸಮುದಾಯಗಳ ಸಮಾವೇಶವನ್ನು ಅ. 26 ಮತ್ತು 27ರಂದು ನಿಜಲಿಂಗಪ್ಪ ಸ್ಮಾರಕ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಂಜಾರ ಗುರುಪೀಠದ ಸೇವಾಲಾಲ್ ಸರ್ದಾರ್ ಸ್ವಾಮೀಜಿ ತಿಳಿಸಿದರು.
‘ಬಂಜಾರ ಸಂಸ್ಕೃತಿಯನ್ನು ರಕ್ಷಿಸುವ ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಬರ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಸಂಕಲ್ಪ ಪೂಜೆ ಕೂಡ ನಡೆಸಲಾಗುತ್ತಿದೆ. ಸಚಿವರಾದ ಸತೀಶ್ ಜಾರಕಿಹೊಳಿ, ಶಿವರಾಜ್ ತಂಗಡಗಿ, ಸಾಹಿತಿ ಬಿ.ಟಿ.ಲಲಿತಾ ನಾಯಕ್, ಸಿ.ಎಸ್.ದ್ವಾರಕನಾಥ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಬಂಜಾರ ಸಮುದಾಯ ರಾಜ್ಯದಲ್ಲಿ 35 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಸಾಮಾಜಿಕ, ಆರ್ಥಿಕವಾಗಿ ಅತಿ ಹಿಂದುಳಿದಿರುವ ಸಮುದಾಯ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸಂಘಟನೆ ಮತ್ತು ನಾಯಕರ ಕೊರತೆ ಸಮುದಾಯದಲ್ಲಿದೆ. ಸಮಸ್ಯೆ ಆಲಿಸಲು ಯಾರೊಬ್ಬರೂ ಆಸಕ್ತಿ ತೋರುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ಅತಿ ಹಿಂದುಳಿದ 151 ಸಮುದಾಯಗಳಿಗೆ ರಾಜಕೀಯ ಸ್ಥಾನ ಸಿಕ್ಕಿಲ್ಲ. ಮೂಲಸೌಲಭ್ಯದಿಂದಲೂ ವಂಚಿತ ಆಗಿದ್ದಾರೆ. ರಾಜ್ಯ ಸಚಿವ ಸಂಪುಟದಲ್ಲಿ ಲಂಬಾಣಿ ಸಮುದಾಯದ ಯಾರೊಬ್ಬರಿಗೂ ಅವಕಾಶ ಕಲ್ಪಿಸದೇ ಇರುವುದು ಬೇಸರ ಮೂಡಿಸಿದೆ. ಉಪಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ಸಚಿವ ಸ್ಥಾನ ಕಲ್ಪಿಸಬೇಕು ಹಾಗೂ ಲೋಕಸಭಾ ಚುನಾವಣೆಯಲ್ಲಿ ಸಮುದಾಯದ ನಾಯಕರನ್ನು ಅಭ್ಯರ್ಥಿಗಳನ್ನಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.
ಸಮುದಾಯದ ಮುಖಂಡರಾದ ನಾಗರಾಜ ನಾಯ್ಕ್, ರಾಮಾನಾಯ್ಕ್, ಸತೀಶ್ ನಾಯ್ಕ, ವಕೀಲ ಪ್ರತಾಪ್ ಜೋಗಿ, ಮಲ್ಲಿಕಾರ್ಜುನ, ರಘು ಜೋಗಿಮಟ್ಟಿ ಇದ್ದರು.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ಲಂಬಾಣಿ ಸಮುದಾಯವನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಸಮುದಾಯದ ಬೆಂಬಲದಿಂದ ಅಧಿಕಾರ ಹಿಡಿದ ಕಾಂಗ್ರೆಸ್ ರಾಜಕೀಯ ಪ್ರಾತಿನಿಧ್ಯ ನೀಡುತ್ತಿಲ್ಲ.-ಕೆ.ಜಿ.ಪುರುಷೋತ್ತಮ ನಾಯ್ಕ್ ಗುರುಪೀಠದ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.