ADVERTISEMENT

ಕಾರ್ಯಾಂಗದ ವೈಫಲ್ಯ ಮುಚ್ಚಲು ಒಳಮೀಸಲು: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ

ಜಿ.ಬಿ.ನಾಗರಾಜ್
Published 3 ಸೆಪ್ಟೆಂಬರ್ 2020, 20:36 IST
Last Updated 3 ಸೆಪ್ಟೆಂಬರ್ 2020, 20:36 IST
ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ   

ಪರಿಶಿಷ್ಟ ಸಮುದಾಯದ ವಿವಿಧ ಜಾತಿಗಳಿಗೆ ಪ್ರತ್ಯೇಕ ಮೀಸಲಾತಿ ನಿಗದಿ ಮಾಡಿದರೆ ಅದು ಜಾತಿಗಳ ನಡುವೆ ಕಚ್ಚಾಟಕ್ಕೆ ಕಾರಣವಾಗಬಹುದು ಎಂಬ ಕಳವಳವನ್ನು ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್‌ ಅಭಿಪ್ರಾಯದ ಬಳಿಕವೂ ಒಳಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ?

ಇದು ವಿರೋಧವಲ್ಲ, ತಾರ್ಕಿಕ ಪ್ರಶ್ನೆಯನ್ನು ಸಮಾಜದ ಮುಂದಿಟ್ಟಿದ್ದೇವೆ. ಸಂವಿಧಾನದ ಆಶಯಕ್ಕೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್‌ 2005ರಲ್ಲಿ ಒಳಮೀಸಲಾತಿಯನ್ನು ತಿರಸ್ಕರಿಸಿದೆ. ಈ ತೀರ್ಪು ಮರುಪರಿಶೀಲನೆಗೆ ಒಳಪಡಿಸುವ ಅಭಿಪ್ರಾಯ ಈಗ ವ್ಯಕ್ತವಾಗಿದೆ. ಈ ನಿಲುವುಗಳು ಸಮಾಜದಲ್ಲಿ ಗೊಂದಲ ಸೃಷ್ಟಿಸುತ್ತಿವೆ.ಸಂವಿಧಾನದ ಆಶಯಗಳ ಈಡೇರಿಕೆಗೆ ಕಾರ್ಯಾಂಗ ಹಾಗೂ ಶಾಸಕಾಂಗ ಕೆಲಸ ಮಾಡಬೇಕಿತ್ತು. ಕಾರ್ಯಾಂಗದ ವೈಫಲ್ಯ ಮುಚ್ಚಿಕೊಳ್ಳಲು ಒಳಮೀಸಲಾತಿ ಜಾರಿಗೊಳಿಸುವುದು ಎಷ್ಟು ಸರಿ? ಇದರಿಂದ ಅಂಬೇಡ್ಕರ್‌ ಆಶಯಗಳಿಗೆ ಧಕ್ಕೆಯುಂಟಾಗುತ್ತದೆ.

ADVERTISEMENT

ಭೋವಿ ಮತ್ತು ಲಂಬಾಣಿ ಸೇರಿ ಸ್ಪೃಶ್ಯ ಜಾತಿಗಳು ಮೀಸಲಾತಿಯ ಬಹುಪಾಲನ್ನು ಕಬಳಿಸಿದ ಆರೋಪ ಇದೆಯಲ್ಲ?

2009ರ ವಿಧಾನಸಭಾ ಚುನಾವಣೆಯ ಬಳಿಕ ಭೋವಿ ಮತ್ತು ಲಂಬಾಣಿ ಸಮುದಾಯದ ಶಾಸಕರ ಸಂಖ್ಯೆ ಹೆಚ್ಚಾಯಿತು. ಅದೃಷ್ಟವಶಾತ್‌ ಇದೊಂದು ಯೋಗ. ಅದಕ್ಕೂ ಮುನ್ನ ಈ ಸಮುದಾಯದ ಜನಪ್ರತಿನಿಧಿಗಳ ಸಂಖ್ಯೆ ತೀರಾ ಕಡಿಮೆ ಇತ್ತು. ಶಿಕ್ಷಣ ಪಡೆದು ಪ್ರತಿಭಾವಂತರಾದ ಕೆಲವರು ಸರ್ಕಾರದ ಉನ್ನತ ಹುದ್ದೆಗಳಿಗೆ ಏರಿರಬಹುದು. ಈ ಮಾನದಂಡ ಆಧರಿಸಿ ನಿರ್ಧಾರಕ್ಕೆ ಬರುವುದು ತಪ್ಪು.ಭೋವಿ ಸಮುದಾಯವು ನಿರೀಕ್ಷೆಗಿಂತ ಕಡಿಮೆ ಪ್ರಗತಿ ಸಾಧಿಸಿದೆ. ಮೀಸಲಾತಿಯ ಬಹುಪಾಲು ಪಡೆದಿದ್ದರೆ ಸಮುದಾಯ ಹಿಂದುಳಿಯಲು ಸಾಧ್ಯವೇ ಇರಲಿಲ್ಲ.

