ADVERTISEMENT

ಭದ್ರಾ ಮೇಲ್ದಂಡೆ ಯೋಜನೆ: ಚಿತ್ರದುರ್ಗ ಜಿಲ್ಲಾ ಪಂಚಾಯಿತಿಗೆ ರೈತರ ದಿಗ್ಬಂಧನ

ಟ್ರ್ಯಾಕ್ಟರ್ ನೊಂದಿಗೆ ಮುತ್ತಿಗೆ ಹಾಕಿದ ರೈತರು

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2024, 5:41 IST
Last Updated 6 ಮಾರ್ಚ್ 2024, 5:41 IST
   

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದ ₹ 5,300 ಕೋಟಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ತಿಂಗಳಿಂದ ಧರಣಿ ನಡೆಸುತ್ತಿರುವ ರಾಜ್ಯ ರೈತ ಸಂಘದ ಕಾರ್ಯಕರ್ತರು ಬುಧವಾರ ಟ್ರ್ಯಾಕ್ಟರ್ ನೊಂದಿಗೆ ಜಿಲ್ಲಾ ಪಂಚಾಯಿತಿಗೆ ದಿಗ್ಬಂಧನ ವಿಧಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಕಚೇರಿ ಸುತ್ತ ಟ್ರ್ಯಾಕ್ಟರ್ ನಿಲ್ಲಿಸಿದ ರೈತರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪೊಲೀಸರು ದಿಗ್ಬಂಧನ ತೆರವಿಗೆ ಮುಂದಾದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು.

ಬುಧವಾರ ಬೆಳಿಗ್ಗೆ ಟ್ರ್ಯಾಕ್ಟರ್ ಮೂಲಕ ಧಾವಿಸಿದ ರೈತರು ಜಿಲ್ಲಾ ಪಂಚಾಯಿತಿ ಪ್ರವೇಶ ದ್ವಾರ ಹಾಗೂ ಕಾಂಪೌಂಡ್ ಸುತ್ತ ನಿಲುಗಡೆ ಮಾಡಿದರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ದಿಶಾ ಸಭೆಗೆ ಪ್ರವೇಶ ನೀಡುವುದಿಲ್ಲ ಎಂದು ಪಟ್ಟುಹಿಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿದ ಪೊಲೀಸರು, ರೈತರ ಮನವೊಲಿಸಲು ಮುಂದಾದರು. ವಾಹನಗಳಿಗೆ ಅಡ್ಡ ಮಲಗಿದ ರೈತರನ್ನು ಎಳೆದು ಹಾಕಿ ಟ್ರ್ಯಾಕ್ಟರ್ ಗಳನ್ನು ತೆರವುಗೊಳಿಸಿದರು.

ADVERTISEMENT

‘ಭದ್ರಾ ಮೇಲ್ದಂಡೆ ಯೋಜನೆಗೆ ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ. ಕಾಮಗಾರಿಗೆ ವೇಗ ನೀಡಲು ರಾಜ್ಯ ಸರ್ಕಾರ ಕೂಡ ಸ್ಪಂದಿಸುತ್ತಿಲ್ಲ. ಮುಂಬರುವ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಗೆ ತಕ್ಕ ಪಾಠ ಕಲಿಸೋಣ’ ಎಂದು ರೈತ ಸಂಘದ ಕಾರ್ಯಾಧ್ಯಕ್ಷ ಈಚಘಟ್ಟ ಸಿದ್ದವೀರಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.