ADVERTISEMENT

ಭದ್ರಾ ಮೇಲ್ದಂಡೆ ಯೋಜನೆ | ಪಕ್ಷಗಳಿಗೆ ರಾಜಕೀಯ ಅಸ್ತ್ರ: ಜಗದೀಶ್‌ ಆರೋಪ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2024, 15:13 IST
Last Updated 27 ಅಕ್ಟೋಬರ್ 2024, 15:13 IST
ಜಗದೀಶ್
ಜಗದೀಶ್   

ಸಿರಿಗೆರೆ: ದಶಕಗಳ ಹೋರಾಟದಿಂದ ಭದ್ರಾ ಮೇಲ್ದಂಡೆಯ ಫಲ ದೊರೆತಿದ್ದರೂ ಬಯಲುಸೀಮೆಗೆ ನೀರುಣಿಸುವಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ರಾಜಕಾರಣ ಮಾಡುತ್ತಿವೆ ಎಂದು ಆಮ್‌ ಆದ್ಮಿ ಪಾರ್ಟಿ (ಎಎಪಿ) ಜಿಲ್ಲಾ ಘಟಕದ ಅಧ್ಯಕ್ಷ ಬಿ.ಇ. ಜಗದೀಶ್‌ ಆರೋಪಿಸಿದರು.

ಸಮೀಪದ ಭೀಮಸಮುದ್ರದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು ರಾಜಕಾರಣಿಗಳಿಗೆ ಭದ್ರೆ ರಾಜಕೀಯ ಅಸ್ತ್ರವಾಗಿದೆ. ಅದು ಚುನಾವಣೆಯ ಗಿಮಿಕ್‌ ಆಗಿದೆ. ಯೋಜನೆ ಕುರಿತು ಕೇಂದ್ರ-ರಾಜ್ಯ ಸರ್ಕಾರ ಪರಸ್ಪರ ಆರೋಪದಲ್ಲಿ ತೊಡಗಿದ್ದು, ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.

ಚಿತ್ರದುರ್ಗ ಸೇರಿ ಬಯಲುಸೀಮೆ ಜಿಲ್ಲೆಗಳು ನಿರಂತರ ಬರಗಾಲ ಅನುಭವಿಸುತ್ತಲೇ ಇವೆ. ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಂಡಲ್ಲಿ ಬಯಲುಸೀಮೆ ಪ್ರದೇಶ ಹಸಿರಾಗಲಿದೆ. ಬರಗಾಲ, ಬೆಳೆಹಾನಿ ಹೀಗೆ ವಿವಿಧ ರೀತಿ ಪರಿಹಾರ ನೀಡುವ ಹಣ ಸರ್ಕಾರಕ್ಕೆ ಉಳಿತಾಯವಾಗಲಿದೆ. ಚುನಾವಣೆ ಸಂದರ್ಭ ಮತ ಖರೀದಿಗೆ ಕಡಿವಾಣ ಬೀಳಲಿದೆ ಎಂದು ಹೇಳಿದರು.

ADVERTISEMENT

ಈ ನಿಟ್ಟಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಸಮಗ್ರವಾಗಿ ಶೀಘ್ರ ಪೂರ್ಣಗೊಳ್ಳಬೇಕು. ಪ್ರಸ್ತುತ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿಷಯದಲ್ಲಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಸ್ಪರ ಜನರ ಹಿತಾಸಕ್ತಿ ಕಾಪಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.