ಒಳಮೀಸಲಾತಿ ಕಲ್ಪಿಸಿದರೆ ಮೀಸಲಾತಿ ವ್ಯವಸ್ಥೆಯೇ ರದ್ದಾಗುತ್ತದೆ ಎಂಬ ಸ್ಪೃಶ್ಯ ಜಾತಿಗಳ ಆತಂಕಕ್ಕೆ ಏನಾದರೂ ಪುರಾವೆ ಇದೆಯೇ?

ಜಾತ್ಯತೀತ ರಾಷ್ಟ್ರವಾದರೂ ಜಾತಿ ವ್ಯವಸ್ಥೆ ಪ್ರಬಲವಾಗಿದೆ. ಒಳಮೀಸಲಾತಿ ನೆಪದಲ್ಲಿ ಜಾತಿ ವ್ಯವಸ್ಥೆ ಇನ್ನಷ್ಟು ಗಟ್ಟಿಯಾದರೆ ಮತ್ತೊಂದು ಅಪಾಯ ಎದುರಾಗುತ್ತದೆ. ವರ್ಣಾಶ್ರಮ ವ್ಯವಸ್ಥೆ, ಶೋಷಣೆ ಮತ್ತೆ ಶುರುವಾಗುವುದರಲ್ಲಿ ಅನುಮಾನವಿಲ್ಲ.ಎಡಗೈ, ಬಲಗೈ, ಸ್ಪೃಶ್ಯ ಹಾಗೂ ಅಲೆಮಾರಿ ಜಾತಿಗಳಿಗೆ ಪ್ರತ್ಯೇಕವಾಗಿ ಮೀಸಲಾತಿ ನಿಗದಿ ಮಾಡಿದರೆ ಆಂತರಿಕ ಕಚ್ಚಾಟ ಶುರುವಾಗುವ ಸಾಧ್ಯತೆ ಇದೆ. ಒಳಮೀಸಲಾತಿ ಕಾರಣಕ್ಕೆ ಜಾತಿ ಸಂಘರ್ಷ ಏರ್ಪಟ್ಟು ಸೌಲಭ್ಯವೇ ಕೈತಪ್ಪುವ ಅಪಾಯವಿದೆ.

ಅಸ್ಪೃಶ್ಯ ಜಾತಿಗಳಿಗೆ ಉಂಟಾಗಿರುವ ಅನ್ಯಾಯಕ್ಕೆ ಒಳಮೀಸಲಾತಿಯಲ್ಲಿ ಪರಿಹಾರವಿದೆ ಎಂಬುದನ್ನು ಸುಪ್ರೀಂ ಕೋರ್ಟ್‌ ಹೇಳಿದೆ. ಮೀಸಲಾತಿ ವರ್ಗೀಕರಣ ವಿರೋಧಿಸುವುದಾದರೆ ಯಾವ ಪರಿಹಾರವನ್ನು ಸೂಚಿಸುತ್ತೀರಿ?

ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದರೆ ಮಾತ್ರ ಪರಿಹಾರ ಸಿಗಲು ಸಾಧ್ಯವಿದೆ. ಮೀಸಲಾತಿ ಅನುಭವಿಸುವ ಜಾತಿಗಳಲ್ಲಿ ಒಗ್ಗಟ್ಟು ಮೂಡಬೇಕು. ಒಳಮೀಸಲಾತಿ ರಾಜಕೀಯ ಉದ್ದೇಶದ ಒಡೆದಾಳುವ ನೀತಿಯ ಭಾಗವಾಗಿದ್ದರೆ ಅಸ್ಪೃಶ್ಯ ಜಾತಿಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗುತ್ತದೆ.ಒಳಮೀಸಲಾತಿ ಹಿಂದುಳಿದ ವರ್ಗಕ್ಕೂ ವಿಸ್ತರಣೆ ಆಗುತ್ತದೆಯೇ ಎಂಬುದರ ಬಗ್ಗೆ ಸ್ಪಷ್ಟವಾಗಬೇಕು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಮೀಸಲಾತಿ ತಲುಪಬೇಕು. ವಿಶೇಷ ಅನುದಾನ, ‍ಪ್ಯಾಕೇಜ್‌ ರೂಪಿಸಿದರೆ ಅನ್ಯಾಯ ಸರಿಪಡಿಸಲು ಸಾಧ್ಯವಿದೆ.

‘ಕೆನೆಪದರ ಪರಿಕಲ್ಪನೆ’ ಅನುಷ್ಠಾನಗೊಂಡರೆ ಮೀಸಲಾತಿ ಪಡೆದವರು ಮತ್ತೊಮ್ಮೆ ಸೌಲಭ್ಯ ಬಳಸಿಕೊಳ್ಳುವುದಕ್ಕೆ ಕಡಿವಾಣ ಬೀಳುತ್ತದೆಯಲ್ಲವೇ?

