ADVERTISEMENT

ಸಿಹಿನೀರು ಹೊಂಡಕ್ಕೆ ಬಾಗೀನ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 10:24 IST
Last Updated 20 ಅಕ್ಟೋಬರ್ 2019, 10:24 IST
ಚಿತ್ರದುರ್ಗದ ಬುರುಜನಹಟ್ಟಿಯಲ್ಲಿರುವ ಸಿಹಿನೀರು ಹೊಂಡಕ್ಕೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಭಾನುವಾರ ಬಾಗೀನ ಅರ್ಪಿಸಿದರು.
ಚಿತ್ರದುರ್ಗದ ಬುರುಜನಹಟ್ಟಿಯಲ್ಲಿರುವ ಸಿಹಿನೀರು ಹೊಂಡಕ್ಕೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಭಾನುವಾರ ಬಾಗೀನ ಅರ್ಪಿಸಿದರು.   

ಚಿತ್ರದುರ್ಗ: ಇತ್ತೀಚೆಗೆ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಭರ್ಗಿಯಾಗಿ ಕೋಡಿ ಬಿದ್ದಿರುವ ಬುರುಜನಹಟ್ಟಿಯ ಸಿಹಿನೀರು ಹೊಂಡಕ್ಕೆ ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ಭಾನುವಾರ ಬಾಗೀನ ಅರ್ಪಿಸಿದರು.

ಸತತ ಬರ ಪರಿಸ್ಥಿತಿಯಿಂದ ಕಂಗೆಟ್ಟಿದ್ದ ಜನರು ವರ್ಷಧಾರೆಯನ್ನು ಕಂಡು ಹರ್ಷಗೊಂಡಿದ್ದಾರೆ. ಪಾಳೆಗಾರರ ಕಾಲದಲ್ಲಿ ನಿರ್ಮಾಣವಾದ ಸಿಹಿನೀರು ಹೊಂಡ ಬಹುದಿನಗಳ ವರೆಗೆ ಕುಡಿಯುವ ನೀರಿಗೆ ಆಸರೆಯಾಗಿತ್ತು. ಇತ್ತೀಚೆಗೆ ಈ ನೀರನ್ನು ಜನರು ಮನೆಬಳಕೆ ಮಾತ್ರ ಉಪಯೋಗಿಸುತ್ತಿದ್ದಾರೆ.

ಏಳು ಸುತ್ತಿನ ಕೋಟೆಯಲ್ಲಿ ಸುರಿದ ಮಳೆಯು ಹೊಂಡ, ಬಾವಿ ಹಾಗೂ ಕಲ್ಯಾಣಿಗಳನ್ನು ಸೇರುತ್ತದೆ. ನೀರು ಹರಿದು ಹೊಂಡಗಳನ್ನು ಸೇರಲು ಸರಿಯಾದ ವ್ಯವಸ್ಥೆಯನ್ನು ಪಾಳೆಗಾರರು ಕಲ್ಪಿಸಿದ್ದಾರೆ. ಕೋಟೆಯಲ್ಲಿ ಬಿದ್ದ ನೀರು ಗೋಪಾಲಸ್ವಾಮಿ ಹೊಂಡಕ್ಕೆ ಹರಿದು ಬರುತ್ತದೆ. ಅಲ್ಲಿಂದ ಅಕ್ಕ–ತಂಗಿಯರ ಹೊಂಡವನ್ನು ಸೇರುತ್ತದೆ. ಎರಡು ತುಂಬಿದರೆ ತಣ್ಣೀರ ದೋಣಿಯ ಮೂಲಕ ಸಿರಿನೀರು ಹೊಂಡ ತಲುಪುತ್ತದೆ.

ADVERTISEMENT

ಶಾಸಕ ತಿಪ್ಪಾರೆಡ್ಡಿ ಮಾತನಾಡಿ, ‘ಹಿಂಗಾರು ಮಳೆ ಉತ್ತಮವಾಗಿ ಸುರಿದಿದ್ದರಿಂದ ಕರೆ–ಕಟ್ಟೆಗಳಿಗೆ ನೀರು ಹರಿದು ಬಂದಿದೆ. ಸಿಹಿ ನೀರು ಹೊಂಡ ಕೋಡಿ ಬಿದ್ದಿರುವುದು ಸಂತಸದ ಸಂಗತಿ. ಈ ನೀರು ಸಂತೆಹೊಂಡವನ್ನು ಸೇರಿ, ಮಲ್ಲಾಪುರ ಕೆರೆ ತಲುಪುತ್ತದೆ. ನಿತ್ಯ ಮಳೆ ಬೀಳುತ್ತಿದ್ದರೂ ವಾರ್ಷಿಕ ವಾಡಿಕೆ ಮಳೆ ಆಗಿಲ್ಲ’ ಎಂದು ಹೇಳಿದರು.

‘ಕಲ್ಲಹಳ್ಳಿ ಕೆರೆ ಕೂಡ ಕೋಡಿ ಬಿದ್ದಿದೆ. ಕೆಲವೇ ದಿನಗಳಲ್ಲಿ ಈ ಕರೆಗೂ ಬಾಗೀನ ಅರ್ಪಿಸಲು ತೀರ್ಮಾನಿಸಲಾಗಿದೆ. ಕಾತ್ರಾಳ್‌, ಜೆ.ಎನ್‌.ಕೋಟೆ ಕೆರೆ ಸೇರಿ ತಾಲ್ಲೂಕಿನ ಹಲವು ಕೆರೆಗಳಿಗೆ ನೀರು ಹರಿದು ಬಂದಿದೆ. ಬೇಸಿಗೆಯಲ್ಲಿ ನೀರಿನ ತಾ‍ಪತ್ರಯ ಕಡಿಮೆಯಾಗುವ ಸಾಧ್ಯತೆ ಇದೆ’ ಎಂದು ಹೇಳಿದರು.

ನಗರಸಭೆ ಸದಸ್ಯರಾದ ಅನುರಾಧ ರವಿಕುಮಾರ್, ಮಂಜುಳಾ, ಹರೀಶ್, ಶ್ವೇತಾ, ಅನುಪಮ, ಬಿಜೆಪಿ ಮುಖಂಡರಾದ ಎ.ರೇಖಾ, ಗೋಪಿನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.