ಚಿತ್ರದುರ್ಗ: ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಹಾಗೂ ಸಿಬ್ಬಂದಿ ಹೆಚ್ಚಳಕ್ಕೆ ಆಗ್ರಹಿಸಿ ಬ್ಯಾಂಕ್ ನೌಕರರು ಗುರುವಾರ ಮುಷ್ಕರ ನಡೆಸಿದರು. ಇದರಿಂದ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ ಉಂಟಾಯಿತು.
ಬ್ಯಾಂಕ್ ಸಂಘಟನೆಗಳ ಸಂಯುಕ್ತ ವೇದಿಕೆ ಕರೆ ನೀಡಿರುವ ದೇಶವ್ಯಾಪಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಯಿತು. ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್, ಎಸ್‌ಬಿಐ, ಯೂನಿಯನ್ ಬ್ಯಾಂಕ್ ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗವಹಿಸಿದ್ದರು. ಹೀಗಾಗಿ ಈ ಬ್ಯಾಂಕುಗಳು ಕಾರ್ಯನಿರ್ವಹಿಸಲಿಲ್ಲ. ಮುಷ್ಕರ ಶುಕ್ರವಾರ ಕೂಡ ಮುಂದುವರಿಯಲಿದೆ.
ಚಿತ್ರದುರ್ಗದ ಎಸ್‌ಬಿಐ ಬ್ಯಾಂಕಿನ ಮುಂಭಾಗದಲ್ಲಿ ಜಮಾಯಿಸಿದ ಬ್ಯಾಂಕ್ ನೌಕರರು ಸರ್ಕಾರದ ನೀತಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬ್ಯಾಂಕ್ ಖಾಸಗೀಕರಣದಿಂದ ಗ್ರಾಹಕರ ಹಿತಾಸಕ್ತಿಗೆ ಧಕ್ಕೆ ಉಂಟಾಗಲಿದೆ. ಹಣಕಾಸು ಕ್ಷೇತ್ರ ಸಂಪೂರ್ಣ ಬಂಡವಾಳಶಾಹಿ ಹಿಡಿತಕ್ಕೆ ಸಿಲುಕುವ ಅಪಾಯವಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬ್ಯಾಂಕ್ ನೌಕರರ ಮುಷ್ಕರ ಬೆಂಬಲಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ‘ರೈತರು ಮತ್ತು ಬ್ಯಾಂಕ್ ಸಿಬ್ಬಂದಿ ನಡುವೆ ಉತ್ತಮ ಸಂಬಂಧವಿದೆ. ಕೃಷಿಗೆ ಅಗತ್ಯ ಇರುವ ಸಾಲವನ್ನು ಬ್ಯಾಂಕುಗಳಿಂದಲೇ ಪಡೆಯಬೇಕು. ಇಂತಹ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವುದು ಸರಿಯಾದ ಕ್ರಮವಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಹಲವು ಜನವಿರೋಧಿ ನೀತಿ ಜಾರಿಗೆ ತರುತ್ತಿದ್ದಾರೆ. ರೈತರಿಗೆ ಮಾರಕವಾಗುವ ಕೃಷಿ ಕಾಯ್ದೆಗಳನ್ನು ತಿದ್ದುಪಡಿ ಮಾಡಿದರು. ಇದಕ್ಕೆ ಪ್ರಬಲ ಪ್ರತಿರೋಧ ವ್ಯಕ್ತವಾಗಿದ್ದರಿಂದ ಕಾಯ್ದೆಗಳನ್ನು ಹಿಂಪಡೆಯಲಾಗಿದೆ. ಬ್ಯಾಂಕುಗಳನ್ನು ಕೂಡ ಖಾಸಗೀಕರಣ ಮಾಡಲು ರೈತರು ಬಿಡುವುದಿಲ್ಲ. ನಿಮ್ಮ ಹೋರಾಟದೊಂದಿಗೆ ಕೈಜೋಡಿಸುತ್ತೇವೆ’ ಎಂದು ಆಶ್ವಾಸನೆ ನೀಡಿದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ ನೌಕರರ ಸಂಘದ ಮುಖಂಡ ಸಿ.ಅಂಜಿನಪ್ಪ, ಎಸ್.ಶಂಕರಪ್ಪ, ಹರೀಶ್, ಬಾಬುರೆಡ್ಡಿ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಇದ್ದರು.
ಕೋಟ್...
ಸರ್ಕಾರದ ಎಲ್ಲ ವ್ಯವಸ್ಥೆಯನ್ನು ಖಾಸಗೀಕರಣ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಬ್ಯಾಂಕ್ ಖಾಸಗೀಕರಣ ಮಾಡಿದರೆ ಕೃಷಿ ಕ್ಷೇತ್ರಕ್ಕೆ ತೊಂದರೆ ಉಂಟಾಗುತ್ತದೆ. ಈ ಹೋರಾಟವನ್ನು ಸದಾ ಬೆಂಬಲಿಸುತ್ತೇವೆ.
ಟಿ. ನುಲೇನೂರು ಶಂಕರಪ್ಪ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.