ಚಿಕ್ಕಜಾಜೂರು: ‘ಶಾಸಕ ಎಂ. ಚಂದ್ರಪ್ಪ ಅವರ ದೂರ ದೃಷ್ಠಿಯಿಂದ ಕ್ಷೇತ್ರದ ಪ್ರತಿಯೊಂದು ಹಳ್ಳಿ, ಪಟ್ಟಣಗಳು ಅಭಿವೃದ್ಧಿ ಪಥದತ್ತ ಸಾಗುತ್ತಿವೆ’ ಎಂದು ಚಿತ್ರದುರ್ಗ ಮಾದಾರ ಚನ್ನಯ್ಯ ಗುರು ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ಹಿರೇಕಂದವಾಡಿ ಗ್ರಾಮದಲ್ಲಿ ಭಾನುವಾರ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
‘ಜನಪ್ರತಿನಿಧಿಯಾದವರಿಗೆ ಇಚ್ಛಾಶಕ್ತಿ ಇರಬೇಕು. ಆಗ ಯಾವುದೇ ಕ್ಷೇತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಗ್ರಾಮದಲ್ಲಿ ಸಿಸಿ ರಸ್ತೆ, ಬಸ್ ತಂಗುದಾಣ, ಕೆರೆ ಅಭಿವೃದ್ಧಿ ಮೊದಲಾದ ಕಾಮಗಾರಿಗಳಿಗೆ ಕೋಟಿ ಕೋಟಿ ಹಣವನ್ನು ಅನುದಾನ ನೀಡುವ ಮೂಲಕ ಜಿಲ್ಲೆಯಲ್ಲಿ ಗ್ರಾಮವನ್ನು ಗುರುತಿಸುವ ಕಾರ್ಯವನ್ನು ಮಾಡಿದ್ದಾರೆ. ಇಂತಹವರ ಕೆಲಸಗಳಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು’ ಎಂದು ಸ್ವಾಮೀಜಿ ತಿಳಿಸಿದರು.
₹ 19.61 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ:
ಗ್ರಾಮದ ಬೆಟ್ಟದ ಇಳಿಜಾರು ಪ್ರದೇಶವನ್ನು ಸಮ ಮಾಡಿ ರಸ್ತೆ ನಿರ್ಮಾಣ, ಸಿಸಿ ರಸ್ತೆ ನಿರ್ಮಾಣ, ಬಿ. ದುರ್ಗ ಗ್ರಾಮಕ್ಕೆ ಸಂಪರ್ಕ ರಸ್ತೆ, ಗ್ರಾಮದ ಕೆರೆಬೊಮ್ಮಜ್ಜಿ ಹಳ್ಳಕ್ಕೆ ಚೆಕ್‌ಡ್ಯಾಂ, ದೊಡ್ಡ ಕೆರೆ ಹಾಗೂ ಗ್ರಾಮದ ಜಿನುಗು ಕೆರೆ ಅಭಿವೃದ್ಧಿ ಸೇರಿದಂತೆ ಸುಮಾರು ₹ 19.61 ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಯಿತು.
‘ನನ್ನ ಅಧಿಕಾರ ಅವಧಿ ಮುಗಿಯುವ ವೇಳೆಗೆ ಎಲ್ಲಾ ಕಾಮಗಾರಿಗಳನ್ನು ಮುಗಿಸುತ್ತೇನೆ’ ಎಂದು ಶಾಸಕ ಎಂ. ಚಂದ್ರಪ್ಪ ಹೇಳಿದರು.
ಮುಖಂಡರಾದ ಡಿ.ಟಿ. ರಮೇಶ್, ಕರಿಯಪ್ಪ, ದೇವರಾಜ್, ಬಿ.ಆರ್. ಈಶ್ವರಪ್ಪ, ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು, ವಿವಿಧ ಇಲಾಖೆಗಳ ಎಂಜಿನಿಯರ್‌ಗಳಾದ ದಯಾನಂದ್, ನಾಗರಾಜ್, ತೇಜಸ್, ವಿಶ್ವಾಸ್, ಬಿ.ಎನ್. ಪೊಲೀಸ್ ಪಟೇಲ್ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.