ತಂದೆಯ ಆಸ್ತಿಯಿಂದ ಮಗ ಉದ್ಧಾರ ಆಗಿರುವುದಕ್ಕೆ ಬೆರಳೆಣಿಕೆಯ ನಿದರ್ಶನಗಳು ಸಿಗುತ್ತವೆ. ಶಕ್ತಿ ಮೀರಿ ಸಂಪಾದನೆ ಮಾಡಿದಂತಹ ತಂದೆ ಮಾತ್ರ ಮಗನಿಗೆ ಏನನ್ನಾದರೂ ಬಿಟ್ಟುಹೋಗಬಹುದು. ಅಶಕ್ತಿ ಇರುವ ಯಾವುದೇ ವ್ಯಕ್ತಿ ಮೀಸಲಾತಿ ವ್ಯವಸ್ಥೆಗೆ ಒಳಪಡಬೇಕು. ಮೀಸಲಾತಿ ಸೌಲಭ್ಯ ಪಡೆದು ಶಾಸಕ, ಸಂಸದರಾದವರು ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಲು ಸಾಧ್ಯವಿದೆಯೇ? ಅಂತಹ ವಾತಾವರಣ ನಿರ್ಮಾಣವಾಗುವವರೆಗೂ ಮೀಸಲಾತಿ ಸೌಲಭ್ಯ ಎಲ್ಲರಿಗೂ ಸಿಗಬೇಕು.

ಸದಾಶಿವ ಆಯೋಗದ ವರದಿ ಸದನದಲ್ಲಿ ಮಂಡನೆಯಾಗದಂತೆ ಹಾಗೂ ಶಿಫಾರಸುಗಳು ಜಾರಿಯಾಗದಂತೆ ಪರಿಶಿಷ್ಟ ಜಾತಿಯ ಸ್ಪೃಶ್ಯ ಜಾತಿಗಳು ಲಾಬಿ ಮಾಡಿರುವುದು ಸತ್ಯವೇ?

ಸದಾಶಿವ ಆಯೋಗದ ವರದಿಯನ್ನು ಗೌಪ್ಯವಾಗಿಟ್ಟು ಅನುಷ್ಠಾನಕ್ಕೆ ತರಲು ನಡೆಸುತ್ತಿರುವ ಪ್ರಯತ್ನದ ಹಿಂದಿನ
ಉದ್ದೇಶಗಳ ಬಗ್ಗೆ ಅನುಮಾನಗಳಿವೆ. 101 ಜಾತಿಗಳ ಹಣೆಬರಹ ನಿರ್ಧರಿಸುವ ವರದಿಯನ್ನು ಬಹಿರಂಗ ಚರ್ಚೆಗೆ ಒಳಪಡಿಸದೇ ಅನುಷ್ಠಾನಗೊಳಿಸುವುದು ತಪ್ಪು. ಭೋವಿ, ಲಂಬಾಣಿ, ಕೊರಚ, ಕೊರಮ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬ ಶಂಕೆ ವ್ಯಕ್ತವಾಗಿದೆ. ಮೊದಲು ವರದಿಯನ್ನು ಬಹಿರಂಗಗೊಳಿಸಿ, ಅನುಮಾನಗಳನ್ನು ನಿವಾರಿಸಿ. ಆ ಬಳಿಕ ತೀರ್ಮಾನವಾಗಲಿ.

ಒಳಮೀಸಲಾತಿ ನೀಡದೇ ಇದ್ದರೆ ಸಮಾನತೆಯ ಹಕ್ಕು ಕಸಿದುಕೊಂಡಂತಾಗುತ್ತದೆ ಎಂಬ ಅಭಿಪ್ರಾಯವನ್ನು ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದೆ. ಒಳಮೀಸಲಾತಿ ವಿರೋಧಿಸಿದರೆ ಸಮಾನತೆಯ ಆಶಯವನ್ನು ವಿರೋಧಿಸಿದಂತೆ ಆಗುವುದಿಲ್ಲವೇ?

ಒಳಮೀಸಲಾತಿಯಿಂದ ಸಮಾನತೆ ಸಿಗುತ್ತದೆ ಎಂಬುದಕ್ಕೆ ಬದಲಾಗಿ ಸಮಾನತೆ ಕಲ್ಪಿಸಲು ವ್ಯವಸ್ಥಿತವಾದ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಪ್ರತಿ ಕುಟುಂಬ ಆರ್ಥಿಕ ಸ್ವಾವಲಂಬನೆ ಪಡೆಯುವ ವಾತಾವರಣ ರೂಪಿಸಬೇಕು. ಪ್ರತಿ ಜಾತಿಯ ಅರ್ಹರಿಗೂ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಂತಹ ವ್ಯವಸ್ಥೆ ನಿರ್ಮಾಣಗೊಳ್ಳಬೇಕು. ಒಳಮೀಸಲಾತಿಯಂತಹ ತಾತ್ಕಾಲಿಕ ಪರಿಹಾರಗಳಿಂದ ಸಾಮಾಜಿಕ ನ್ಯಾಯ ಸಿಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.